ಹಾವೇರಿ

ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

Published On :

ಕೊಪ್ಪಳ: ಹಣಕ್ಕಾಗಿ ಪೀಡಿಸಿ, ಪತ್ನಿಯನ್ನೇ ಸುಟ್ಟು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಡಿ. ಬಬಲಾದಿ ತೀರ್ಪು ನೀಡಿದ್ದಾರೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾಬುವಲಿ  ಜನಿಮಿಯಾ ಕರಡಿ ಎಂಬಾತನೆ ಹಣಕ್ಕಾಗಿ ತನ್ನ ಪತ್ನಿ ಚಾಂದಬಿಯನ್ನು ಸೀಮೆ ಎಣ್ಣೆ ಹಾಕಿ ಸುಟ್ಟು ಕೊಲೆಗೈದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ. ಹನುಮಸಾಗರ ಸಮೀಪದ ಜನತಾ ಕಾಲೋನಿಯಲ್ಲಿ ವಾಸಿಸುತ್ತಿದ್ದ ಬಾಬುವಲಿ 2012ರ ಜೂನ್ 11ರಂದು ತನ್ನ ಪತ್ನಿಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದಾಗ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದಾನೆ. ಸುಟ್ಟ ಗಾಯಗಳಿಂದ ತೀವ್ರ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ ಚಾಂದ್‌ಬಿ ಮೃತಪಟ್ಟಿದ್ದಳು. ಈ ಕುರಿತಂತೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಡಿ. ಬಬಲಾದಿ ಅವರು, ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದರಿಂದ ಆತನಿಗೆ ಭಾ.ದ.ಸ. ಕಲಂ 302ರ ಅಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಕುಷ್ಟಗಿ ಪಿಎಸ್‌ಐ ನಾರಾಯಣ ದಂಡಿನ ಹಾಗೂ ಸಿಪಿಐ ನೀಲಪ್ಪ ಎಂ. ಓಲೇಕಾರ ಪ್ರಕರಣದ ತನಿಖೆ ಕೈಗೊಂಡಿದ್ದರು. ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಸರ್ಕಾರದ ಪರ ವಾದಿಸಿದ್ದರು.

ಮತಯಂತ್ರ ಪೂಜೆಗೆ ನಿರ್ಬಂಧ
ಕೊಪ್ಪಳ: ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಯಾವುದೇ ಬಗೆಯ ಪೂಜೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಮತದಾನ ಪ್ರಾರಂಭಕ್ಕೂ ಮುನ್ನ ಮತಯಂತ್ರಗಳಿಗೆ ಪೂಜೆ ನೆರವೇರಿಸುವುದು ಈ ಹಿಂದಿನ ಚುನಾವಣೆಗಳಲ್ಲಿ ಕಂಡುಬಂದಿದ್ದು, ಇಂಥ ವಿಧಿ ವಿಧಾನಗಳಿಗೆ ಚುನಾವಣೆ ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ಈ ಬಾರಿಯ ಮತದಾನ ಸಂದರ್ಭದಲ್ಲಿ ಮತಯಂತ್ರಗಳಿಗೆ ಯಾವುದೇ ಅಭ್ಯರ್ಥಿಗಳು, ಏಜೆಂಟರು, ಸಿಬ್ಬಂದಿ ಯಾವುದೇ ಬಗೆಯ ಪೂಜೆ ನೆರವೇರಿಸುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.

