ಹಾವೇರಿ

81ನೇ ಸಾಹಿತ್ಯ ಸಮ್ಮೇಳನ ಸ್ಥಳ ಗೊಂದಲ ಬೇಡ

Published On :

ಹಾನಗಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂದರ್ಭ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಕೇಂದ್ರ ಹಾವೇರಿಯಲ್ಲೇ ನಡೆಯಬೇಕು. ಸ್ಥಳ ಬದಲಾವಣೆ ವಿಷಯ ಹುಟ್ಟುಹಾಕಿ ಜಿಲ್ಲೆಯ ಸಾಹಿತ್ಯಾಸಕ್ತರ ಮನಸ್ಸನ್ನು ಕೆಡಿಸದಿರಿ, ಜಿಲ್ಲೆಯ ಸಾಹಿತಿಗಳು, ಹಿರಿಯರು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯತೆಯಿಂದ ಸಮ್ಮೇಳನ ನಡೆಸಲು ಅವಕಾಶ ಮಾಡಿಕೊಟ್ಟು ಗೊಂದಲ ಸೃಷ್ಟಿಸಿ ಸಮ್ಮೇಳನ ಕೈ ತಪ್ಪುವುದು ಬೇಡ ಎಂದು ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ ತಿಳಿಸಿದರು.
ಹಾನಗಲ್ಲಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಹಾವೇರಿ ಜಿಲ್ಲೆ ಸಾಹಿತ್ಯ ಸಾಂಸ್ಕೃತಿಕವಾಗಿ ಹಿರಿಮೆ ಹೊಂದಿದೆ. ಹಾವೇರಿಯಲ್ಲಿ ಸಮ್ಮೇಳನ ನಡೆಸಬೇಕೆಂಬ ಹಲವು ವರ್ಷಗಳ ಇಚ್ಛೆಗೆ ಈಗಲಾದರೂ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿದೆ. ಹಾವೇರಿ ಸಮ್ಮೇಳನ ನಡೆಸಲು ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಅನಗತ್ಯವಾಗಿ ಸಮ್ಮೇಳನ ಸ್ಥಳ ಬದಲಿಸುವ ಪ್ರಸ್ತಾಪ ಮಾಡಿ ಜಿಲ್ಲೆಯ ಸಾಂಸ್ಕೃತಿಕ ಮನಸ್ಸುಗಳನ್ನು ಕೆಡಿಸುವುದು ಬೇಡ. ಭಿನ್ನತೆಗೆ ಅವಕಾಶ ಮಾಡುವುದು ಬೇಡ. ದ್ವಂದ್ವ ಹುಟ್ಟು ಹಾಕದೇ ಹಾವೇರಿಯಲ್ಲಿಯೇ ಸಮ್ಮೇಳನ ನಡೆಸಲು ಮುಂದಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಿದ ಮಾತ್ರಕ್ಕೆ ಸ್ಥಳ ಬದಲಾಯಿಸಲು ಮುಂದಾದರೆ ಜಿಲ್ಲೆಯ ಯಾರಿಂದಲು ಸಹಕಾರ ಸಿಗದು. ಇಡಿ ಜಿಲ್ಲೆಯ ಸಹಕಾರ ಬೇಕು. ಹಾನಗಲ್ಲ ತಾಲೂಕಿನ ಅಧ್ಯಕ್ಷರು ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಯಲಿ ಎಂದು ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಹಾನಗಲ್ಲ ತಾಲೂಕಿನ ಸಾಹಿತ್ಯಾಸಕ್ತರ ಅಭಿಪ್ರಾಯವಲ್ಲ. ಜಿಲ್ಲಾಧ್ಯಕ್ಷರು ಕೂಡ ರಾಣಿಬೆನ್ನೂರು ಎಂದು ಹೇಳುವಾಗ ಜಿಲ್ಲೆಯ ಸಾಹಿತಿಗಳು, ಹಿರಿಯರು, ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೆ ತಮ್ಮ ನಿಲುವು ಪ್ರಕಟಿಸಿರುವುದು ಕೂಡ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಜಿಲ್ಲೆಯ ಅಭಿಪ್ರಾಯವಲ್ಲ ಎಂದರು.
