ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಬೇಡಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 13
ಮನುಕುಲದ ಉದ್ದಾರಕ್ಕೆ ಮಾರ್ಗದರ್ಶನ ನೀಡಿದ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದು ಖೇದಕರ ಸಂಗತಿ ಎಂದು ತಾಲೂಕು ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ಅಭಿಪ್ರಾಯಪಟ್ಟರು.
ಹಾನಗಲ್ಲಿನ ಅಂಬೇಡ್ಕರ ಭವನದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ 880ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವೇಶ್ವರ ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಯಾವುದೇ ಮಹಾನ್ ವ್ಯಕ್ತಿಯನ್ನು ಜಾತಿ ಚೌಕಟ್ಟಿನಲ್ಲಿ ನೋಡುವುದರಿಂದ ಅವರ ಪ್ರಭಾವಕ್ಕೆ ಧಕ್ಕೆ ತಂದಂತಾಗುತ್ತದೆ. 12ನೇ ಶತಮಾನದಲ್ಲಿಯೇ ಮೂಡನಂಬಿಕೆ ಹೊಡೆದೊಡಿಸಿ ನೈತಿಕತೆ ಬೆಳೆಸಿಕೊಳ್ಳಲು ನೀಡಿದ ಅವರ ಸಂದೇಶಗಳು ಇಂದಿಗೂ ಪ್ರಸ್ತುತ.
ವಿದೇಶಗಳಲ್ಲೂ ಬಸವಣ್ಣನವರ ಸಂದೇಶಗಳಿಗೆ ಗೌರವ ಸಿಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.
ಉಪನ್ಯಾಸ ನೀಡಿದ ಹಾವೇರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹನುಮಂತಗೌಡ ಗೊಲ್ಲರ, ಎಲ್ಲ ವರ್ಗಗಳ ಜನತೆಯನ್ನು ಸಮಾನವಾಗಿ ಕಾಣುವ ಮೂಲಕ ಜಾತ್ಯತೀತ ಮನೋಭಾವ ಹುಟ್ಟುಹಾಕಲು ಹೋರಾಡಿದ ಮಹಾ ಮಾವತಾವಾದಿ ಬಸವಣ್ಣ. ಹರ್ಡಕರ ಮಂಜಪ್ಪನವರಿಂದ 1913ರಲ್ಲಿ ಆರಂಭಗೊಂಡ ಬಸವಣ್ಣನವರ ಜಯಂತ್ಯುತ್ಸವಕ್ಕೆ ಪ್ರಸ್ತುತ ವರ್ಷ ಶತಮಾನದ ಸಂಭ್ರಮ. ಕಾಯಕಕ್ಕೆ ಹೆಚ್ಚು ಮಹತ್ವ ತಂದುಕೊಟ್ಟು, ದಲಿತ ವರ್ಗದ ಜನತೆಯಲ್ಲಿ ಮಹಾಮನೆ ಮೂಲಕ ಧಾರ್ಮಿಕತೆ ಬೆಳೆಸಿ ಸಮಾಜದಲ್ಲಿ ಮೌಲ್ಯಗಳ ಸ್ಥಾಪನೆಗೆ ಯತ್ನಿಸಿದ್ದರು. ಅಂಬೇಡ್ಕರರ ಹಾಗೂ ಬಸವಣ್ಣನವರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವಂತಾದಾಗ ನಮ್ಮಲ್ಲಿರುವ ಮೇಲು-ಕೀಳು ಭಾವನೆ ದೂರಗೊಳಿಸಲು ಸಾಧ್ಯ ಎಂದರು.
