ಬಾಲ ಸಂಜೀವಿನಿ: ಜಿಲ್ಲೆಯಲ್ಲಿ ಆಸ್ಪತ್ರೆ ಗುರ್ತಿಸಿ
ಹಾವೇರಿ: ಬಾಲ ಸಂಜೀವಿನಿ ಯೋಜನೆಯಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಯೋಜನೆಯ ನಿಯಮದ ಪ್ರಕಾರ ಎಲ್ಲ ಸೌಕರ್ಯವುಳ್ಳ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದನ್ನು ಗುರುತಿಸಿ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆನೀಡಿದರು. ಬಾಲ ಸಂಜೀವಿನಿ ಯೋಜನೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಜಿಲ್ಲೆಯಲ್ಲಿ ಯಾವ ಆಸ್ಪತ್ರೆಯನ್ನೂ ಗುರುತಿಸಿಲ್ಲ. ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದಾಗ ಸಚಿವರು, ಯೋಜನೆಯ ನಿಯಮದ ಪ್ರಕಾರ ಸೌಲಭ್ಯಗಳಿರುವ ಜಿಲ್ಲೆಯಲ್ಲಿರುವ ಆಸ್ಪತ್ರೆಯನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಸೇರಿಸಲಾಗುವುದು. ಇದರಿಂದ ಜಿಲ್ಲೆಯ ಮಕ್ಕಳಿಗೆ ಜಿಲ್ಲೆಯಲ್ಲಿಯೇ ಚಿಕಿತ್ಸೆ ಸಿಗುತ್ತದೆ ಎಂದರು.
ಅನ್ನನಾಳ ಶಸ್ತ್ರಚಿಕಿತ್ಸೆ, ಗುದದ್ವಾರ ಶಸ್ತ್ರಚಿಕಿತ್ಸೆ, ಹರ್ನಿಯಾ, ಹೃದಯ ತೊಂದರೆ, ಕಣ್ಣಿನ ತೊಂದರೆ, ಶ್ವಾಸಕೋಶ ಸಮಸ್ಯೆ ಸೇರಿದಂತೆ ಇನ್ನಿತರ ಭೀಕರ ಸಮಸ್ಯೆಗಳಿಗೆ ರು. 35 ಸಾವಿರ ಗಳಿಂದ ರು. 50 ಸಾವಿರ ವರೆಗೂ ಬಾಲ ಸಂಜೀವಿನಿ ಯೋಜನೆಯಲ್ಲಿ ಧನಸಹಾಯ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 1,889 ಅಪೌಷ್ಟಿಕ ಮಕ್ಕಳಿದ್ದು, ಅದರಲ್ಲಿ ಕೇವಲ 143 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಲ್ಲಿದ್ದು, ಉಳಿದ 1,636 ಮಕ್ಕಳ ಸ್ಥಿತಿ ಏನಾಗಿದೆ ಎಂದು ಸಚಿವೆ ಉಮಾಶ್ರೀ ಜಿಲ್ಲೆಯ ಎಲ್ಲ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳನ್ನು ಪ್ರಶ್ನಿಸಿ, ವರದಿ ಪಡೆದರು. ಎಲ್ಲ ಅಧಿಕಾರಿಗಳು ಮಕ್ಕಳ ಆರೋಗ್ಯ ಸುಧಾರಿಸಿದ್ದು, ಬಹಳಷ್ಟು ಮಕ್ಕಳಲ್ಲಿ ತೂಕ ಹೆಚ್ಚಾಗಿಲ್ಲ ಎಂದು ತಿಳಿಸಿದರು.
ಆಗ ಸಚಿವರು, ತೂಕ ಹೆಚ್ಚಾಗದಿರಲು ಆನುವಂಶಿಕತೆ ಕಾರಣವೋ, ಮನೆ ಸ್ವಚ್ಛತೆ ಸಮಸ್ಯೆಯೋ, ಗರ್ಭಸ್ಥಿತಿಯಲ್ಲಾದ ನ್ಯೂನತೆಯೋ ಬೇರೆ ಏನಾದರೂ ಕಾರಣವಿದೆಯೋ ಎಂಬುದನ್ನು ಅರಿಯುವ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಸಬೇಕು. ಇದಕ್ಕಾಗಿ ಪಾಲಕರ ಸಭೆಯನ್ನೂ ಕರೆದು ಚರ್ಚಿಸಬೇಕು ಎಂದರು.
ಎಚ್ಚರವಹಿಸಿ...
ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ತಯಾರಿಸುವಾಗ ಮಕ್ಕಳು ಅಡುಗೆ ಮಾಡುವಲ್ಲಿ ಬಾರದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎಚ್ಚರಿಕೆ ವಹಿಸಬೇಕು. ಸ್ವಲ್ಪ ಎಚ್ಚರಿಕೆ ತಪ್ಪಿಸಿದರೂ ಮಕ್ಕಳು ಬಿಸಿ ಅಡುಗೆ ಪದಾರ್ಥ, ಬೆಂಕಿ ಅವಘಡಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಹಾಗೇನಾದರೂ ಆದರೆ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ 1,200 ಅಂಗನವಾಡಿ ಕಟ್ಟಡಗಳನ್ನು ಕಟ್ಟಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಲವು ಕಡೆಗಳಲ್ಲಿ ನಿವೇಶನ ಸಮಸ್ಯೆಯಿದ್ದು, ಈ ಸಮಸ್ಯೆಯನ್ನು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡೇ ಕಟ್ಟಡ ಪ್ರಸ್ತಾವನೆ ಕಳುಹಿಸಬೇಕು. ಇಲ್ಲದಿದ್ದರೆ ಮೊದಲು ಮಂಜೂರಿಯಾಗುವುದು ಬಳಿಕ ನಿವೇಶನ ಇಲ್ಲದೆ ರದ್ದಾಗುವುದು ಆಗುತ್ತದೆ ಎಂದು ಉಮಾಶ್ರೀ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಬಾಡಿಗೆ ಕಟ್ಟಡಗಳಿಗೆ ಬಾಡಿಗೆ ಹಣವನ್ನು ಪರಿಷ್ಕರಿಸಿ ಹೆಚ್ಚಿಸಲಾಗಿದೆ. ಮಹಾನಗರ ಪಾಲಿಕೆ ಸ್ಥಳಗಳಲ್ಲಿ ತಿಂಗಳಿಗೆ ರು. 5 ಸಾವಿರ, ನಗರಗಳಲ್ಲಿ ರು. 3 ಸಾವಿರ ಹಾಗೂ ಗ್ರಾಪಂಗಳಲ್ಲಿ ರು. 750 ಬಾಡಿಗೆ ಹಣ ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕ ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಸಿಇಓ ಕೆ.ಬಿ. ಆಂಜನಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

