ಅತಿಯಾಗಿದೆ, ನಶೆ ಏರಿದೆ
ಶಿರಹಟ್ಟಿ: ಚುನಾವಣೆ ಕಾವು, ಬಿಸಿಲ ಬೇಗೆ ಏರಿದಂತೆ ಮದ್ಯದ ನಶೆ ಕೂಡ ಏರುತ್ತದೆ. ದಿನ ಬೆಳಗಾದರೆ ಬಾರ್‌ಗಳಲ್ಲಿ ಕುಡುಕರ ದಂಡು ಕಾಣಸಿಗುತ್ತಿದೆ. ರಸ್ತೆಯಲ್ಲಿ ತೂರಾಡುತ್ತಾ ಸಾಗುವವರು, ಕಂಡಕಂಡಲ್ಲಿ ಬಿದ್ದಿರುವುದು ಈಗ ಸಾಮಾನ್ಯವಾಗಿ ಕಾಣಸಿಗುವ ದೃಶ್ಯ. ಇದರ ಜತೆಗೆ ಅಬಕಾರಿ ಇಲಾಖೆಗೆ ಭರ್ತಿ ಆದಾಯ ಬಂದಿದೆ.
ಚುನಾವಣೆ ಇರಲಿ, ಬಿಡಲಿ ಕುಡುಕರ ಹೊಟ್ಟೆಗೆ ನೈಂಟಿ ಬಿದ್ದರೇನೇ ಮುಂದಿನ ಕೆಲಸ. ಇನ್ನು ಹೇಳಿಕೇಳಿ ಚುನಾವಣೆ ವೇಳೆಯಲ್ಲಿ ಕುಡಿಸುವವರು ಸಿಕ್ಕರೆ ಕೇಳಬೇಕಾ, ಹಗಲು-ರಾತ್ರಿ ಕುಡಿದು ಇವರು ಸ್ವರ್ಗ ಸುಖ ಕಾಣುತ್ತಾರೆ. ಹಣ, ಹೆಂಡ ಹಂಚುವುದು ಸಂಪ್ರದಾಯವೇನೋ ಎನ್ನುವ ರೀತಿಯಲ್ಲಿ ಚುನಾವಣೆ ಅಧಃಪತನಕ್ಕಿಳಿದಿದೆ. ಚುನಾವಣೆ ಆಯೋಗ ಈ ಅನಿಷ್ಠ ಪದ್ಧತಿಯನ್ನು ತಡೆಯುತ್ತೇನೆ ಎಂದು ಹೊರಟರೆ ರಾಜಕೀಯ ಪಕ್ಷಗಳು ತಾವು ಬಿಡೆವು ಎಂದು ಸಾಗಿವೆ. ಆಯೋಗ ಕಟ್ಟೆಚ್ಚರ ವಹಿಸಿದರೂ ಅದರ ಕಣ್ತಪ್ಪಿಸಿ ಹೆಂಡ ಹಂಚುವ ಕಾರ್ಯ ಸಾಂಗವಾಗಿ ನಡೆದಿದೆ.
ಕೈ ಒಡ್ಡುವವರು: ಚುನಾವಣೆ ಎಂದರೇನೇ ಹೆಂಡದ ಹಬ್ಬ ಎಂದು ತಿಳಿದುಕೊಂಡವರೂ ಒಂದಿಷ್ಟು ಜನ ಇದ್ದಾರೆ. ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಕೈ ಮುಗಿದು ಮತಯಾಚನೆ ನಡೆಸಿದರೆ, ಕೈ ಮುಗಿಯುವುದು ಆಯಿತು ಸ್ವಾಮಿ... ಕೈಗಿತ್ತು ಮುಂದೆ ಸಾಗಿರಿ... ಮತ ಸುಖಾಸುಮ್ಮನೆ ಬರುವುದಿಲ್ಲ ಎಂದು ಕೈ ಮುಂದೆ ಮಾಡುತ್ತಾರೆ. ಎಲ್ಲಿ ಈ ಮತ ಉಲ್ಟಾ ಹೊಡೆಯುವುದೋ ಎಂದು ಲೆಕ್ಕಿಸುವ ಅಭ್ಯರ್ಥಿ ಆತನಿಗೆ ಕಂಠಪೂರ್ತಿ ಕುಡಿಯಲು ವ್ಯವಸ್ಥೆ ಮಾಡಿ, ಕೈಗೊಂದಿಷ್ಟು ಗರಿಗರಿ ನೋಟನ್ನಿತ್ತು ಮುಂದೆ ಸಾಗುವುದು ಅನಿವಾರ್ಯವೆಂಬಂತಾಗಿದೆ.
ಹಗಲು-ರಾತ್ರಿ ರಶ್: ತಾಲೂಕಿನ ಬಹುತೇಕ ಬಾರ್‌ಗಳೀಗ ಪುಲ್‌ರಶ್. ರಾಜ್ಯ ಸರ್ಕಾರ ಪಾಕೆಟ್ ಸಾರಾಯಿ ನಿಷೇಧಿಸಿದ ಬಳಿಕ ಕುಡುಕರು ಬಾಟಲ್ ಮದ್ಯಗಳಿಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಬಾರ್‌ಗಳಲ್ಲಿ ಜನಜಂಗುಳಿ. ಇನ್ನು ಚುನಾವಣೆಯಾಗಿರುವುದರಿಂದ ಈ ಸಂಖ್ಯೆ ಡಬಲ್ ಆಗಿದೆ. ಪಕ್ಷಗಳ ಪ್ರಾಯೋಜಕತ್ವದಿಂದ ಪುಲ್ ಟೈಮ್ ಕುಡುಕರು ಬಾರ್‌ಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಠಿಕಾಣಿ ಹೂಡಿ ಬಿಟ್ಟಿದ್ದಾರೆ. ಇನ್ನು ಪಾರ್ಟ್‌ಟೈಮ್ ಕುಡುಕರು ರಾತ್ರಿ ವೇಳೆಯಲ್ಲಿ ಟ್ರಿಮ್ಮಾಗಿ ಹೋಗಿ ಸಿಪ್ ಎಳೆಯುತ್ತಿದ್ದಾರೆ.
ಪಾರ್ಟಿ ಅಕೌಂಟ್: ಕೆಲ ಪಕ್ಷಗಳು ಬಾರ್‌ಗಳಲ್ಲಿ ಅಕೌಂಟ್ ಮಾಡಿಕೊಂಡು ಬಿಟ್ಟಿವೆ. ಹೊಟೇಲ್‌ಗಳಲ್ಲಿ ನೀಡುವಂತೆ ಇಲ್ಲಿಯೂ ಕುಡುಕ ಮತದಾರರಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಇವರು ತೋರಿಸುವ ಟೋಕನ್‌ಗನುಸಾರವಾಗಿ ಮದ್ಯ ನೀಡಲಾಗುತ್ತದೆ. ಎಷ್ಟು ಕೊಡಬೇಕೆಂಬುದನ್ನು ಈ ಟೋಕನ್‌ನಲ್ಲಿ ನಮೂದಿಸಲಾಗಿರುತ್ತದೆ.
-ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

