ಹಾವೇರಿ

ಭಕ್ತ ಸಾಗರದ ಮಧ್ಯೆ ಹಾವನೂರು ದ್ಯಾಮವ್ವ ದೇವಿ ಜಾತ್ರೆ

Published On :

ಕನ್ನಡಪ್ರಭ ವಾರ್ತೆ, ಗುತ್ತಲ, ಫೆ. 5
ಸಮೀಪದ ಹಾವನೂರ ದ್ಯಾಮವ್ವನ ಜಾತ್ರೆ ಭಕ್ತ ಸಾಗರದ ಮಧ್ಯೆ ಬುಧವಾರ ಅದ್ಧೂರಿಯಾಗಿ ಜರುಗಿತು.
ದೇವಿ ಗಡಿಗೆ ತೆರಳುವ ಮೂಲಕ ಪ್ರಸಿದ್ಧ ದ್ಯಾಮವ್ವನ ಜಾತ್ರೆಗೆ ಬುಧವಾರ ತೆರೆಬಿದ್ದಿತು.
ಐದು ದಿನಗಳವರೆಗೆ ನಡೆಯುವ ಈ ಜಾತ್ರೆಯಲ್ಲಿ ಕೊನೆಯ ದಿನವಾದ ಬುಧವಾರ ನಸುಕಿನಲ್ಲಿ ದೇವಿಯ ಭವ್ಯ ಮೆರವಣಿಗೆಯೊಂದಿಗೆ ಹಾಗೂ ಅಲಂಕೃತ ಸಿಡಿಮದ್ದುಗಳ ಪ್ರದರ್ಶನದ ನಡುವೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ದೇವಿಯ ಮೂರ್ತಿ ಚೌತಮನಿ ಕಟ್ಟೆಗೆ ಬಂದು ಸ್ಥಾಪನೆಯಾಗುವುದು ಒಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು, ವರ್ಷದಲ್ಲಿ ಒಮ್ಮೆ ಮಾತ್ರ ದೇವಿಯ ದರ್ಶನವಾಗುವುದು ಈ ಜಾತ್ರೆಯ ಮತ್ತೊಂದು ವಿಶೇಷ. ಆದ್ದರಿಂದ ವಿವಿಧೆಡೆಯಿಂದ ಭಕ್ತ ಸಾಗರವೇ ಹರಿದು ಬಂದಿತ್ತು.
ಬುಧವಾರ ಬೆಳಗ್ಗೆಯಿಂದಲೇ ಭಕ್ತರು ಹಣ್ಣು, ಕಾಯಿ, ಹರಕೆಯನ್ನು ನೀಡುವುದರ ಮುಖಾಂತರ ಸಂಜೆಯವರೆಗೂ ದೇವಿಯ ದರ್ಶನ ಪಡೆದು ಪನೀತರಾದರು. ಸಂಜೆಯಾಗುತ್ತಿದ್ದಂತೆ ಅಲಂಕೃತ ಮಂಟಪದಲ್ಲಿ ದೇವಿಯನ್ನು ಕುಳ್ಳಿರಿಸಿ, ಸಕಲ ವಾದ್ಯ ವೈಭವಗಳೊಂದಿಗೆ ದ್ಯಾಮವ್ವ ನಿನ್ನಾಲ್ಕ ಉದೋ..ಉದೋ ಎಂಬ ಜಯಕಾರದ ನಡುವೆ ದ್ಯಾಮವ್ವ ಗಡಿಗೆ ತೆರಳಿದಳು.
ಬಸ್ ಸೌಲಭ್ಯ: ದೇವಿ ಜಾತ್ರೆಯ ಕೊನೆಯ ದಿನವಾದ ಬುಧವಾರ ಹಾವೇರಿ, ರಾಣಿಬೆನ್ನೂರ, ಲಕ್ಷ್ಮೇಶ್ವರ ಡಿಪೋದಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಚಕ್ಕಡಿ, ಟ್ರ್ಯಾಕ್ಟರ್, ಟಂಟಂ, ಟೆಂಪೋ, ಬಸ್‌ಗಳಲ್ಲಿ ಬಂದ ಭಕ್ತರು ದೇವಿಗೆ ವಿವಿಧ ಹರಕೆ, ಪೂಜೆ ಸಲ್ಲಿಸಿದರು. ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ವಾಹನಗಳಲ್ಲಿ ಹಾವನೂರಗೆ ಹರಿದು ಬಂದಿದ್ದರಿಂದ ಪ್ರತಿ ವರ್ಷದಂತೆ ಈ ಸಾರಿಯೂ ಗ್ರಾಮದಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಿ.ಮೀಗಟ್ಟಲೇ ಸಂಚಾರ ದಟ್ಟಣೆಯಾಗಿತ್ತು. ಮೂರ್ನ್ನಾಲ್ಕು ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಭಕ್ತರು ಕೊನೆಗೆ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.