ಹಾವೇರಿ

ಕಳಪೆ ಹತ್ತಿ ಬೀಜ: ನಷ್ಟ ಪರಿಹಾರಕ್ಕೆ ಆಗ್ರಹ

Published On :

ಹಾವೇರಿ: ಕಳಪೆ ಹತ್ತಿ ಬೀಜ ಬಿತ್ತಿ ಆಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ನೂರಾರು ರೈತರು ಬೈಕ್ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿ ಹಿರೇಕೇರೂರಿನಿಂದ ಬ್ಯಾಡಗಿ, ಮೊಟೆಬೆನ್ನೂರು ಮೂಲಕ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಹಾವೇರಿಗೆ ಆಗಮಿಸಿದರು. ನಗರದ ಹೆಸ್ಕಾಂ ಕಚೇರಿ ಬಳಿಯಿಂದ ರ್ಯಾಲಿ ಮುಂದುವರಿಸಿ, ಸಿದ್ದಪ್ಪ ಸರ್ಕಲ್ ಬಳಿ ರಸ್ತೆ ತಡೆ ನಡೆಸಿದರು. ಅಲ್ಲಿ ಕಳಪೆ ಹತ್ತಿ ಬೀಜದಿಂದ ಆಗಿರುವ ನಷ್ಟ ಹಾಗೂ ಇದುವರೆಗೆ ರೈತರ ನೆರವಿಗೆ ಬಾರದ ಸರ್ಕಾರದ ವಿರುದ್ಧ ಮುಖಂಡರು ಮಾತಿನ ದಾಳಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಮನವಿ ಸಲ್ಲಿಸಿದರು.
ಸರ್ಕಾರದಿಂದ ರೈತರ ನಿರ್ಲಕ್ಷ್ಯ: ಈ ಸಂದರ್ಭ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯಲ್ಲಿ ರೈತರು ಕಷ್ಟಪಟ್ಟು ಸಾಲಸೂಲ ಮಾಡಿ ಕೃಷಿಗೆ ಬಂಡವಾಳ ಹಾಕಿದ್ದು, ಕಳಪೆ ಹತ್ತಿ ಬೀಜದಿಂದಾಗಿ ಕಂಗಾಲಾಗಿದ್ದಾನೆ. ಹಾಕಿದ ಬಂಡವಾಳ ವಾಪಸ್ ಬರದಂತಾಗಿದ್ದು, ಜೀವನ ನಡೆಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡತೊಡಗಿದೆ. ಎರಡು ತಿಂಗಳಿಂದ ನಿರಂತರವಾಗಿ ಈ ಕುರಿತು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹತ್ತಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದುಡಿಯುವ ರೈತರನ್ನು ಸರ್ಕಾರ ಕಡೆಗಣಿಸಿದ್ದು, ಬೀಜ ಕಂಪನಿಗಳ ರಕ್ಷಣೆಗೆ ಅದು ಹೊರಟಿದೆ. ನೆಪ ಮಾತ್ರಕ್ಕೆ ಈಗ ರೈತರ ಜಮೀನುಗಳಿಗೆ ತಂಡಗಳನ್ನು ಕಳುಹಿಸಿ ವರದಿ ತರಿಸಿಕೊಳ್ಳುವ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಶೀಘ್ರ ಪರಿಹಾರ ಕಲ್ಪಿಸಿ: ಸರ್ಕಾರ ಬೀಜ ಕಂಪನಿಗಳನ್ನು ರಕ್ಷಿಸಲು ಹೊರಟಿದೆ. ವಿವಿಧ ಕಂಪನಿಗಳ ಹತ್ತಿ ಬೀಜ ರೈತ ನಷ್ಟ ಅನುಭವಿಸಿದ್ದರೂ ಜನಪ್ರತಿನಿಧಿಗಳೂ ರೈತರ ನೆರವಿಗೆ ಬರುತ್ತಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ನೈಜ ಕಾಳಜಿಯಿದ್ದರೆ ತಕ್ಷಣ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಬೆಲೆ ನಿಗದಿ ಮಾಡಿ: ಕಳಪೆ ಹತ್ತಿ ಬೀಜಗಳಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ತಕ್ಷಣ ಎಕರೆಗೆ ರು. 30 ಸಾವಿರ ಪರಿಹಾರ ಕೊಡಬೇಕು. ಸಮೀಕ್ಷಾ ತಂಡ ವಿವಿಧ ಕಂಪನಿ ಬೀಜ ಕಳಪೆಯಾಗಿರುವ ಬಗ್ಗೆ ದೃಢೀಕರಿಸಬೇಕು. ಪ್ರತಿ ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ಕ್ವಿಂಟಲ್ ಹತ್ತಿಗೆ ರು. 10 ಸಾವಿರ, ಮೆಕ್ಕೆಜೋಳ ರು. 2, ಬತ್ತಕ್ಕೆ ರು. 2500, ಕಬ್ಬಿಗೆ ಪ್ರತಿ ಟನ್‌ಗೆ ರು. 3 ಸಾವಿರ ಬೆಲೆ ನಿಗದಿ ಮಾಡಬೇಕು. ರು. 25 ಸಾವಿರ ಸಾಲಮನ್ನಾ ಮಾಡಿದ ಹಣವನ್ನು ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು. ಮೆಕ್ಕೆಜೋಳ ಖರೀದಿಯನ್ನು 25 ಕ್ವಿಂಟಲ್‌ಗೆ ಸೀಮಿತಗೊಳಿಸದೇ ರೈತರು ಬೆಳೆದ ಎಲ್ಲ ಮಕ್ಕೆಜೋಳ ಖರೀದಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ ತಕ್ಷಣ ಬಾರದ್ದರಿಂದ 2 ಗಂಟೆಗೂ ಅಧಿಕ ಕಾಲ ಅಲ್ಲೇ ಪ್ರತಿಭಟನೆ ಮುಂದುವರಿಸಿದರು. ಜಿಲ್ಲಾಧಿಕಾರಿ ಬರುವುದು ತಡವಾಗುತ್ತದೆ ಎಂದು ತಿಳಿಸಿದರೂ ಜಗ್ಗದೇ ಅವರೇ ಬಂದು ಮನವಿ ಸ್ವೀಕರಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಆಗಮಿಸಿ ಮನವಿ ಸ್ವೀಕರಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ವಿ. ಹಿರೇಮಠ, ಹಿರೇಕೇರೂರು ತಾಲೂಕಾಧ್ಯಕ್ಷ ಬಸನಗೌಡ ಗಂಗಪ್ಪನವರ, ಗಂಗಣ್ಣ ಎಲಿ, ಸುರೇಶ ಚಲವಾದಿ, ಚಿಕ್ಕಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.