47 ಅಕ್ರಮ ಸಿಲಿಂಡರ್ ವಶ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 9
ಪಟ್ಟಣದ ಹೋಟೆಲ್, ದಾಭಾ ಹಾಗೂ ರಸ್ತೆ ಬದಿಯ ಗೂಡಂಗಡಿಗಳ ಮೇಲೆ ಗುರುವಾರ ಹಠಾತ್ ದಾಳಿ ಮಾಡಿದ ತಹಸೀಲ್ದಾರ್ ಶಿವಶಂಕರ ನಾಯಕ್ ನೇತೃತ್ವದ ತಂಡ ಅಕ್ರಮವಾಗಿ ಬಳಕೆ ಮಾಡುತ್ತಿದ್ದ ಗೃಹಬಳಕೆ ಸಿಲಿಂಡರ್ಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಒಟ್ಟು 8 ಜನರ ತಂಡ ಮೂರು ತಾಸಿಗೂ ಹೆಚ್ಚು ಅವಧಿಯ ಕಾರ್ಯಾಚರಣೆ ನಡೆಸಿ, ಹೋಟೆಲ್ಗಳ ಅಡುಗೆ ಕೋಣೆ ಬೆದಕಿ 12 ಸಿಲಿಂಡರ್ ಪತ್ತೆಹಚ್ಚಿತು.
ಸಿಕ್ಕ ಕೆಲವು ಸಿಲಿಂಡರ್ಗಳು ಅನಧಿಕೃತವಾಗಿದ್ದು, ಯಾವುದೇ ದಾಖಲೆಗಳೂ ಇರಲಿಲ್ಲ. ಇನ್ನೂ ಕೆಲವೆಡೆ ನೆಪಮಾತ್ರಕ್ಕೆ ಹೊರಗಡೆ ವಾಣಿಜ್ಯ ಬಳಕೆಯ ಸಿಲಿಂಡರ್ ಇಟ್ಟು, ಒಳಗಡೆ ಗೃಹಬಳಕೆ ಸಿಲಿಂಡರ್ಗಳನ್ನೇ ಬಳಸುತ್ತಿದ್ದುದು ಗಮನಕ್ಕೆ ಬಂತು. ಎಪಿಎಂಸಿ ಯಾರ್ಡ್ನಲ್ಲಿ ಆಂಧ್ರ ಮೂಲಕ ಕುಟುಂಬವೊಂದು ನಡೆಸುತ್ತಿದ್ದ ಹೋಟೆಲ್ನಲ್ಲೂ ಸ್ಥಳೀಯ ಗ್ಯಾಸ್ ಏಜೆನ್ಸಿಯಿಂದ ವಿತರಿಸಿದ ಸಿಲಿಂಡರ್ ಸಿಕ್ಕಿತು. ಅವರ ಬಳಿ ಗುರುತಿನ ಚೀಟಿಯೂ ಇಲ್ಲ.
ಸಾಮಾನ್ಯರಂತೆ ಉಡುಪು ಧರಿಸಿದ್ದ ತಹಸೀಲ್ದಾರ್ ಗ್ಯಾಸ್ ಡೆಲಿವರಿ ವಾಹನ ಏರಿ, ಹೋಟೆಲ್ಗಳಿಗೆ ನುಗ್ಗಿದರು. ಬಿಸಿ ಟೀ-ಕಾಫಿ ಕೊಟ್ಟು ಗಿರಾಕಿಗಳ ಚಳಿ ಬಿಡಿಸುತ್ತಿದ್ದ ಹೋಟೆಲ್ ಮಾಲೀಕರ ಮೈ ಚಳಿಯನ್ನು ತಹಸೀಲ್ದಾರ್ ಬಿಡಿಸಿದರು. ಕೆಲವು ಮಾಲೀಕರು ಮಾಣಿಗಳನ್ನು ಮುಂದೆ ಬಿಟ್ಟು, ತಾವು ತಲೆ ಮರೆಸಿಕೊಂಡರು. ಇನ್ನೂ ಕೆಲವು ಹೋಟೆಲ್ ಮಾಲೀಕರು ದಾಳಿಗೆ ಪ್ರತಿರೋಧ ತೋರಿದರು. ಹೊಸ ಸಂಪರ್ಕ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಏಜೆನ್ಸಿಯವರು ಹೇಳುತ್ತಿದ್ದಾರೆ. ಮೆಣಸಿನಕಾಯಿ ಸೀಸನ್ ಇದೆ. ದುಬಾರಿ ಬೆಲೆ ತೆತ್ತು ಸಿಲಿಂಡರ್ ತಂದಿದ್ದೇವೆ. ಇದನ್ನೇ ನೆಚ್ಚಿಕೊಂಡಿರುವ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರೂ ಬಗ್ಗಲಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್, ಗೃಹಬಳಕೆ ಸಿಲಿಂಡರ್ ಅಕ್ರಮವಾಗಿ ಪೂರೈಸಿದ ಹಾಗೂ ಬಳಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ತನಿಖೆ ಪ್ರಾರಂಭಿಕ ಹಂತದಲ್ಲಿದೆ. ಮುಂದೆ ಮನೆಗಳ ಮೇಲೂ ದಾಳಿ ಮಾಡಿ, ಅನಧಿಕೃತ ಸಂಪರ್ಕ ಪಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಿಲಿಂಡರ್ ಮಾಫಿಯಾ ತಡೆಗೆ ಸರ್ಕಾರಗಳು ದೊಡ್ಡ ಸರ್ಕಸ್ ಮಾಡುತ್ತಿವೆ. ಕಠಿಣ ಕಾನೂನು ಜಾರಿ ಮಾಡಿದರೂ ಅಕ್ರಮ ತಡೆ ಕಷ್ಟಸಾಧ್ಯವಾಗಿದೆ. ಹೀಗಾಗಿ, ಹಠಾತ್ ದಾಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಎಎಸ್ಐ ರಮಜಾನಿಯವರ, ರಾಜು ಗೊಂದೇರ, ಕಂದಾಯ ನಿರೀಕ್ಷಕ ಬಣಕಾರ, ಗ್ರಾಮ ಲೆಕ್ಕಾಧಿಕಾರಿಗಳಾದ ರಾಜು ತೊಪ್ಪಲದ, ವಿ.ಐ. ಹಾವೇರಿ ದಾಳಿ ನಡೆಸಿದ ತಂಡದಲ್ಲಿದ್ದರು.
34 ಸಿಲಿಂಡರ್ ವಶ
ರಾಣಿಬೆನ್ನೂರು: ಗೃಹಬಳಕೆಯ ಸಿಲಿಂಡರ್ಗಳ ಅಕ್ರಮ ಬಳಕೆ ವಿರುದ್ಧ ಸಮರ ಸಾರಿರುವ ಇಲ್ಲಿನ ತಾಲೂಕು ಆಡಳಿತ ನಗರದಲ್ಲಿ ಗುರುವಾರ ದಾಳಿ ನಡೆಸಿ, 34 ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದೆ. ರೇಲ್ವೆ ನಿಲ್ದಾಣ ಸಮೀಪ ಹಾಗೂ ಕುಮಾರಪಟ್ಟಣಂಗಳಲ್ಲಿ ದಾಳಿ ಮಾಡಿದ ತಂಡ, ವಿವಿಧ ಹೋಟೆಲ್ಗಳು, ಗೂಡಂಗಡಿಗಳು ಹಾಗೂ ಧಾಬಾಗಳಲ್ಲಿ ಅಕ್ರಮ ಸಿಲಿಂಡರ್ ಪತ್ತೆಹಚ್ಚಿ, ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ. ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ತಹಸೀಲ್ದಾರ್ ಹನುಮಂತಪ್ಪ ಬಡದಾಳ, ಕಂದಾಯ ಅಧಿಕಾರಿಗಳಾದ ಅಶೋಕ ಅರಳೇಶ್ವರ, ಗುಡ್ಡಪ್ಪ ತಹಶೀಲ್ದಾರ, ವಾಗೀಶ ಮಳಿಮಠ, ಟಿ.ಆರ್. ವಿಶ್ವನಾಥ ದಾಳಿ ತಂಡದಲ್ಲಿದ್ದರು. ದಾಳಿ ಮುಂದುವರಿಯಲಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

