ಒಡೆದ ಕಾಲುವೆ: ಸ್ಪಷ್ಟೀಕರಣಕ್ಕೆ ಪಟ್ಟು
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಅ. 28
ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಇತ್ತೀಚಿನ ಮಳೆಗೆ ಯೋಜನೆಯಡಿ ನಿರ್ಮಿಸಲಾದ ಕಾಲುವೆಗಳು ಕಿತ್ತು ಹೋಗಿ ಲಕ್ಷಾಂತರ ರು. ಮೌಲ್ಯದ ಬತ್ತದ ಪೈರು ನಾಶವಾಗಿದೆ. ಸಂಬಂಧಿಸಿದ ತಾಂತ್ರಿಕ ಅಭಿಯಂತರನ್ನು ಸಭೆಗೆ ಕರೆದು ಸ್ಪಷ್ಟೀಕರಣ ಪಡೆಯುವಂತೆ ಸದಸ್ಯರು ಪಟ್ಟುಹಿಡಿದ ಘಟನೆ ಸೋಮವಾರ ಸುವರ್ಣಸೌಧದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಕೃಷಿಭೂಮಿಗೆ ನೀರು ಹರಿಸಿ ಅನುಕೂಲ ಕಲ್ಪಿಸಬೇಕಿದ್ದ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ನಿತ್ಯ ಅವಾಂತರ ಸೃಷ್ಟಿಸುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಗಾಯದ ಮೇಲೆ ಬರೆ ಎಳೆದಿದೆ. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸಂತ್ರಸ್ತ ರೈತರಿಗೆ ಗುತ್ತಿಗೆದಾರನಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಸಮ್ಮತಿ ಸೂಚಿಸಿದರು.
ಶಿಕ್ಷಕ-ಚೀಲ: ಸದಸ್ಯ ನಾಗಪ್ಪ ದುಂಡೆಪ್ಪನವರ ಮಾತನಾಡಿ, ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿ, ತರಕಾರಿಯನ್ನು ಮುಖ್ಯ ಅಡುಗೆಯವರೇ ಖರೀದಿಸಬೇಕು. ಅದರೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವ ಬದಲು ಚೀಲ ಹಿಡಿದು ಪೇಟೆಗಳಲ್ಲಿ ತಿರುಗಾಡುತ್ತಿದ್ದಾರೆ. ಈ ವ್ಯವಸ್ಥೆಗೆ ಕಡಿವಾಣ ಹಾಕಿ ಎಂದರು. ಪ್ರತಿಕ್ರಿಯಿಸಿದ ಬಿಇಒ ಪ್ರಸನ್ನಕುಮಾರ, ಶಿಕ್ಷಕರ ಸಹಜವಾಗಿ ಚೀಲ ಹಿಡಿದು ಓಡಾಡಿದರೂ ಜನರಲ್ಲಿ ಸಂಶಯ ಮೂಡುತ್ತದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಮಾಹಿತಿಯಲ್ಲದೆ ಸಭೆಗೆ ಬಂದ ಶಿಶು ಅಭಿವೃದ್ಧಿ ಅಧಿಕಾರಿ ಶಿರೋಳಕರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದರು. ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳ ಸಂಖ್ಯೆ ಗೊತ್ತಿಲ್ಲ ಎಂದರು. ಆಹಾರದ ಬೇಡಿಕೆಯನ್ನು ಸಿಬ್ಬಂದಿ ಸಲ್ಲಿಸುತ್ತಾರೆ, ಕೇಂದ್ರ ವೀಕ್ಷಣೆಗೆ ಜೀಪ್ ಇಲ್ಲ ಎಂಬ ಹಾರಿಕೆ ಉತ್ತರ ನೀಡಿದರು. ಸಂಬಂಧಿಸಿದ ಮಾಹಿತಿ ತರಿಸಿ ಸಭೆಗೆ ನೀಡುವಂತೆ ಟಿಇಒ ಎಸ್.ಆರ್. ಪಾಟೀಲ್ ತಾಕೀತು ಮಾಡಿದರು.
ಸೋರುತ್ತಿರುವ ಹೊಸ ಕಟ್ಟಡ: ಚಿಕ್ಕಬಾಸೂರ ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿರುವ ಉರ್ದು ಪ್ರೌಢಶಾಲಾ ಕಟ್ಟಡ ಉದ್ಘಾಟನೆಯಾಗಿ ಕೆಲ ತಿಂಗಳಲ್ಲೇ ಸೋರುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸದಸ್ಯರು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ನಿರ್ಮಿತಿ ಕೇಂದ್ರದ ಅಭಿಯಂತ ಹನುಮಂತ ಬಂಡಿವಡ್ಡರ, ಎರಡು ಬಾರಿ ಪ್ರತ್ಯೇಕವಾಗಿ ಆರ್ಸಿಸಿ ಹಾಕಿದ್ದರಿಂದ ಹೀಗಾಗಿದೆ, ಎರಡು ದಿನಗಳಲ್ಲಿ ಸರಿಪಡಿಸುವುದಾಗಿ ಸಭೆಗೆ ತಿಳಿಸಿದರು.
