ಪ್ರಣವಾನಂದ ಸ್ವಾಮೀಜಿ ಮೇಲೆ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 21
ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಪ್ರಚೋದನಕಾರಿ ಹೇಳಿಕೆ ನೀಡಿರುವ ಪ್ರಣಾವನಂದ ಸ್ವಾಮೀಜಿ ವಿರುದ್ದ ಇಲ್ಲಿಯ ಅಂಜುಮನ್-ಎ-ಇಸ್ಲಾಂ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಸ್.ಎ ಚೌಗಳೆಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಶರೀಫ್ ಶಿವಯೋಗಿ ಭವನದ ಅವರಣದಲ್ಲಿ ಪ್ರತಿಭಟಿಸಿ ಮನವಿ ಅರ್ಪಿಸಿದ ಅಂಜುಮನ್ ಅಧ್ಯಕ್ಷ ಮಜಿದ ಮಾಳಿಗಿಮನಿ ಮಾತನಾಡಿ, ಭಾರತದಲ್ಲಿ ಅನೇಕ ಜಾತಿಗಳಿವೆ. ಪ್ರತಿಯೊಂದು ಜಾತಿಗೆ ಗುರು ಅನ್ನುವ ಶಬ್ದಕ್ಕೆ ಹೆಚ್ಚಿನ ಗೌರವ ಇದೆ. ಜಾತಿ, ಮತ, ಭೇದ ಭಾವಗಳಿಲ್ಲದೆ ನಡೆಯತಕ್ಕಂತಹ ಮಹಾನ್ ಗುರೂಜಿ, ಸೂಫಿ ಸಂತರು, ಶರಣರು, ಶ್ರೀಗಳು ಹೇಳಿರುವ ವಾಕ್ಯ ನೂರಕ್ಕೆ ನೂರರಷ್ಟು ಸತ್ಯವಾಗಿದೆ.
ಆದರೆ, ಅಖಿಲ ಭಾರತ ಹಿಂದೂ ಮಹಾಸಭಾ ಗೌರವಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಮುಸ್ಲಿಂ ಹುಡುಗಿಯರ ಬಗ್ಗೆ ನೀಡಿದ ಹೇಳಿಕೆಯನ್ನು ನೋಡಿದಾಗ ಇಡೀ ದೇಶವೆ ಅಲ್ಲೋಲ-ಕಲ್ಲೋಲ ಆಗುವಂತಹ ಸಂದರ್ಭ ಬಂದೊದಗಿದೆ. ಹೀಗಾಗಿ, ಅವರನ್ನು ತಕ್ಷಣ ಬಂಧಿಸಬೇಕು. ಅಲ್ಲದೆ ಕಾನೂನಿನಡಿ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸಂಸ್ಥಯ ಕಾರ್ಯದರ್ಶಿ ಅಹ್ಮದಬಾಷಾ ಗುಲಾಮುದ್ದಿನ, ಸಾದಿಕಮಲ್ಲೂರ, ಮಹ್ಮದಸಿರಾಜ ಸವಣೂರ, ಸಾಹೀಬಜಾನ ಬಾಡ, ಅಬ್ದುಲ್ ಮುನಾಫ ನರೇಗಲ್ಲ, ಅಬ್ದುಲ್ ಬಳ್ಳಾರಿ, ಮೆಹಬೂಬಖಾನ್ ಸೌದಾಘರ, ಅಬ್ದುಲಗನಿ ಪಂಚಮಾಲ್ದಾರ, ರಫೀಕ್ ನದಾಫ್ ಇತರರು ಇದ್ದರು.
--
ಸ್ವಾಮೀಜಿ ಬಂಧಿಸಿ
ರಾಣಿಬೆನ್ನೂರು: ಮುಸ್ಲಿಂ ಯುವತಿಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮತ್ತು ಹಿಂದೂ ಮುಸ್ಲಿಮರ ಮಧ್ಯೆ ಕೋಮು ಗಲಭೆಗಳನ್ನೆಬ್ಬಿಸಿ ರಾಜ್ಯದ ಶಾಂತಿ ನೆಮ್ಮದಿಗೆ ಭಂಗ ತರುವಂತಹ ಕಾರ್ಯಕ್ಕೆ ಕೈಹಾಕಿರುವ ಪ್ರಣವಾನಂದ ಸ್ವಾಮೀಜಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ತಾಲೂಕು ಅಂಜುಮನ್-ಎ-ಇಸ್ಲಾಂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದೆ.
ರಾಜ್ಯ ಸರ್ಕಾರ ಮುಸ್ಲಿಂ ಸಮಾಜದ ಬಡ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಯನ್ನು ವಿರೋಧಿಸಿ ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಇತ್ತೀಚಿಗೆ ನಗರದಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆ ನಂತರ ತಹಸೀಲ್ದಾರ್ ಕಚೇರಿ ಎದುರು ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಣವಾನಂದ ಸ್ವಾಮೀಜಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು.
ಮುಸ್ಲಿಂ ಸಮಾಜದವರ ಮನಸ್ಸಿಗೆ ನೋವನ್ನುಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿರುವುದಾಗಿ ತಾಲೂಕು ಅಂಜುಮನ್-ಎ-ಇಸ್ಲಾಂ ಅಧ್ಯಕ್ಷ ಮೆಹಬೂಬ ಖಾನ್ ಕಿಲ್ಲೇದಾರ್, ಕಾರ್ಯದರ್ಶಿ ನಸರುಲ್ಲಾ ಮುಲ್ಲಾ, ಸನಾವುಲ್ಲಾ ಕುಂದೂರು, ಅಂಜಮನ್ ಎಜುಕೇಶನ್ ಬೊರ್ಡ್ ಅಧ್ಯಕ್ಷ ಶೇರು ಖಾಬೂಲಿ, ಭಾಷಾಸಾಬ್ ನೀಲಗಾರ, ರಾಜಾಸಾಬ್ ಹರಪನಹಳ್ಳಿ, ಅನ್ವರ ಮೋಮಿನ್, ಸೈಪುಲ್ಲಾ ನರಗುಂದ, ಜಬ್ಬಾರಖಾನ್ ಸೌಧಾಘರ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಸುಬಾನಸಾಬ್ ಚೂಡಿಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