ಹಾವೇರಿಯಲ್ಲಿ ಸಮ್ಮೇಳನ ಏಕೆ ಬೇಡ ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. ಹಾವೇರಿ ಜಿಲ್ಲಾ ಕೇಂದ್ರವಾಗಿ ನೀರು, ವಸತಿ, ಸಾರಿಗೆ, ವಿಶಾಲವಾದ ಮೈದಾನ, ಜಿಲ್ಲಾಡಳಿತ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಕಚೇರಿಗಳ ಸಿಬ್ಬಂದಿಯ ಸಹಾಯ, ಸಹಕಾರ ಎಲ್ಲವೂ ಸಾಧ್ಯ. ಹಾವೇರಿಯಲ್ಲಿ ಎಷ್ಟೇ ದೊಡ್ಡ ಸಮ್ಮೇಳನ ನಡೆಸಲು ಬೇಕಾಗುವ ವ್ಯವಸ್ಥೆ ಇರುವಾಗಲೂ ಸಮ್ಮೇಳನದ ಸ್ಥಳ ಬದಲಾಯಿಸುವ ಪ್ರಯತ್ನ ನಡೆದರೆ ಅದಕ್ಕೆ ತಮ್ಮ ಸಹಮತವಿಲ್ಲ ಎಂದು ಮನೋಹರ ತಹಶೀಲ್ದಾರ ತಿಳಿಸಿದರು.
ಸ್ಥಳ ಬದಲಾಯಿಸುವುದಾದರೆ ಹಾನಗಲ್ಲಿನಲ್ಲಿ ಸಮ್ಮೇಳನ ನಡೆಸಲು ನಾವು ಸಿದ್ಧ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದವರು ಇಲ್ಲಿದ್ದಾರೆ. ಹಾನಗಲ್ಲ ಎಲ್ಲ ಸಂಪನ್ಮೂಲಗಳನ್ನು ಹೊಂದಿದೆ ಎಂದು ತಿಳಿಸಿದರು. ಹಾವೇರಿ ಜಿಲ್ಲೆಯಲ್ಲಿ 6 ವಿಧಾನಸಭಾ ಸದಸ್ಯರಿದ್ದಾರೆ. ಯಾವ ತಾಲೂಕಿನಲ್ಲಾದರೂ ಸಮ್ಮೇಳನ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಹಾವೇರಿ ಕೇಂದ್ರ ಸ್ಥಳದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಮುಖ್ಯ. ಹಾವೇರಿಯಲ್ಲಿ ಸೌಲಭ್ಯ ಹಾಗೂ ಹಾವೇರಿ ಕೇಂದ್ರ ಸ್ಥಳದ ಜನತೆಯ ಸಹಕಾರದ ಬಗ್ಗೆ ಯಾವುದೇ ಅನುಮಾನ ಬೇಡ. ಜಿಲ್ಲಾ ಕಾರ್ಯಕಾರಿ ಸಮಿತಿ ಸಮ್ಮೇಳನದ ಸ್ಥಳ ಬದಲಿಸಲು ಜಿದ್ದಾ ಜಿದ್ದಿಗೆ ಬಿದ್ದಿರುವುದು ಸರಿಯಾದದ್ದಲ್ಲ. ಹಾವೇರಿಯಲ್ಲಿಯೇ ಸಮ್ಮೇಳನ ನಡೆಯಲಿ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಕಸಾಪ ಅಧ್ಯಕ್ಷ ಮುತ್ತಣ್ಣ ನಾಸಿಕ, ಸದಸ್ಯ ಸಿ.ಎಸ್. ಬಡಿಗೇರ, ಚಂದ್ರಶೇಖರ್ ಗೂಳಿ, ವಿಷ್ಣುಕಾಂತ ಜಾಧವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.