ಎಡಗೈ ಉಂಗುರ ಬೆರಳಿಗೆ ಮತದಾನದ ಗುರುತು
ಕೊಪ್ಪಳ: ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡುವ ಮತದಾರರ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಮಸಿಯ ಗುರುತು ಹಾಕಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಿಂಗಳ ಹಿಂದಷ್ಟೇ ಜರುಗಿದ್ದು, ಈ ಸಂದರ್ಭದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಹಾಕಿರುವ ಗುರುತು ಇನ್ನೂ ಹಾಗೆಯೇ ಇರುವುದರಿಂದ, ಈ ಬಾರಿಯ ವಿಧಾನಸಭೆ ಚುನಾವಣೆಗೆ ಎಡಗೈ ಉಂಗುರ ಬೆರಳಿಗೆ ಗುರುತು ಹಾಕಲು ಸೂಚನೆ ನೀಡಲಾಗಿದೆ. ಅಲ್ಲದೆ ಒಂದು ವೇಳೆ ಯಾವುದೇ ಮರು ಚುನಾವಣೆ ನಡೆದಲ್ಲಿ, ಅಂತಹ ಚುನಾವಣೆಗೆ ಮತದಾರರ ಎಡಗೈ ಕಿರು ಬೆರಳಿಗೆ ಗುರುತು ಹಾಕಲು ಚುನಾವಣಾ ಆಯೋಗ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಚುನಾವಣೆ: ರಾತ್ರಿ ವೇಳೆ ನಿಷೇಧಾಜ್ಞೆ ಜಾರಿ
ಕೊಪ್ಪಳ: ಪ್ರಸಕ್ತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮೇ 5ರ ವರೆಗೆ ಪ್ರತಿ ದಿನರಾತ್ರಿ10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ತುಳಸಿ ಮದ್ದಿನೇನಿ ಆದೇಶ ಹೊರಡಿಸಿದ್ದಾರೆ.
ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದು, ರಾತ್ರಿ ವೇಳೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಂದೆಡೆ ಸೇರಿ ಸಾರ್ವಜನಿಕರಿಗೆ ತೊಂದರೆ ನೀಡುವ ಸಂಭವ ಇರುತ್ತದೆ. ಅಲ್ಲದೆ, ಮತದಾರರಿಗೆ ಆಮಿಷ ಒಡ್ಡಲು ರಾತ್ರಿ ವೇಳೆ ವಸ್ತು, ಹಣ ಹಂಚುವ ಸಾಧ್ಯತೆ ಇದ್ದು, ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಿಆರ್‌ಪಿಸಿ 1983 ಕಲಂ 144ರ ಪ್ರದತ್ತ ಅಧಿಕಾರ ಚಲಾಯಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಿತ ಅವಧಿಯಲ್ಲಿ ಸಾರ್ವಜನಿಕರು ನಾಲ್ಕು ಜನಕ್ಕಿಂತ ಹೆಚ್ಚಾಗಿ ಗುಂಪಾಗಿ ಸೇರಿ ತಿರುಗಾಡುವಂತಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 10 ಗಂಟೆಯ ಒಳಗಾಗಿ ಮುಚ್ಚಬೇಕು. ಯಾವುದೇ ರೀತಿಯ ಮಾರಕಾಸ್ತ್ರಗಳೊಂದಿಗೆ ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ನಾಳೆ ಕಾರ್ಮಿಕರಿಗೆ ವೇತನ ಸಹಿತ ರಜೆ
ಕೊಪ್ಪಳ: ಜಿಲ್ಲೆಯಲ್ಲಿ ಮೇ 5ರಂದು ವಿಧಾನಸಭಾ ಚುನಾವಣೆಯ ಮತದಾನ ಜರುಗಲಿದ್ದು, ಕಾರ್ಮಿಕರು ಮತ ಚಲಾಯಿಸಲು ಅನುಕೂಲವಾಗಲು ಅಂದು ಎಲ್ಲ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಪಿ. ಮುನಿಯಪ್ಪ ಜಿಲ್ಲೆಯ ಎಲ್ಲ ಕಾರ್ಖಾನೆಗಳು, ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಮತದಾನದ ದಿನ ಎಲ್ಲ ಕಾರ್ಖಾನೆಗಳು, ಕೈಗಾರಿಕೆ ಸಂಸ್ಥೆಗಳು, ಅಂಗಡಿ, ವಾಣಿಜ್ಯ ಸಂಸ್ಥೆಗಳು, ಇತರೆ ಸಂಸ್ಥೆಗಳ ಕಾರ್ಮಿಕರಿಗೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ ಮಾಲೀಕರು, ನಿಯೋಜಕರು (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ 1963ರ ಕಲಂ 3 (ಎ)ರನ್ವಯ ಮೇ 5ರಂದು ಮತ ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಪಿ. ಮುನಿಯಪ್ಪ ತಿಳಿಸಿದ್ದಾರೆ.