ಉಪನ್ಯಾಸಕ ವಿಷ್ಣು ಪಟಗಾರ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ಬಸವರಾಜ ಹಾದಿಮನಿ, ಪುರಸಭಾ ಮುಖ್ಯಾಧಿಕಾರಿ ಸೋಮಶೇಖರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮನೊಜಕುಮಾರ ಗಡಬಳ್ಳಿ, ಜಿಪಂ ಅಭಿಯಂತರ ಕೆ.ಆರ್. ಮಠದ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಶೆಟ್ಟರ, ಬಸವ ಸಮಿತಿ ಅಧ್ಯಕ್ಷ ಗುರುಸಿದ್ದಪ್ಪ ಕೊಂಡೊಜಿ, ಪುರಸಭಾ ಸದಸ್ಯರಾದ ರವಿ ಕಲಾಲ, ಅಶೋಕ ಆರೆಗೊಪ್ಪ, ಸಂತೋಷ ಸುಣಗಾರ ಹಾಗೂ ಬಸವೇಶ್ವರರ ರೂಪಕದಲ್ಲಿ ರಾಮಕೃಷ್ಣ ಸುಗಂಧಿ ಇದ್ದರು. ಶಿವಾನಂದ ಕ್ಯಾಲಕೊಂಡ ಕಾರ್ಯಕ್ರಮ ನಿರ್ವಹಿಸಿದರು.
ಬಸವಣ್ಣನವರ ಆದರ್ಶ ಪಾಲಿಸಿ: ಶಾರದಾ
ರಾಣಿಬೆನ್ನೂರು: ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸಿರುವ ಅಣ್ಣ ಬಸವಣ್ಣನವರು ಹಾಕಿ ಕೊಟ್ಟಿರುವ ಮಾರ್ಗದರ್ಶನದಡಿ ಎಲ್ಲಾ ಜಾತಿ ಜನಾಂಗದವರ ಸೇವೆ ಮಾಡುವುದರೊಂದಿಗೆ ಜೀವನ ಸಾರ್ಥಕಪಡಿಸಿಕೊಳ್ಳಲು ಸರ್ವರು ಮುಂದಾಗಬೇಕೆಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾ ಲಮಾಣಿ ಹೇಳಿದರು.
ತಾಲೂಕು ಆಡಳಿತ, ತಾಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ವೀರಶೈವ ಸಮಾಜ ಆಶ್ರಯದಲ್ಲಿ ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ಜಯಂತಿ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ನಾಡಿನ ಎಲ್ಲಾ ಜಾತಿ ಜನಾಂಗದವರಿಗೆ ಧರ್ಮ ಸಂದೇಶ ಸಾರಿರುವ ಕ್ರಾಂತಿಯೋಗಿ ಬಸವಣ್ಣನವರ ವಚನ ಸಾಹಿತ್ಯ ಇಂದಿಗೂ ಎಲ್ಲರೂ ಮೇಚ್ಚುವಂತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿರುವವರೆಲ್ಲ ಬಸವಣ್ಣನವರು ಹಾಕಿ ಕೊಟ್ಟಿರುವ ಧಾರ್ಮಿಕ ಮಾರ್ಗದರ್ಶನದಡಿ ಸಮಾಜ ಸೇವೆ ಮಾಡುವುದರೊಂದಿಗೆ ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಲು ಮುಂದಾಗಬೇಕೆಂದರು.
ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೀರಣ್ಣ ಅಂಗಡಿ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಚಂದ್ರುಗೌಡ ಪಾಟೀಲ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ, ಬಸವರಾಜ ತಾವರಗೊಂದಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ, ನಗರಸಭೆ ಅಭಿಯಂತರರಾದ ಪಾಟೀಲ, ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರ ಡಾ ನಾಗನಗೌಡ ಆರ್, ಬಸವೇಶ್ವರ ಬ್ಯಾಂಕ್ ಮಾಜಿ ಅಧ್ಯಕ್ಷೆ ಗಾಯತ್ರಮ್ಮ ಕುರುವತ್ತಿ, ಬಿಜೆಪಿ ಮಹಿಳಾ ಅಧ್ಯಕ್ಷೆ ಭಾರತಿ ಜಂಬಗಿ, ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನ ಆಡಳಿತ ಕಮಿಟಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

