ಹಾವೇರಿ

ಬಿಜೆಪಿ ಬಲವರ್ಧನೆಗೆ ಒತ್ತು

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಅ. 23
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಬೂತ್ ಮಟ್ಟದ ಸಮಿತಿ ರಚನೆಗೂ ಚಾಲನೆ ನೀಡಿದ್ದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಾವೇರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಹಾವೇರಿಯ ಸಿದ್ದರಾಜ ಕಲಕೋಟಿ ಹಾಗೂ ಹಿರೇಕೇರೂರು ತಾಲೂಕಿನ ಗಂಗಾಧರ ಮಲೆಬೆನ್ನೂರು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಗಂಗಾಧರ ಮಾಗನೂರ, ಗಣೇಶಪ್ಪ ಕೋಡಿಹಳ್ಳಿ, ಶೀಲಾ ಲಮಾಣಿ, ರೇಣುಕಾ ಪೂಜಾರ, ಡಾ೤ ಬಸವರಾಜ ಕೆಲಗಾರ, ವೇದವ್ಯಾಸ ಕಟ್ಟಿ, ಜಯಣ್ಣ ಮಲ್ಲಿಗಾರ, ಕಾರ್ಯದರ್ಶಿಗಳಾಗಿ ಶಂಕರಗೌಡ ಪಾಟೀಲ, ಹೊನ್ನಪ್ಪ ಮಾಳಗಿ, ಚೇತನಕುಮಾರ ತಳವಾರ, ಜ್ಯೋತಿ ಸಾತೇನಹಳ್ಳಿ, ರತ್ನಾ ಕಾಶಪ್ಪನವರ, ಅನ್ನಪೂರ್ಣಾ ಕಿಚಡಿ, ಚನ್ನಪ್ಪ ಘಾಸಿ, ಕೋಶಾಧ್ಯಕ್ಷರಾಗಿ ನಿರಂಜನ ಹೇರೂರ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.
ರಸ್ತೆ ದುರವಸ್ಥೆ: ಹಾನಗಲ್ಲ-ಹಾವೇರಿ ಹಾಗೂ ಹಾನಗಲ್ಲ-ತಡಸ ರಾಜ್ಯ ಹೆದ್ದಾರಿ ನಿರ್ಮಾಣ ಸ್ಥಗಿತಗೊಂಡು ಎರಡು ವರ್ಷಗಳಾಗಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿದೆ. ಗುತ್ತಿಗೆದಾರರ ಬದಲಾವಣೆಯಿಂದ ಈ ಮೊದಲು ಕಾಮಗಾರಿ ವಿಳಂಬವಾಗಿತ್ತು. ಈಗ ಹೊಸ ಗುತ್ತಿಗೆದಾರರೂ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ರಸ್ತೆ ನಿರ್ಮಾಣ ಆಗುತ್ತಿರುವ ಕಾರಣ ದುರಸ್ತಿಯನ್ನೂ ಮಾಡಿಲ್ಲ. ಹೀಗಾಗಿ, ಎರಡೂ ರಸ್ತೆಗಳಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಗುತ್ತಿಗೆದಾರರಿಗೆ ಮನವಿ ಮಾಡಿದ್ದರೂ, ರಸ್ತೆಯನ್ನು ತಾತ್ಕಾಲಿಕ ಸಂಚಾರಕ್ಕೂ ಸಿದ್ಧಗೊಳಿಸುತ್ತಿಲ್ಲ ಎಂದು ದೂರಿದರು.
ಹಾವೇರಿ ನಗರದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತಿರುವ ರಸೆ ಕಾಮಗಾರಿಯಿಂದ ಅಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಹಾನಗಲ್ಲ-ತಡಸ ರಸ್ತೆಗೆ ರು. 97 ಕೋಟಿ, ಹಾನಗಲ್ಲ-ಹಾವೇರಿ ರಸ್ತೆಗೆ ರು. 35 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಹಾನಗಲ್ಲ ಬಸ್ ನಿಲ್ದಾಣ ಸಮೀಪದ ಗಣಪತಿ ದೇವಸ್ಥಾನದಿಂದ ನಾಲ್ಕರ ಕ್ರಾಸ್ ವರೆಗಿನ ರಸ್ತೆ ಕಾಮಗಾರಿ ಸೇರಿಲ್ಲ. ಇದನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ಉಳಿದ ಕಡೆ ರಸ್ತೆ ಪಕ್ಕದ ಮನೆಗಳ ಮಾಲೀಕರಿಗೆ ಪರಿಹಾರ ನೀಡುವಂತೆ, ಇಲ್ಲಿನ ಜಾಗೆಗೂ ಕೊಡುತ್ತಾರೋ ಎಂದು ಗೊತ್ತಿಲ್ಲ. ಅಲ್ಲದೆ, ರಸ್ತೆಗೆ ಎಷ್ಟು ಜಾಗೆ ಹೋಗುತ್ತದೆ ಎಂಬ ವಿಷಯದಲ್ಲೂ ಗೊಂದಲವಿದೆ. ಈಗಿರುವ ರಸ್ತೆಯನ್ನು ಕೂಡಲೇ ಸಂಚಾರಯೋಗ್ಯ ಮಾಡಬೇಕು. ಜಾಗೆ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಬೇಕು. ರಸ್ತೆ ಕಾಮಗಾರಿ ವಿಷಯದಲ್ಲಿ ಇರುವ ಗೊಂದಲ ನಿವಾರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಕರೂದಿ ಎಚ್ಚರಿಸಿದ್ದಾರೆ.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ನಿಂಬಣ್ಣನವರ, ಪುರಸಭೆ ಮಾಜಿ ಸದಸ್ಯ ಅನಂತ ವಿಕಾಸ ನಿಂಗೋಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.