ಹಾವೇರಿ

ಸಕಲ ಪ್ರಾಣಿಗಳಿಗೂ ನೀರೇ ಜೀವ: ಸದಾಶಿವ ಸ್ವಾಮೀಜಿ

Published On :

ಹಾವೇರಿ: ಆಡಂಬರಕ್ಕೆ ಹಾಕಿಕೊಳ್ಳುವ ಬೆಳ್ಳಿ, ಬಂಗಾರದ ಆಭರಣಗಳನ್ನು ರತ್ನಗಳೆಂದು ತಿಳಿಯುವುದು ಮೂಢರ ಲಕ್ಷಣ. ಆದರೆ, ಮಾನವ ಜೀವಿಗೆ ಅಗತ್ಯವೆನಿಸಿದ ನೀರು, ಅನ್ನ ಮತ್ತು ಒಳ್ಳೆಯ ಮಾತುಗಳು ನಿಜವಾದ ರತ್ನಗಳು ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗಜಾನನ ಯುವಕ ಮಂಡಳಿ ಸಂಯೋಗದಲ್ಲಿ ಇಲ್ಲಿನ ದಾನೇಶ್ವರಿ ನಗರದಲ್ಲಿ ನಿರ್ಮಿಸಿದ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಪೃಥ್ವಿಯ ಮೇಲಿರುವ ಸಕಲ ಪ್ರಾಣಿಗಳಿಗೂ ನೀರೇ ಜೀವ. ನೀರು ಅಮೃತವಿದ್ದಂತೆ, ಹೋಗುವ ಪ್ರಾಣವನ್ನು ಉಳಿಸುತ್ತದೆ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮನುಷ್ಯ ಜೀವಿಗೆ ಬಹುತೇಕ ರೋಗಗಳು ನೀರಿನಿಂದಲೇ ಬರುತ್ತವೆ. ಆದ್ದರಿಂದ ಎಲ್ಲರೂ ಶುದ್ಧ ನೀರು ಕುಡಿಯುವ ಮೂಲಕ ಆರೋಗ್ಯವಂತರಾಗಿ ಬಾಳಬೇಕು ಎಂದು ತಿಳಿಸಿದರು. ಮನುಷ್ಯ ಭೂಮಿಗೆ ಬಂದ ತಕ್ಷಣವೇ ಆತನ ಮಜ್ಜನಕ್ಕೆ, ಮರಣದ ನಂತರವೂ ಸ್ನಾನ ಮಾಡಿಸಲು ನೀರು ಅವಶ್ಯ. ನಾಗರಿಕರ ಅನುಕೂಲಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣೇಶ ಮರಾಠೆ ಮಾತನಾಡಿ, ಶುದ್ಧ ನೀರು, ಆಹಾರ ಮತ್ತು ಗಾಳಿ ಸೇವನೆ ಮಾಡುವುದು ಮಾನವ ಜೀವಿಯ ಜನ್ಮಸಿದ್ಧ ಹಕ್ಕು. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಈ ಮೂರು ಅಂಶಗಳು ಅತ್ಯವಶ್ಯ ಎಂದು ಹೇಳಿದರು. ರು. 7ರಿಂದ 8 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದ್ದು ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು. ವ್ಯವಸ್ಥಿತ ಕಟ್ಟಡ, ವಿದ್ಯುತ್ ಹಾಗೂ ಬೋರ್‌ವೆಲ್ ವ್ಯವಸ್ಥೆ ಇದ್ದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸಿಕೊಡುವುದಾಗಿ ತಿಳಿಸಿದರು.
ದಾನೇಶ್ವರಿ ನಾಗರಿಕ ವೇದಿಕೆಯ ಎಸ್.ಕೆ. ಮೆಣಸಿನಹಾಳ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಿವಬಸವ ಶ್ರೀಗಳು, ತಹಸೀಲ್ದಾರ್ ಪಂಪನಗೌಡ ಮೇಲ್ಸಿಮೆ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಆಯುಕ್ತ ಬಿ.ಎಸ್. ಶಿವಕುಮಾರಯ್ಯ, ನಗರಸಭೆ ಸದಸ್ಯ ಸಚಿನ್ ಡಂಬಳ, ಡಾ. ರಾಜಕುಮಾರ ಮರೋಳ, ಪ್ರಕಾಶ ಶೆಟ್ಟರ, ಸದಾನಂದ ಶೆಟ್ಟಿ ಅನೇಕರು ಭಾಗವಹಿಸಿದ್ದರು. ಐಶ್ವರ್ಯ ಕಡ್ಡಿಪುಡಿ ಪ್ರಾರ್ಥಿಸಿದರು. ಅನಿಲಕುಮಾರ ಮರೋಳ ಸ್ವಾಗತಿಸಿದರು. ಶಿವಾನಂದ ಅಣಜಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.