ಕೇಬಲ್ ಟಿವಿಗಳಲ್ಲಿಪ್ರಚಾರಕ್ಕೆ ನಿರ್ಬಂಧ
ಕೊಪ್ಪಳ: ವಿಧಾನಸಭೆ ಚುನಾವಣೆಗೆ ಸಂಬಂಧ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ 5ಕ್ಕೆ  ಅಂತ್ಯಗೊಂಡಿದ್ದು, ಈ ಅವಧಿಯ ನಂತರ ಕೇಬಲ್ ಟಿವಿಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಜಾಹೀರಾತು, ಸಂದರ್ಶನ ಅಥವಾ ಸಮೀಕ್ಷೆ ಪ್ರಸಾರ ಮಾಡುವಂತಿಲ್ಲ.
ಚುನಾವಣಾ ಆಯೋಗದ ಸೂಚನೆಯಂತೆ ಬಹಿರಂಗ ಪ್ರಚಾರ ಅಂತ್ಯದ ನಂತರ ಯಾವುದೇ ಕೇಬಲ್ ನೆಟ್‌ವರ್ಕ್‌ಗಳ ಮೂಲಕ ಯಾವುದೇ ಬಗೆಯ ರಾಜಕೀಯ ಪಕ್ಷ, ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಜಾಹೀರಾತು, ಸಂದರ್ಶನ ಅಥವಾ ಸಮೀಕ್ಷೆ, ಭಾಷಣ ಕಾರ್ಯಕ್ರಮ ಪ್ರಸಾರ ಮಾಡುವಂತಿಲ್ಲ. ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂತಹ ಕೇಬಲ್ ನೆಟ್‌ವರ್ಕ್‌ನವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಕೊಪ್ಪಳ ಮತಗಟ್ಟೆಯಲ್ಲಿ ಮೊಬೈಲ್ ಬಳಕೆ ನಿಷಿದ್ಧ
ಕೊಪ್ಪಳ: ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತಗಟ್ಟೆಯೊಳಗೆ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಮಗ್ರಿ ಬಳಕೆ ನಿಷೇಧಿಸಲಾಗಿದೆ.
ಮೇ 5ರಂದು ಬೆಳಗ್ಗೆ 7ಯಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ಯಾವುದೇ ಮತದಾರರು, ಏಜೆಂಟರು ಮತಗಟ್ಟೆಯೊಳಗೆ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಮಗ್ರಿಗಳೊಂದಿಗೆ ಪ್ರವೇಶ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಮೊಬೈಲ್ ಸಹಿತ ಮತಗಟ್ಟೆಯೊಳಗೆ ಪ್ರವೇಶ ಮಾಡಿದ್ದು ಕಂಡು ಬಂದಲ್ಲಿ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭರಣಿ ಮಳೆ: ಭೂಮಿಗೆ ಬಾಗಿದ ಬೆಳೆ
ಕನ್ನಡಪ್ರಭ ವಾರ್ತೆ, ಕುಷ್ಟಗಿ, ಮೇ 3
ತಾಲೂಕಿನಲ್ಲಿ ಗುರುವಾರ ರಾತ್ರಿ ಅಲ್ಲಲ್ಲಿ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಮಳೆ-ಗಾಳಿಗೆ ತಾಲೂಕಿನ ಶಾಖಾಪುರದ ರೈತರಿಬ್ಬರ ಸಜ್ಜೆ, ಬಾಳೆ ಬೆಳೆ, ಗುಡಿಸಲು ಹಾನಿಯಾಗಿದೆ.
