ಹಾವೇರಿ

ಬಿಜೆಪಿ ಮತ್ತೆ ಅಧಿಕಾರಕ್ಕೆ: ಬಳ್ಳಾರಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 2
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರೀರಕ್ಷೆಯಿಂದಾಗಿ ಬಿಜೆಪಿ ಮತ್ತೆ ಗೆಲ್ಲಲಿದ್ದು, ಬ್ಯಾಡಗಿ ಮತಕ್ಷೇತ್ರದಲ್ಲಿ ತಾವು 10 ಸಾವಿರ ಮತಗಳಿಂದ ಜಯಿಸುವುದಾಗಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಗುರುವಾರ ರೋಡ್ ಶೋ ಮೂಲಕ ಚುನಾವಣೆ ಪ್ರಚಾರ ಮಾಡಿ ಮಾತನಾಡಿದ ಅವರು, ಮತದಾರರ ನಂಬಿಕೆಗೆ ದ್ರೋಹ ಮಾಡುವುದಿಲ್ಲ. ವಿಶ್ವಾಸವಿಟ್ಟು ಗೆಲ್ಲಿಸಿ. ಗುಜರಾತ್ನಲ್ಲಿ ನರೇಂದ್ರ ಮೋದಿ ಮಾದರಿಯಲ್ಲಿ ಕರ್ನಾಟಕವನ್ನೂ ಅಭಿವೃದ್ಧಿ ಮಾಡುವ ಸಂಕಲ್ಪ ಕೈಗೊಂಡಿದ್ದೇವೆ ಎಂದು ತಿಳಿಸಿ, ಮತದಾರರ ಸಹಕಾರ ಕೋರಿದರು.
ಯಾವುದೇ ಸಮೀಕ್ಷೆಗಳು ಚುನಾವಣೆ ಫಲಿತಾಂಶ ನಿರ್ಧರಿಸಲು ಸಾಧ್ಯವಿಲ್ಲ. ತನ್ನ ಅವಧಿಯಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಗರಣಗಳನ್ನಷ್ಟೇ ಮಾಡಿದೆ. ಸುಳ್ಳು ಸಮೀಕ್ಷೆಗಳ ಮೂಲಕ ಮತದಾರರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಭಿನ್ನಮತದಿಂದ ತತ್ತರಿಸಿರುವ ಕಾಂಗ್ರೆಸ್ ಸೋಲಿನ ಭೀತಿಯಿಂದ ಇಂಥ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಮಾದಲ ಬಾರಿಗೆ ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಬಿಜೆಪಿ ಸರ್ಕಾರ ಸಂಕಷ್ಟದಲ್ಲಿರುವ ಅನ್ನದಾತನ ಕೈ ಹಿಡಿದಿದೆ. ಆದರೆ, ಕೇಂದ್ರ ಸರ್ಕಾರದ ತಪ್ಪು ಕೃಷಿ ನೀತಿಯಿಂದಾಗಿ ರೈತರು ಪರಿತಪಿಸುವಂತಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 17 ಲಕ್ಷ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್, ಸುವರ್ಣಭೂಮಿ ಯೋಜನೆಯಡಿ ಪ್ರತಿ ರೈತರಿಗೆ ರು. 10 ಸಾವಿರ ಸಹಾಯಧನ ಯೋಜನೆಗಳನ್ನು ಜಾರಿಗೊಳಿಸಿದೆ. ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿ. ಬಿಜೆಪಿಯಲ್ಲಿದ್ದು ಸಾಕಷ್ಟು ಲಾಭ ಪಡೆದ ಕೆಲವರು ಈಗ ಅಧಿಕಾರದ ಆಸೆಯಿಂದ ಪಕ್ಷ ತೊರೆದಿದ್ದಾರೆ. ಅಂಥವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ಚಂದ್ರಪ್ಪ ಮುಚ್ಚಟ್ಟಿ, ಶಂಕರಗೌಡ ಪಾಟೀಲ, ಸಿ.ಆರ್. ಆಲದಗೇರಿ, ವೀರಭದ್ರಪ್ಪ ಬಳ್ಳಾರಿ, ರಾಜಣ್ಣ ಹೊಂಬರಡಿ, ಮಹಾದೇವಪ್ಪ ಹಾವನೂರು, ಬಸವಂತಪ್ಪ ಬನ್ನಿಹಟ್ಟಿ, ಪುಟ್ಟಪ್ಪ ಮ್ಯಾಗೇರಿ, ರುದ್ರೇಶ ಚನ್ನಗೌಡ್ರ, ಬಸವಂತಪ್ಪ ಬ್ಯಾಟಪ್ಪನವರ, ರೋಹಿತ್ ರಾಯ್ಕರ್ ಇದ್ದರು.

