ಪೌರಾಯುಕ್ತ ರುದ್ರಪ್ಪ ವಿರುದ್ಧ ಲೋಕಾ ತನಿಖೆ
ಹಾವೇರಿ: ಸುಳ್ಳು ಕಾಮಗಾರಿ ನಿರ್ವಹಣಾ ದೃಢೀಕರಣ ಒದಗಿಸಿ ಕ್ರಿಮಿನಲ್ ಅಪರಾಧ ಎಸಗಿರುವ ಆರೋಪ ಎದುರಿಸುತ್ತಿರುವ ಈ ಹಿಂದೆ ಹಾವೇರಿ ನಗರಸಭೆ ಪೌರಾಯುಕ್ತರಾಗಿದ್ದ ಎಚ್.ಕೆ. ರುದ್ರಪ್ಪ ಅವರ ಮೇಲೆ ತನಿಖೆಗೆ ಮಂಜೂರಾತಿ ಕೋರಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ನೀಡಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕರಾಗಿದ್ದ ಎಚ್.ಕೆ. ರುದ್ರಪ್ಪ ಅವರು ನಿಯೋಜನೆ ಮೇಲೆ ಹಾವೇರಿ ನಗರಸಭೆ ಪೌರಾಯಕ್ತರಾಗಿದ್ದ ಸಂದರ್ಭದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಲೋಕಾಯುಕ್ತ ಸಂಸ್ಥೆಯಿಂದ ಅಭಿಯೋಜನೆಗೆ ಗುರಿಪಡಿಸಲು ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ: ಮಾಜಿ ಶಾಸಕ ನೆಹರು ಓಲೇಕಾರ, ಮಂಜುನಾಥ ಓಲೇಕಾರ, ದೇವರಾಜ ಓಲೇಕಾರ, ಪೌರಾಯುಕ್ತ ಎಚ್.ಕೆ. ರುದ್ರಪ್ಪ, ಎಇಇ ಕಲ್ಲಪ್ಪ, ಜೆಇ ಕೆ. ಮಂಜುನಾಥ, ಎಇಇ ಚಂದ್ರಮೋಹನ್, ಎಇ ಕೆ. ಕೃಷ್ಣಾ ನಾಯಕ, ಎಸ್ಡಿಸಿ ಎಸ್.ಪಿ. ಕಮದೋಡ ಎಂಬವರ ಮೇಲೆ ನಗರಸಭೆಯಿಂದ ಸುಳ್ಳು ಕಾಮಗಾರಿ ನಿರ್ವಹಣಾ ಪತ್ರವನ್ನು ಕೊಡಿಸಿ, ಗುತ್ತಿಗೆ ವಹಿಸಿಕೊಟ್ಟಿರುವ ಕುರಿತು ಎಂ.ಎಂ. ಹಳ್ಳಿಕೇರಿ ಎಂಬವರು ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಅದನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.
ಹಾವೇರಿ ಲೋಕಾಯುಕ್ತ ಉಪಾಧೀಕ್ಷಕರು ಆಪಾದಿತ 9 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ನೆಹರು ಓಲೇಕಾರ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಅಧಿಕಾರ ಪ್ರಭಾವಕ್ಕೆ ಒಳಪಟ್ಟು ಮಂಜುನಾಥ ಹಾಗೂ ದೇವರಾಜ ಓಲೇಕಾರ ಅವರಿಗೆ ಸುಳ್ಳು ಕಾಮಗಾರಿ ನಿರ್ವಹಣಾ ಪತ್ರ ಒದಗಿಸಿಕೊಡುವಲ್ಲಿ ಆಗ ಹಾವೇರಿ ಪೌರಾಯುಕ್ತರಾಗಿದ್ದ ರುದ್ರಪ್ಪ ಅವರು ಸಹಕರಿಸಿ ಕ್ರಿಮಿನಲ್ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ದಾಖಲೆ ಪರಿಶೀಲಿಸಿ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದೆ. ಅಲ್ಲದೇ ಆಪಾದಿತರು ಲಂಚ ನಿರೋಧಕ ಕಾಯ್ದೆ ಹಾಗೂ ಐಪಿಸಿ 409 ಹಾಗೂ 420ರನ್ವಯ ಅಭಿಯೋಜನೆಗೆ ಅರ್ಹರಾಗಿರುತ್ತಾರೆ. ಆದ್ದರಿಂದ ಸರ್ಕಾರದಿಂದ ಪೂರ್ವಾನುಮತಿ ನೀಡಬೇಕು ಎಂದು ಲೋಕಾಯುಕ್ತ ಸಂಸ್ಥೆ ಕೋರಿತ್ತು.
ಇದನ್ನು ಪರಿಶೀಲಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ರೇಣುಕಾರಾಧ್ಯ ಅವರು ಎಚ್.ಕೆ. ರುದ್ರಪ್ಪ ಅವರನ್ನು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯನ್ವಯ ಅಭಿಯೋಜನೆಗೆ ಗುರಿಪಡಿಸಲು ಮಂಜೂರಾತಿ ನೀಡಿ ಆದೇಶ ಹೊರಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