ಶಾಖಾಪುರದ ರೈತ ಹೊನ್ನಪ್ಪ ಚೌಡ್ಕಿ ಅವರ ಮೂರು ಎಕರೆ ಹೊಲದಲ್ಲಿ ಬೆಳೆದ ಸಜ್ಜೆ ಸಂಪೂರ್ಣ ಹಾಳಾಗಿದ್ದರೆ, ಕುಷ್ಟಗಿ ನಿವೃತ್ತ ಶಿಕ್ಷಕ ಸುಂಕದ ಅವರ ತೋಟದಲ್ಲಿ ಬೇಸಾಯ ಮಾಡುತ್ತಿದ್ದ ಶರಣಪ್ಪ ಐಹೊಳಿ ಬೆಳೆದ ಎರಡು ಎಕರೆ ಪ್ರದೇಶದ ಬಾಳೆ ಹಾಗೂ ಅವರು ವಾಸಿಸುತ್ತಿದ್ದ ಗುಡಿಸಲು ಮಳೆ-ಗಾಳಿಗೆ ನೆಲಕ್ಕುರುಳಿದೆ.
ಹೊನ್ನಪ್ಪ ಚೌಡ್ಕಿ ಬೆಳೆದ ಸಜ್ಜೆ ಇನ್ನೊಂದು ತಿಂಗಳಲ್ಲಿ ಕೈ ಸೇರುತ್ತಿತು. ಗುರುವಾರ ಬಿದ್ದ ಮಳೆ- ಗಾಳಿಗೆ ನಷ್ಟವಾಗಿ ರು. 30ರಿಂದ 40 ಸಾವಿರ ಹಾಳಾಗಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಕಳಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿ, ಹಾನಿ ಪರಿಶೀಲಿಸಿದ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಐ.ಎಂ. ನಾಲತ್ವಾಡ ತಿಳಿಸಿದ್ದಾರೆ.
ಹಳ್ಳಕ್ಕೆ ನೀರು: ಗುರುವಾರ ಸುರಿದ ಮಳೆಯಿಂದಾಗಿ ತಾಲೂಕಿನ ಕೆಲವು ಹಳ್ಳಗಳು, ಜಮೀನುಗಳಲ್ಲಿ ನೀರು ನಿಂತಿದ್ದು ಶುಕ್ರವಾರ ಕಂಡಿತು. ಭರಣಿ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಯಿತು ಎಂದು ರೈತರು ಸಂತಸ ವ್ಯಕ್ತಪಡಿಸಿದರು. ಇನ್ನು 3-4 ದಿನಗಳಲ್ಲಿ ಉತ್ತಮ ಮಳೆಯಾದರೆ ಭೂಮಿಗೆ ಇನ್ನಷ್ಟು ಉತ್ತಮ. ಮಳೆ ಜೊತೆಗೆ ಗಾಳಿ ಬೀಸಿದರೆ ಇದ್ದ ಅಲ್ಪಸ್ವಲ್ಪ ಬೆಳೆಗಳೂ ಹಾಳಾಗುತ್ತವೆ ಎಂದು ಕೆಲವು ರೈತರು ಆತಂಕ ವ್ಯಕ್ತಪಡಿಸಿದರು.
2-3 ವರ್ಷಗಳಿಂದ ಬತ್ತಿದ್ದ ಕುಷ್ಟಗಿ ತಾಲೂಕಿನ ಮದ್ಲಗಟ್ಟಿ ಕೆರೆ ಗುರುವಾರ ಬಿದ್ದ ಭರ್ರಣಿ ಮಳೆಯಿಂದ ಸ್ವಲ್ಪ ಪ್ರಮಾಣದ ನೀರು ಬಂದಿದ್ದು, ಕೆರೆ ಸುತ್ತಲಿರುವ ರೈತರ ಬೋರ್‌ವೆಲ್‌ಗಳಿಗೆ ನೀರು ಬರುವ ಸಾಧ್ಯತೆ ಇದೆ. ಅಲ್ಲದೆ, ಜಾನುವಾರಿಗೆ ಕುಡಿಯುವ ನೀರು ಲಭಿಸಿದಂತಾಗುತ್ತದೆ ಎಂದು ರೈತರು ಹೇಳಿದರು.
