ಅಪರಿಚಿತ ವೃದ್ಧೆಗೆ ಸಾರ್ವಜನಿಕರೆ ದಿಕ್ಕು
ಶಿಗ್ಗಾಂವಿ: ವಯೋವೃದ್ಧ ಮಹಿಳೆಯೊಬ್ಬರನ್ನು ಜೀವನದ ಸಂಧ್ಯಾ ವಯಸ್ಸಿನಲ್ಲಿ ಜೋಪಾನ ಮಾಡದೇ ಮನೆಯವರೇ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಘಟನೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯಿಂದ ಬಂದ ಅಪರಿಚಿತ ವೃದ್ಧಮಹಿಳೆ ಕಳೆದ ಹದಿನೈದು ದಿನಗಳಿಂದ ಒಂದೇ ಕಡೆಗೆ ಮಲಗಿದ್ದಾಳೆ. ಎದ್ದು ಓಡಾಡಲಾರದಷ್ಟು ಅನ್ನ ಆಹಾರವಿಲ್ಲದೇ ನಿಶಕ್ತಳಾಗಿ ನರಳುವುದನ್ನು ಕಂಡು ಇಲ್ಲಿನ ಸಾರ್ವಜನಿಕರೆ ಅನ್ನ ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ. ಅವಳನ್ನು ವೃದ್ಧಾಶ್ರಮ ಅಥವಾ ಮಹಿಳಾ ಸಾಂತ್ವನ ಕೇಂದ್ರಗಳಂತಹ ಸೇವಾಸಂಸ್ಥೆಗಳ ಮೂಲಕ ವೃದ್ಧೆಗೆ ಅನುಕೂಲತೆ ಮಾಡಿಕೊಡುವ ಗೋಜಗೂ ಸಂಬಂಧಪಟ್ಟವರು ಹೋಗಿಲ್ಲ. ನಿಶಕ್ತಿಯಿಂದ ಬಳಲಿದ ಇವಳಿಗೆ ಸ್ಪಷ್ಟವಾಗಿ ಮಾತನಾಡಲು ಆಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಅವಳ ಈ ಸ್ಥಿತಿಗೆ ದನಿಗೂಡಿಸಬೇಕಾದ ಅವಶ್ಯಕತೆ ಇದೆ ಎಂದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ವೃದ್ಧೆ ಸುಮಾರು 70 ವರ್ಷದವಳಿದ್ದು. ತಲೆಯ ತುಂಬಾ ಜೋಗುತಿಯ ಉದ್ದನೆಯ ಜಡೆ ಹೊಂದಿದ್ದಾಳೆ. ದೂರದ ಶಿವಮೊಗ್ಗದಿಂದ ಶಿಶುವಿನಾಳ ಶರೀಫ್ಗಿರಿಗೆ ಬಂದದ್ದಾಗಿ ಕ್ಷೀಣವಾದ ಧ್ವನಿಯಲ್ಲಿ ತಿಳಿಸುತ್ತಾಳೆ. ತನ್ನ ಬಂಧುಗಳ ಬಗ್ಗೆ ಅವಳಿಂದ ಸಮರ್ಪಕ ಉತ್ತರ ಮಾತ್ರ ಸಿಗುತ್ತಿಲ್ಲ. ವಯೋವೃದ್ಧೆಯನ್ನು ಸಾಕಲಾರದೇ ಸಂಬಂಧಿಕರೇ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುವ ಇಲ್ಲಿನ ಸ್ಥಳೀಕರು ಅವಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಳಿವಯಸ್ಸಿನ ಮಹಿಳೆಗೆ ಮಾಡಿದ ಅನ್ಯಾಯಕ್ಕಾಗಿ ಸಾರ್ವಜನಿಕರು ಅವಳ ಕುಟುಂಬ ವರ್ಗದವರನ್ನು ಶಪಿಸುವುದು ಸಾಮಾನ್ಯವಾಗಿದ್ದು. ಹೆತ್ತ ಮಕ್ಕಳಿಗೂ ಬೇಡವಾಗಿ, ಮುಪ್ಪು ಅಡರಿಸುವಾಗ ವಯೋವೃದ್ಧೆ ಹೋಗುವುದಾದರೂ ಎಲ್ಲಿಗೆ? ಇಲ್ಲಿ ಯಾರು ಅವಳ ಬೇಕು, ಬೇಡಗಳನ್ನು ಪೂರೈಸಬೇಕು. ಎಲ್ಲವೂ ಒಂದು ಯಕ್ಷಪ್ರಶ್ನೆ? ಕೊನೆಗೂ ವೃದ್ಧೆಯ ಸ್ಥಿತಿ ನೋಡಲಾಗದೆ ತಾಲೂಕಾಸ್ಪತ್ರೆ, ಆ್ಯಂಬುಲೆನ್ಸ್ ಸಿಬ್ಬಂದಿ ಸಹಾಯದಿಂದ ತಾಲೂಕು ಪಂಚಾಯ್ತಿ ಸದಸ್ಯ ಸಾತಣ್ಣವರ ಚಿಕಿತ್ಸೆಗಾಗಿ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಈಗಲಾದರು ಸಂಬಂಧಿಕರು ವಯೋವೃದ್ಧೆಯ ಆರೋಗ್ಯ ವಿಚಾರಿಸಿ ಕರೆದೊಯ್ಯುವರೊ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

