ಹಾವೇರಿ

ಬಿಜೆಪಿಗಿಂತ ಕೆಜೆಪಿಗೆ ಅಧಿಕ ಸ್ಥಾನ ಗೆಲವು

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 5
ರಾಜ್ಯಾದ್ಯಂತ ಮಾಜಿ ಸಿಎಂ ಬಿಎಸ್‌ವೈ ಅಲೆ ಬೀಸುತ್ತಿದ್ದು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಕೆಜೆಪಿ ಗಳಿಸಲಿದೆ ಎಂದು ಮಾಜಿ ಸಚಿವರು ಆಗಿರುವ ಹಾನಗಲ್ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ನಡೆದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಾನಗಲ್ ಮತಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪರಿಶೀಲಿಸಿದ ನಂತರ ಹಸನಾಬಾದ್ ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.
ನಾಯಕರ ಭಾಷಣಕ್ಕೂ ಬೆರಳೆಣಿಕೆ ಜನ
ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಕಂಡು ಬರುತ್ತಿದ್ದು, ಪ್ರಸಕ್ತ ಚುನಾವಣೆಯಲ್ಲಿ ತಾವೇ ಬಹುಮತ ಸಾಧಿಸುವ ಮೂಲಕ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಮಾಧ್ಯಮಗಳಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದ ಉದಾಸಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಚುನಾವಣಾ ಪ್ರಚಾರಾರ್ಥ ಹಾವೇರಿಗೆ ಆಗಮಿಸಿದಾಗ ಅಲ್ಲಿ ಜಮಾಗೊಂಡಿದ್ದ ಜನರು ಬೆರಳೆಣಿಕೆಯಷ್ಟಿದ್ದರು.     ಇದೇ ರೀತಿಯಾಗಿ ಬಿಜೆಪಿ ಪರ ಪ್ರಚಾರ ನಡೆಸಲು ರಾಣಿಬೆನ್ನೂರಿಗೆ ಆಗಮಿಸಿದ್ದ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿಯವರ ಕಾರ್ಯಕ್ರಮದಲ್ಲಿ ಜನರು ಅಷ್ಟಕಷ್ಟೆ ಇದ್ದರು ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ ಬಿಎಸ್‌ವೈ ಅಲೆ: ಕೆಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲು ಬಿಎಸ್‌ವೈ ಜಿಲ್ಲೆಗೆ ಆಗಮಿಸಿದ್ದಾಗ ಕಾರ್ಯಕರ್ತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಿಎಸ್‌ವೈ ಸಿಎಂ ಆಗಿದ್ದ ಸಂದರ್ಭದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳೆ ಅವರನ್ನು ನಾಡಿನ ಜನ ಮೆಚ್ಚುವಂತಾಗಿದೆ. ಆದ್ದರಿಂದ ರಾಜ್ಯದಲ್ಲಿ ಇರುವುದು ಕೇವಲ ಬಿಎಸ್‌ವೈ ಅಲೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಸಮರ್ಥಿಸಿಕೊಂಡರು. 2008ರ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಲೆ ಇರಲಿಲ್ಲ. ಬದಲಾಗಿ ಬಿಎಸ್‌ವೈ ಅಲೆ ಇತ್ತು. ಅದಕ್ಕಾಗಿಯೇ ಕಮಲ ಪಕ್ಷ ರಾಜ್ಯದ ಆಡಳಿತ ಹಿಡಿಯಲು ಸಾಧ್ಯವಾಗಿತ್ತು. 2009ರ ಹೊತ್ತಿಗೆ ಬಿಎಸ್‌ವೈ ಅವರಿಗೆ ಕಳಂಕಿತ ಎಂಬ ಆರೋಪಕ್ಕೆ ಗುರಿಯಾಗಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ತಾಕತ್ತು ತೋರಿಸಲು ಸಾಧ್ಯವಾಗಿರಲಿಲ್ಲ. 2010ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಎಸ್‌ವೈ ಮತ್ತೆ ಸಕ್ರಿಯವಾಗಿ ಪಾಲ್ಗೊಂಡಿದ್ದರ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿಗೆ ಪ್ಲಸ್ ಆಗಿತ್ತು ಎಂದರು.
ಐದರಲ್ಲಿ ಗೆಲುವು!: ಹಾವೇರಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳ ಪೈಕಿ 5ರಲ್ಲಿ ಕೆಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಉದಾಸಿ, ಶಿಗ್ಗಾಂವಿ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಸದ್ಯ ಬಿಎಸ್‌ವೈ ಬಗ್ಗೆ ನಾಡಿನ ಜನತೆ ಅನುಕಂಪವಿದೆ. ಆದ್ದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಕೆಜೆಪಿ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಬ್ಬರದ ಪ್ರಚಾರವಿಲ್ಲ:   ಕೆಜೆಪಿ ಅಭ್ಯರ್ಥಿಗಳ ಗೆಲುವಿಗೆ ಅಬ್ಬರದ ಪ್ರಚಾರ ಕೈಗೊಂಡಿಲ್ಲ. ಕನಿಷ್ಠ ಪಕ್ಷ ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿಲ್ಲ. ಬಿಎಸ್‌ವೈ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿದ ಮತದಾರ, ಯಾವುದೇ ಕಾರಣಕ್ಕೂ ತಮ್ಮ ನಾಯಕನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಇತರ ಪಕ್ಷಗಳ ನಾಯಕರು ಮನೆ-ಮನೆ ಪ್ರಚಾರ ಸೇರಿದಂತೆ ಮೊಬೈಲ್ ಕರೆ ಮೂಲಕವೂ ಪ್ರಚಾರ ನಡೆಸಿದ್ದಾರೆ.
    ಆದರೆ, ಇದ್ಯಾವುದಕ್ಕೂ ಮತದಾರ ಈ ಬಾರಿ ಚುನಾವಣೆಯಲ್ಲಿ ಮನ್ನಣೆ ನೀಡುವುದಿಲ್ಲ ಎಂಬುದು ಮೇ 8ರಂದು ಪ್ರಕಟಗೊಳ್ಳುವ ಫಲಿತಾಂಶದಿಂದ ಸಾಬೀತಾಗಲಿದೆ ಎಂದೂ ಉದಾಸಿ ತಿಳಿಸಿದರು.
ಕೆಜೆಪಿಗೆ ಯಾಕೆ: ಕೆಜೆಪಿಗೆ ಯಾಕೆ ಮತ ನೀಡಬೇಕು ಎಂಬುದನ್ನು ಕಾರ್ಯಕರ್ತರು ಮತದಾರರಗೆ ತಿಳಿ ಹೇಳುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಅಲ್ಲದೇ, ಚುನಾವಣಾ ಪೂರ್ವದಲ್ಲಿ ತಾವು ಸಹ ಈ ವಿಷಯವಾಗಿ 180 ಕಡೆಗಳಲ್ಲಿ ಕೈಗೊಂಡಿರುವ ಪ್ರಚಾರದ ಸಂದರ್ಭದಲ್ಲಿ ನಾಡಿನ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಬಿಎಸ್‌ವೈ ಅವರ ಅಭಿವೃದ್ಧಿ ಕೆಲಸಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ಇವುಗಳೆ ಕೆಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.