ಮಳೆ ಪ್ರಮಾಣ:  ಕುಷ್ಟಗಿಯಲ್ಲಿ 40.6 ಮಿಮೀ, ದೋಟಿಹಾಳ 10 ಮಿಮೀ, ತಾವಗೇರಾ 10 ಮಿಮೀ, ಕಿಲಾರ ಹಟ್ಟಿ 2.6 ಮಿಮೀ ಮಳೆಯಾಗಿದೆ. ಇನ್ನು ಮಳೆ, ಸಿಡಿಲಿನಿಂದಾಗಿ ತಾಲೂಕಿನ ವಣಗೇರಾದಲ್ಲಿ ನಾಲ್ಕು ಕುರಿಗಳು ಸತ್ತಿದ್ದು, ಮಳೆ-ಗಾಳಿಗೆ ಅಲ್ಲಲ್ಲಿ ಸೀಡ್‌ಗಳು ಹಾಳಾಗಿವೆ. ಗಿಡ-ಮರಗಳು ನೆಲಕ್ಕುರುಳಿ ಕೆಲವು ಹಳ್ಳಿಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಮತ್ತೆ ಕೆಲವೆಡೆ ವಿದ್ಯುತ್ ಸಮಸ್ಯೆ ಉಂಟಾಗಿದೆ. ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ನೀರು ಹರಿದಿದ್ದು ಕಂಡುಬಂತು.

ಅಪಘಾತ: ಬೈಕ್ ಸವಾರ ಗಂಭೀರ ಗಾಯ
ಮುನಿರಾಬಾದ್: ಗುರುವಾರ ರಾತ್ರಿ 10ಕ್ಕೆ ಗ್ರಾಮದ ಹೊರವಲಯದ ಜೈ ಹಿಂದ್ ದಾಬಾ ಬಳಿ ಬೈಕೊಂದು ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಜರುಗಿದೆ. ಮುನಿರಾಬಾದಿನ ಗುತ್ತಿಗೆದಾರ ಸರಫರಾಜ್ ಖಾನ್ ಗಾಯಗೊಂಡವರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಂಗಳ ಹಸುಗೂಸು ಪತ್ತೆ
ಕೊಪ್ಪಳ: ತಾಲೂಕಿನ ಪ್ರಸಿದ್ಧ ಕ್ಷೇತ್ರ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ತಿಂಗಳ ಹಸುಗೂಸನ್ನು ಬ್ಯಾಗ್‌ನಲ್ಲಿಟ್ಟು ಹೋದ ಘಟನೆ ಶುಕ್ರವಾರ ಬೆಳಗಿನ ವೇಳೆ ನಡೆದಿದೆ. ದೇವಸ್ಥಾನದ ಕಾವಲುಗಾರ ಹಸುಗೂಸಿದ್ದ ಬ್ಯಾಗ್ ಪರಿಶೀಲಿಸಿದಾಗ ಬೆಳಕಿಗೆ ಬಂದ ವಿಷಯವನ್ನು ಆತ, ದೇವಸ್ಥಾನ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಮೌಳಿಗೆ ತಿಳಿಸಿದ್ದಾನೆ. ಅವರು ತಕ್ಷಣ ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಸಮಿತಿ, ಯುನಿಸೆಫ್ ಸಹಯೋಗದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಸಮಿತಿ ವಶದಲ್ಲಿದ್ದ ಹಸುಗೂಸನ್ನು ಪಡೆದಿದೆ. ಬಳಿಕ ಕೂಸನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಸಭೆ ಮಗುವಿಗೆ ನರ್ಮದಾ ಎಂದು ಹೆಸರಿಟ್ಟಿದೆ. ಮಗುವನ್ನು ರಕ್ಷಣೆಗಾಗಿ ದತ್ತು ಸಂಸ್ಥೆ ವಾತ್ಸಲ್ಯ ಚಾರಿಟೇಬಲ್ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ. ರಾಜಶೇಖರ, ಸದಸ್ಯರಾದ ಕಾಳಮ್ಮ ಪತ್ತಾರ, ನಿಲೋಫರ ಎಸ್. ರಾಂಪುರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ, ಸುಮಲತಾ ಆಕಳವಾಡಿ, ಪ್ರಶಾಂತ ರೆಡ್ಡಿ, ಶಿವರಾಮ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.