ಹಾವೇರಿ

ದುಶ್ಚಟ ತ್ಯಾಗವೇ ಅಭಿವೃದ್ಧಿ: ದಿಂಗಾಲೇಶ್ವರಶ್ರೀ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 2
ಆಧುನಿಕ ಜೀವನಕ್ಕೆ ಮಾರುಹೋಗಿ, ಒತ್ತಡಕ್ಕೆ ಸಿಲುಕಿ, ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ದೂರವಿರುವುದೇ ಅಭಿವೃದ್ಧಿಗೆ ದಾರಿ ಎಂದು ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದಲ್ಲಿ ಬಾಳೇಹೊಸೂರಿನ ದಿಂಗಾಲೇಶ್ವರ ಮಠದ ಲೋಕಾರ್ಪಣೆ ನಿಮಿತ್ತ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಧಾರ್ಮಿಕ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿಜ್ಞಾನ-ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಒಂದು ಹನಿ ರಕ್ತ ಉತ್ಪಾದಿಸುವ ಯಂತ್ರವನ್ನು ಸಂಶೋಧಿಸುವುದು ಸಾಧ್ಯವಾಗಿಲ್ಲ. ಆಹಾರದಿಂದ ಉತ್ಪಾದನೆಯಾಗುವ ರಕ್ತ ಭಗವಂತನ ಅದ್ಭುತ ಸೃಷ್ಟಿಗಳಲ್ಲಿ ಒಂದು. ದುಡಿದ ಹಣವನ್ನೆಲ್ಲ ದುಶ್ಚಟಗಳಿಗೆ ಸುರಿಯುವ ಮೂಲಕ ರಕ್ತ ನಾಶಪಡಿಸಿಕೊಂಡು ಶಕ್ತಿಹೀನರಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚಿದೆ. ದುಶ್ಚಟಗಳಿಗೆ ಅಂಟಿಕೊಂಡು ಶಾರೀರಿಕ, ಮಾನಸಿಕ ಸ್ವಾಸ್ಥ್ಯ ಹಾಳು ಮಾಡಿಕೊಂಡು ಕುಟುಂಬಗಳನ್ನು ಬೀದಿಗೆ ತಂದಿರುವ ಯುವಕರ ಮನಸ್ಸನ್ನು ಪರಿವರ್ತಿಸಲು ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳಲು ಗದಗ, ಹಾವೇರಿ ಜಿಲ್ಲೆಯ 112 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.
ಮಾ. 7ರಿಂದ ವಿವಿಧ ಕಾರ್ಯಕ್ರಮ
ಬಾಳೇಹೊಸೂರಿನಲ್ಲಿ ದಿಂಗಾಲೇಶ್ವರ ನೂತನ ಮಠ ಹಾಗೂ ದಾಸೋಹ ಮನೆ ಲೋಕಾರ್ಪಣೆ, 30 ದಿನಗಳ ಪ್ರವಚನ, 1111 ಕ್ಷೀರ ಕುಂಭೋತ್ಸವ, ಸಾಮೂಹಿಕ ವಿವಾಹ, ದೀಕ್ಷೆ-ಅಯ್ಯಾಚಾರ, 5001 ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಠಾಧೀಶರ ಪರಿಷತ್, ಅನಾಥ ದತ್ತು ಮಕ್ಕಳ ಸ್ವೀಕಾರ ಕಾರ್ಯಕ್ರಮಗಳು ಮಾ. 7ರಿಂದ 9ರ ವರೆಗೆ ನೆರವೇರಲಿವೆ. ನಾಡಿನ ಸಂತ ಶಕ್ತಿಯನ್ನು ಒಗ್ಗೂಡಿಸಿ ಭಾವೈಕ್ಯ ಸಾರುವ ಉದ್ದೇಶದಿಂದ ಬೃಹತ್ ಸಂತ ಸಮಾವೇಶ ಆಯೋಜಿಸಿರುವುದಾಗಿ ತಿಳಿಸಿದರು.
