ಲೇಖಕರಲ್ಲೂ ಕ್ರಾಂತಿ ಸೃಷ್ಟಿಸಬಲ್ಲ ಚೈತನ್ಯಶಕ್ತಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಅ. 27
ಕೇವಲ ವಿಜ್ಞಾನದಿಂದ ಮಾತ್ರ ದೂರದೃಷ್ಟಿ, ಚಿಂತನೆ ನಡೆಯುವುದಿಲ್ಲ. ಬರವಣಿಗೆಯಂತಹ ವಿಭಿನ್ನ ಜ್ಞಾನ ಹೊಂದಿರುವ ಲೇಖಕರಲ್ಲೂ ಸಮಾಜದಲ್ಲಿ ಹೊಸಕ್ರಾಂತಿ ಸೃಷ್ಟಿಸಬಲ್ಲ ಚೈತನ್ಯಶಕ್ತಿಯಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹುಬ್ಬಳ್ಳಿ ಬಸವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶ್ರೀ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಸ್ಥಳೀಯ ಬಿಇಎಸ್ಎಂ ಪದವಿ ಮಹಾವಿದ್ಯಾಲಯದಲ್ಲಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ರಚಿಸಿದ ಅಪ್ರತಿಮ ಚೇತನ ಭಾಗ-2, ನುಡಿ ಜೇನು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮುಗ್ದ ಹಾಗೂ ನಿಷ್ಕಳಂಕ ಮನಸ್ಸು ಹೊಂದಿದವರು ಮಾತ್ರ ಲೇಖಕರಾಗಲು ಸಾಧ್ಯ. ಬರವಣಿಗೆ ಹಂತದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಅವರಲ್ಲಿರುವ ಸೃಜನಶೀಲತೆ ಹಾಗೂ ಪ್ರತಿಭೆ ಬರವಣಿಗೆ ರೂಪದ ಅವರ ಕೃತಿಗಳಲ್ಲಿ ಮೂಡಿಬಂದಾಗ ಮಾತ್ರ ಅನಾವರಣಗೊಳ್ಳಲಿದೆ ಎಂದರು. ಸಮಾಜದ ಆಂತರಿಕ ಇಣುಕು ನೋಟವನ್ನು ಬಹಿರಂಗಗೊಳಿಸುವ ಶಕ್ತಿ ಇತ್ತೀಚಿನ ದಿನಗಳಲ್ಲಿ ಬರವಣಿಗೆಯಲ್ಲಿ ಅಡಕವಾಗಿದೆ. ವಚನ ಸಾಹಿತ್ಯವನ್ನು ಬರವಣಿಗೆಯಲ್ಲಿ ಪ್ರಸ್ತುತಪಡಿಸುವುದು ಸುಲಭದ ಕೆಲಸವಲ್ಲ. ಕೃತಿಯನ್ನೊಮ್ಮೆ ಅವಲೋಕನ ಮಾಡಿದಾಗ ಜೇನಿಗೆ ನೋವಾಗದಂತೆ ಜೇನುಗೂಡಿನಿಂದ ತುಪ್ಪವನ್ನು ತೆಗೆದ ಹಾಗಿದೆ ಎಂದರು.
ಆಂಗ್ಲ ವ್ಯಾಮೋಹದಲ್ಲಿ ಇಂದು ಕನ್ನಡ ಭಾಷೆ ಬಡವಾಗುವ ಮೂಲಕ ನಾಡಿನ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿಯವರು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ರಚಿಸಿದ್ದು, ಇದು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಸಾಹಿತ್ಯ ಕೃತಿಗಳೆಂದರೆ ಕೇವಲ ಶಬ್ದಗಳ ಜೋಡಣೆಯಲ್ಲ. ಪ್ರತಿಭೆ ಹಾಗೂ ಅನುಭವವಿದ್ದಾಗ ಮಾತ್ರ ಲೇಖಕರಿಂದ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿ ಕದಡುವಂತಹ ವಿವಾದಾತ್ಮಕ ಬರವಣಿಗೆಗಳನ್ನು ಮಾಡುತ್ತಿರುವುದು ತಪ್ಪು ಎಂದರು.
ಸಾಹಿತಿ ಎಂ.ಡಿ. ಗೋಗೇರಿ ಮಾತನಾಡಿ, ರಾಜ್ಯದಲ್ಲಿ ಸುಮಾರು 500ಕ್ಕೂ ಹೆಚ್ಚು ಆಧುನಿಕ ವಚನಕಾರರಿದ್ದು, ಹರ್ಡೇಕರ ಮಂಜಪ್ಪನವರು ಅವರಲ್ಲಿ ಮೊದಲಿಗರಾಗಿದ್ದು ಸಾಹಿತ್ಯ ಕೃತಿಗಳನ್ನು ಜನತೆ ಕೊಂಡು ಓದಿದಾಗ ಮಾತ್ರ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲು ಸಾಧ್ಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ, ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ. ಶಿರೂರ, ತಾಲೂಕು ಕಸಾಪ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ ಉಪಸ್ಥಿತರಿದ್ದರು. ಗಿರೀಶ ಪಟ್ಟಣಶೆಟ್ಟಿ ಸ್ವಾಗತಿಸಿದರು. ಬಿ.ಎಫ್. ದೊಡ್ಮನಿ ವಂದಿಸಿದರು. ಜೀವರಾಜ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

