ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇರಲಿ: ಕೆರೂರ
ಬ್ಯಾಡಗಿ: ಆತ್ಮವಿಶ್ವಾಸವು ವಿದ್ಯಾರ್ಥಿಗಳಲ್ಲಿ ಕಲಿಕೆ ಹಂಬಲವನ್ನು ಹೆಚ್ಚಿಸುತ್ತದೆ. ಮುಗಿದು ಹೋದದ್ದನ್ನು ಚಿಂತಿಸದೇ, ಬರುವ ದಿನಗಳನ್ನು ಸಾರ್ಥಕಪಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವೆಂದು ಶಿಕ್ಷಕ ಎಂ.ಎಂ. ಕೆರೂರ ಹೇಳಿದರು.
ಸ್ಥಳೀಯ ಎಸ್.ಎಸ್.ಪಿ.ಎನ್. ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿರುವ ಅಪಾರ ಶಕ್ತಿಯನ್ನು ಅರಿವು ಮಾಡಿಕೊಡಬೇಕಾಗಿದ್ದು, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಅತ್ಯಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಜೀವನದಲ್ಲಿ ಉದಾತ್ತ ಗುರಿಯನ್ನಿಟ್ಟುಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ವ್ಯಕ್ತಿಯಾದವನು ತಂದೆ ತಾಯಿಗಳ, ಕಲಿಸಿದ ಗುರು, ಜನ್ಮಭೂಮಿಯ ಋಣ ತೀರಿಸುವ ಸಂಕಲ್ಪದೊಂದಿಗೆ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಧೈರ್ಯಗುಂದದೆ, ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸಿದಾಗ ಮಾತ್ರ ಸಮರ್ಪಕವಾಗಿ ಉತ್ತರಿಸಲು ಸಾಧ್ಯವೆಂದರು. ಸಂಸ್ಥೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಹಾಗೂ ಮಾನವೀಯ ಮೌಲ್ಯ ಮರೆಯುತ್ತಿದ್ದಾರೆ. ಕೇವಲ ವಿದ್ಯಾವಂತರಾದರೆ ಸಾಲದು, ಸುಸಂಸ್ಕೃತರಾಗುವುದು ಕೂಡ ಅಷ್ಟೇ ಅವಶ್ಯ. ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಹಿರಿಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕಾಗಿದೆ ಎಂದರು.
ಸೌಭಾಗ್ಯ ಹೊಸಳ್ಳಿ, ಸಿದ್ಧಲಿಂಗೇಶ ಕೊಪ್ಪದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ ಸುಷ್ಮಿತಾ ಶಿಡೇನೂರ ಅವರನ್ನು ಹಾಗೂ ಕ್ರೀಡೆ, ವಚನ ಕಮ್ಮಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಿ.ಎನ್. ಸವಿತಾ ಮತ್ತು ಕವಿತಾ ಹೊರಟ್ಟಿ ವಿದ್ಯಾರ್ಥಿಗಳಿಗೆ ದೀಪದಾನ ಮಾಡಿದರು.
ವೇದಿಕೆಯಲ್ಲಿ ಜೀವವಿಮಾ ಶಾಖೆ ವ್ಯವಸ್ಥಾಪಕ ಪುಟ್ಟಪ್ಪ ಅಚ್ಚಗೇರಿ, ಉಪಪ್ರಾಚಾರ್ಯ ಎಂ.ಕೆ. ಹೊಸಮನಿ, ಉಪನ್ಯಾಸಕ ಬಿ.ಕೆ. ಹೆಡಿಯಾಲ ಉಪಸ್ಥಿತರಿದ್ದರು. ಕಾಂಚನಾ ಚೌಟಿ ಸಂಗಡಿಗರು ಪ್ರಾರ್ಥಿಸಿದರು. ಅನ್ನಪೂರ್ಣಾ ಕರ್ಜಗಿ ಸ್ವಾಗತಿಸಿದರು. ಕೆ.ಎಚ್. ವೆಂಕಟೇಶ ವಂದಿಸಿದರು. ಎಚ್.ಜಿ. ಸುಮಂಗಲಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