ಸಮಾಜ ಕಟ್ಟುವುದು ಸ್ವಾಮಿಯ ಧರ್ಮ
ಅಧ್ಯಕ್ಷತೆ ವಹಿಸಿದ್ದ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಮಠ ನಿರ್ಮಿಸಿ ಲಿಂಗಪೂಜೆಯಲ್ಲಿ ನಿರತವಾದರೆ ಸಾಲದು, ಅದರ ಪೂರ್ವದಲ್ಲಿ ಭಕ್ತರ ಮನಸ್ಸು ಮತ್ತು ಸಮಾಜ ಕಟ್ಟುವುದು ಸ್ವಾಮಿಗಳ ಧರ್ಮ. ಮಠ ನಿರ್ಮಿಸುವುದು ಸಮಾಜದ ಧರ್ಮ, ಸಮಾಜ ಕಟ್ಟುವುದು ಸ್ವಾಮಿಯ ಧರ್ಮ ಎನ್ನುವುದನ್ನು ನಿರೂಪಿಸಿರುವ ದಿಂಗಾಲೇಶ್ವರ ಸ್ವಾಮೀಜಿ ಸ್ವಸ್ಥ ಯುವ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು, ಸ್ವಾಮಿ ವಿವೇಕಾನಂದರ ಕನಸು ಸಾಕಾರಗೊಳಿಸಲು ಮುಂದಾಗಿದ್ದು ಹೆಮ್ಮೆಯ ಸಂಗತಿ ಎಂದರು.
ನೇತೃತ್ವ ವಹಿಸಿದ್ದ ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮನದ ಅಜ್ಞಾನ-ಅಂಧಕಾರ ದೂರವಾಗಬೇಕಿದೆ. ತಪ್ಪಿ ನಡೆದಾಗ ತಿದ್ದಿ ಬುದ್ಧಿ ಹೇಳುವ ನಿಷ್ಠುರತೆಯನ್ನು ಸ್ವಾಮಿಗಳು ಪ್ರದರ್ಶಿಸಿದರೆ ಸಾಮಾಜಿಕ ಪರಿವರ್ತನೆಯ ಗಾಳಿ ಬೀಸಲಿದೆ. ಸಮಾಜ ತಿಳಿಯಾಗದೇ ಇದ್ದರೆ ಕೌಟುಂಬಿಕ ಸ್ವಾಸ್ಥ್ಯವೇ ಹದಗೆಡಲಿದೆ ಎಂದರು.
ದುಶ್ಚಟಗಳನ್ನು ತ್ಯಜಿಸುವುದಾಗಿ ಐವರು ವ್ಯಸನಿಗಳು ತಮ್ಮ ಚಟಗಳನ್ನು ಸ್ವಾಮೀಜಿ ಜೋಳಿಗೆಗೆ ಅರ್ಪಿಸಿ, ಜ್ಯೋತಿ ಬೆಳಗಿಸುವ ಮೂಲಕ ಧಾರ್ಮಿಕ ಗೋಷ್ಠಿ ಉದ್ಘಾಟಿಸಿದರು. ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ಹರನಾಳ ಹಿರೇಮಠದ ಸಂಗನಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ದೇವರು, ಮಲ್ಲನಕೇರಿಯ ಬಸವರಾಜ ದೇವರು, ಸೊಲ್ಲಾಪುರದ ಪ್ರಭು ದೇವರು ಉಪಸ್ಥಿತರಿದ್ದರು. ಹೊಳೆಯಪ್ಪ ಗವಾಯಿಗಳು ಪ್ರಾರ್ಥಿಸಿದರು. ಚನ್ನಬಸಯ್ಯ ಹಿರೇಮಠ ತಬಲಾ ಸಾಥ್ ನೀಡಿದರು. ರಾಜಣ್ಣ ಅಂಕಸಖಾನಿ ಸ್ವಾಗತಿಸಿದರು. ಗುಂಡೂರಿನ ಅನ್ನದಾನಶಾಸ್ತ್ರಿ ಪ್ರಾಸ್ತವಿಕವಾಗಿ ಮಾತನಾಡಿದರು. ಷಣ್ಮುಖಪ್ಪ ಮುಚ್ಚಂಡಿ ನಿರೂಪಿಸಿದರು. ಶಿವಕುಮಾರ ದೇಶಮುಖ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.