ಸಮೀಕ್ಷೆ ಫಲಿತಾಂಶ ನಿರ್ಧರಿಸಲು ಸಾಧ್ಯವಿಲ್ಲ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 2
ಯಾವುದೇ ಸಮೀಕ್ಷೆ ಚುನಾವಣೆ ಫಲಿತಾಂಶ ನಿರ್ಧರಿಸಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳೇ ಗೆಲವಿಗೆ ಶ್ರೀರಕ್ಷೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ಹೇಳಿದರು.
ಗುರುವಾರ ಬ್ಯಾಡಗಿ ಕ್ಷೇತ್ರದ ದೇವಗಿರಿ ಗ್ರಾಮದಲ್ಲಿ ಮತ ಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಭಿವೃದ್ಧಿ ಕೆಲಸ ಮಾಡದೇ ಕೇವಲ ಹಗರಣಗಳಲ್ಲಿ ತೊಡಗಿರುವ ಕಾಂಗ್ರೆಸ್ ಮುಖಂಡರು ಸುಳ್ಳು ಸಮೀಕ್ಷೆಗಳ ಮೂಲಕ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭಿನ್ನಮತದ ರೋಗಕ್ಕೆ ತುತ್ತಾಗಿರುವ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ. ಇಂತಹ ಗೊಡ್ಡು ಸಮೀಕ್ಷೆ ಪ್ರಕಟಿಸುವುದರಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಗೆಳೆಯಂದಿರು ಅಥೈಸಿಕೊಳ್ಳಲಿ ಎಂದರು.
ಕೆಜೆಪಿಗೆ ಕ್ಷೇತ್ರದಲ್ಲಿ ಅಭೂತಪೂರ್ವ ಒಲವು ವ್ಯಕ್ತವಾಗಿದೆ. ಕ್ಷೇತ್ರದಲ್ಲಿ ಕೆಜೆಪಿ ಪರವಾದ ಅಲೆಯಿದೆ. ಮಾಜಿ ಸಿಎಂ ಯಡಿಯೂರಪ್ಪ ಅಭಿವೃದ್ಧಿ ಸಾಧನೆ ಮೆಚ್ಚಿ ಮತದಾರರು ಕೆಜೆಪಿ ಬೆಂಬಲಿಸಲಿದ್ದಾರೆ ಎಂದ ಅವರು, ಹಿಂದಿನ ಯಾವುದೇ ಚುನಾವಣೆಯಲ್ಲಿ ಸೋತ ಉದಾಹರಣೆಯಿಲ್ಲ. ಪ್ರಸಕ್ತ ಚುನಾವಣೆಯಲ್ಲಿಯೂ ಸುಮಾರು 10 ಸಾವಿರ ಮತಗಳ ಅಂತರದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಾಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಯಡಿಯೂರಪ್ಪ ಬ್ಯಾಡಗಿ ಮತಕ್ಷೇತ್ರದ ಜನತೆಗೆ ನೀಡಿದ ಬಹುತೇಕ ಕೊಡುಗೆಗಳೆ ಕೆಜೆಪಿ ಗೆಲವಿಗೆ ಶ್ರೀರಕ್ಷೆ ಎಂದರು.  ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮುಖಂಡರಾದ ಸುರೇಶ ಯತ್ನಳ್ಳಿ, ಸುಲೇಮಾನವರ, ಜಗದೀಶ ಕಣಗಲಬಾವಿ, ನಿಂಗನಗೌಡ ಪಾಟೀಲ, ಎಂ.ಎಂ. ಪಾಟೀಲ, ವೀರಭದ್ರಪ್ಪ ಗೊಡಚಿ, ಮಹಾಲಿಂಗಪ್ಪ ಗೂಳೇರ, ರಾಮಣ್ಣ ಕೋಡಿಹಳ್ಳಿ, ಸುರೇಶ ಆಸಾದಿ, ರವಿ ಪೂಜಾರ ಇನ್ನಿತರರು ಇದ್ದರು.

ಬಿ.ಸಿ. ಪಾಟೀಲ ಹ್ಯಾಟ್ರಿಕ್ ಸಾಧನೆ: ಈಶ್ವರ
ಹಿರೇಕೆರೂರು: ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರವಾಸದ ನಂತರ ಕಾಂಗ್ರೆಸ್ ಗಾಳಿ ವ್ಯಾಪಕವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ. ಪಾಟೀಲರು 20 ಸಾವಿರ ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಪರಿಶಿಷ್ಟ ಪಂಗಡಗಳ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡವಾದ ವಾಲ್ಮೀಕಿ ನಾಯಕ ಸಮಾಜದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಅವರಿಬ್ಬರಿಗೂ ಗೆಲ್ಲುವ ಅವಕಾಶ ಕಡಿಮೆ ಇರುವುದರಿಂದ ಸಮಾಜದ ಮತಗಳು ವಿನಾಕಾರಣ ಹಾಳಾಗದೇ ಜನಾಂಗದ ಆಶಾಕಿರಣ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು ಎಂದು ಮನವಿ ಮಾಡಿಕೊಂಡರು. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮಾಜ ಅತಿದೊಡ್ಡದಾಗಿದೆ. ಈ ಬಾರಿ ಮಾಜಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿಸಲು ಜನಾಂಗದ ಮುಖಂಡರೆಲ್ಲ ತೀರ್ಮಾನ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲ 6 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದರು. ಶಾಸಕ ಬಿ.ಸಿ. ಪಾಟೀಲ, ಜಿ.ಟಿ. ಚಂದ್ರಶೇಖರಪ್ಪ, ಸತೀಶ ತಳವಾರ, ಬಸವರಾಜ ತಳವಾರ, ಪ್ರಕಾಶ ಹಾದಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.