ರಕ್ಷಣೆ, ಸಮಾನ ಅವಕಾಶಕ್ಕೆ ಕೆಜೆಪಿ ಗೆಲ್ಲಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 3
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ಎಲ್ಲ ಸಮುದಾಯಗಳ ರಕ್ಷಣೆ, ಸಮಾನ ಅವಕಾಶಗಳಿಗಾಗಿ ಪ್ರಸಕ್ತ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ಮಾಜಿ ಸಚಿವ ಸಿ.ಎಂ. ಉದಾಸಿ ಮನವಿ ಮಾಡಿದರು.
ಹಾನಗಲ್ಲಿನಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ನಗರಾಭಿವೃದ್ಧಿಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲಾ ಕಟ್ಟಡಗಳು, ನೀರಾವರಿ ಕಾಮಗಾರಿಗಳೇ ಮಾತನಾಡುತ್ತಿವೆ. ಐವತ್ತು ವರ್ಷ ರಾಜ್ಯವನ್ನಾಳಿದ ಹಿಂದಿನ ಸರ್ಕಾರಗಳಿಗೆ ಉತ್ತರ ನೀಡುತ್ತಿವೆ. ಮತದಾರ ಪ್ರಬುದ್ಧನಾಗಿದ್ದು, ಈಗ ಸುಳ್ಳು ಭರವಸೆಗಳನ್ನು ನಂಬುವುದಿಲ್ಲ. ಸರ್ಕಾರಗಳ ಸಾಧನೆಗಳನ್ನು ಗಮನಿಸಿ ಮತ ನೀಡುತ್ತಾನೆ ಎಂದರು.
ಅಧಿಕಾರಕ್ಕೆ ಬಂದಲ್ಲಿ ಕೆಜೆಪಿ 65 ವರ್ಷ ದಾಟಿದ ಎಲ್ಲ ರೈತರಿಗೆ ರು. 500 ಮಾಸಾಶನ ನೀಡಲಿದೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಯೋಜನೆಗಳನ್ನು ಮಧ್ಯಮ ವರ್ಗಕ್ಕೂ ವಿಸ್ತರಿಸಲಿದೆ. ರಾಜ್ಯದ ಮಹಿಳಾ ಸ್ವ ಹಾಯ ಸಂಘಗಳ ಸ್ವಾವಲಂಬನೆಗಾಗಿ ರು. 2 ಸಾವಿರ ಕೋಟಿ ಬಂಡವಾಳ ಒದಗಿಸಿ, ಪ್ರತ್ಯೇಕ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಿಸಲಿದೆ. ಸಹಕಾರ ಸಂಘಗಳಲ್ಲಿ ರೈತರು ಪಡೆದ ರು. 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುವುದು. ಪ್ರತಿ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಮಹಿಳೆಯರ ಸಬಲೀಕರಣ ಹಾಗೂ ರಕ್ಷಣೆಗಾಗಿ ಉಗ್ರ ಕಾನೂನು ರಚಿಸಲಾಗುವುದು. ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಂಡು, ವಿದ್ಯುತ್ ಸಮಸ್ಯೆ ನಿವಾರಿಸಿ, ಕೃಷಿ ಹಾಗೂ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಕೆಜೆಪಿ ಮುಖಂಡರಾದ ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ್, ಎಸ್.ಕೆ. ಪೀರಜಾದೆ, ರಾಜು ಗೌಳಿ, ಮಹ್ಮದ್ ಮತೀನ್ ಶಿರಬಡಗಿ, ಯಲ್ಲವ್ವ ಕಂಚಿಗೊಲ್ಲರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