ಆತ್ಮಹತ್ಯೆಯೇ ಪರಿಹಾರ?
ಕೃಷಿ ಇಲಾಖೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಸದಸ್ಯೆ ಸುಶೀಲಾ ಮೇಗಳಮನಿ, ಕಳಪೆ ಹತ್ತಿ ಬೀಜದಿಂದಾಗಿ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಚಕಾರವೆತ್ತುತ್ತಿಲ್ಲ. ಹಾಗಾದರೆ ರೈತರ ಸಂಕಷ್ಟ ಪರಿಹರಿಸುವವರು ಯಾರು? ಆತ್ಮಹತ್ಯೆಯೇ ಪರಿಹಾರವೇ ಎಂದು ಪ್ರಶ್ನಿಸಿದರು. ಕೃಷಿ ಅಧಿಕಾರಿ ನಟರಾಜ್ ಪ್ರತಿಕ್ರಿಯಿಸಿ, ಹತ್ತಿ ಬಿತ್ತನೆ ಮಾಡಿದ ತಾಲೂಕಿನ 13,690 ಎಕರೆಯಲ್ಲಿ ಕಳಪೆ ಬೀಜದಿಂದ ಹಾನಿಗೊಳಗಾಗಿದೆ. ಈ ಕುರಿತು 5,562 ರೈತರು ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ತಾಪಂ ಸದಸ್ಯರು ಪಾಲ್ಗೊಂಡಿದ್ದರು.
ಮೆಕ್ಕೆಜೋಳ ನಕಲಿ ಬೀಜ: ಕ್ರಮಕ್ಕೆ ರೈತರ ಆಗ್ರಹ
ಶಿಗ್ಗಾಂವಿ: ತಾಲೂಕಿನ ಧುಂಡಸಿ ಹಾಗೂ ಮಮದಾಪುರ ತಾಂಡಾಗಳ ರೈತರು ಭೂಮಿಜನ್ ಸೀಡ್ಸ್ ಬಿಜಿಎಸ್ 7018 (ಅದಿತಿ) ತಳಿಯ ಕಳಪೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್ ಶಕುಂತಲಾ ಎ. ಚೌಗುಲೆ ಅವರಿಗೆ ಮನವಿ ಅರ್ಪಿಸಿದ್ದಾರೆ.
ಗಿಡಗಳು ಬೆಳೆದು ನಿಂತಿದ್ದರೂ ತನೆಗಟ್ಟಿಲ್ಲ. ಸಣ್ಣ ಬಚ್ಚಿತೆನೆ ಬಿಟ್ಟಿದ್ದು, ಕಾಳುಗಳೇ ಇಲ್ಲ. ಎಕರೆಗೆ ಎರಡು ಪ್ಯಾಕೆಟ್ ಬೀಜ ಬಿತ್ತಿದ್ದೇವೆ. ಅವುಗಳನ್ನು ಮಡ್ಲಿಯ ಕಲ್ಲನಗೌಡ ವೀರನಗೌಡ ಪಾಟೀಲ ಎಂಬುವರಿಂದ ಪ್ಯಾಕೆಟ್ಗೆ ರು. 600ರಂತೆ ನೀಡಿ, ಖರೀದಿಸಿದ್ದೇವೆ. ನಷ್ಟ ಅನುಭವಿಸಿದ್ದೇವೆ. ಪರಿಹಾರ ಕೊಡಿಸಿ ಎಂದು ಆಗ್ರಹಿಸಿದರು.
ತಹಸೀಲ್ದಾರರು ನಷ್ಟ ಅಂದಾಜಿಸಲು ಸ್ಥಳ ಪರಿಶೀಲನೆ ಮಾಡಬೇಕು. ನಕಲಿ ಬೀಜ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ದಾಮ್ಲಪ್ಪ ದಾನಪ್ಪ ರಾಠೋಡ, ನೀಲಕಂಠ ರಾಠೋಡ, ಸೋಮಲಪ್ಪ ವಾ. ಲಮಾಣಿ, ಬಿ.ಎಚ್. ರಾಠೋಡ, ಶೇಕಪ್ಪ ನಾಯಕ, ಜೀವನ ಲಮಾಣಿ, ನಾರಾಯಣ ಲಮಾಣಿ, ಧುಂಡಸಿ, ಮಮದಾಪುರ ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

