ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ
ಹಾನಗಲ್ಲ: ಮನೆಗಿಂತ ಹೆಚ್ಚಾಗಿ ವಿದ್ಯಾಲಯಗಳಲ್ಲಿ ಮಕ್ಕಳಿಗೆ ಬದುಕಿನ ಶಿಕ್ಷಣ, ಸಂಸ್ಕಾರ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ, ಸಾಹಿತಿ ಮಾರುತಿ ಶಿಡ್ಲಾಪುರ ಹೇಳಿದರು. ಹಾನಗಲ್ಲ ತಾಲೂಕಿನ ಯಳವಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕೇವಲ ಅಂಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಹಾಗೂ ಬದುಕಿನ ಶಿಕ್ಷಣ ನೀಡದೇ ಇರುವುದೇ ಮಕ್ಕಳನ್ನು ಅಧೀರರನ್ನಾಗಿಸುತ್ತಿದೆ. ಜೀವನವನ್ನು ಪ್ರೀತಿಸುವುದನ್ನು ಕಲಿಸಬೇಕು. ಪರೋಪಕಾರ, ಸಮಾಜವನ್ನು ಪ್ರೀತಿಸುವುದು, ಸಾಂಸ್ಕೃತಿಕ ಮನಸ್ಸನ್ನು ಕಲಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಖರ್ಚಿನದಾಗಿದೆ. ಮಕ್ಕಳು ಪಾಲಕರ ಇಚ್ಛೆ, ಅಪೇಕ್ಷೆಗನುಗುಣವಾಗಿ ನಡೆದುಕೊಳ್ಳಬೇಕು. ನಮ್ಮಿಂದ ಒಳ್ಳೆಯದನ್ನು ಮಾಡಲಾಗದಿದ್ದರೂ ಕೆಟ್ಟದ್ದನ್ನು ಮಾಡಲಾರದಂತೆ ನಮ್ಮ ನಡೆ ನುಡಿ ಇರಲಿ. ನಾಳಿನ ಬದುಕಿಗಾಗಿ ಇಂದಿನಿಂದಲೇ ಜೀವನ ಕಟ್ಟಿಕೊಳ್ಳಬೇಕು. ಆರೋಗ್ಯದತ್ತ ನಿಗಾವಹಿಸಬೇಕು ಎಂದು ಸಲಹೆ ನೀಡಿದರು. ರಜಾ ದಿನಗಳನ್ನು ವ್ಯರ್ಥವಾಗಿ ಪೋಲು ಮಾಡದೇ ಮುಂದಿನ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ನಡೆಯುವ ಶಿಬಿರಗಳಲ್ಲಿ ಪಾಲ್ಗೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಗೀತ ಶಿಕ್ಷಕ ವೆಂಕಟೇಶ ಪೂಜಾರ, ಗವಾಯಿಗಳು ಗುರು-ಹಿರಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಬೇಕು. ಗುರು ಹಾಗೂ ಗುರಿಯನ್ನು ಬಿಟ್ಟು ಬದುಕಲಾಗದು. ಮಕ್ಕಳನ್ನು ಕಾಳಜಿಯಿಂದ ಕಾಣುವ ಶಿಕ್ಷಕ ತನ್ನ ಮಕ್ಕಳಂತೆ ಶಾಲಾ ಮಕ್ಕಳನ್ನೂ ಬೆಳೆಸುತ್ತಾನೆ. ಯಾವುದೇ ಗುರು ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸಲು ನಿರಂತರವಾಗಿ ಯತ್ನಿಸುತ್ತಿರುತ್ತಾನೆ. ಇದನ್ನರಿತು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಬೇಕು. ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವುದು ಹಾಗೂ ಶಾಲಾ ಅಭ್ಯಾಸ ಮುಗಿದ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಂಪ್ರದಾಯ ಒಂದು ಸಾಂಸ್ಕೃತಿಕ ವಿನಿಮಯ ಎಂದರು. ಯಳವಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಸ್ತುತ ಶೈಕ್ಷಣಿಕ ವರ್ಷದ ಆದರ್ಶ ವಿದ್ಯಾರ್ಥಿ ಪ್ರಶಸ್ತಿಯನ್ನು ಶ್ಯಾಮಸುಂದರ ಕಾಳೇರ ಹಾಗೂ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಐಶ್ವರ್ಯ ಕಮಾಟಿ ಅವರಿಗೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಲಿಂಗರಾಜ ಕುರುಬರ, ಸಚಿನ ಮಂಡಕ್ಕಿ, ಐಶ್ವರ್ಯ ಕಮಾಟಿ, ಸಮಿವುಲ್ಲಾ ರಾಣಿಬೆನ್ನೂರು, ವಿದ್ಯಾ ಪಾಟೀಲ, ಬಸೀರಾಬಿ ಅಂಗಡಿ ಮಾತನಾಡಿದರು.
ಶಿಕ್ಷಕರಾದ ಆರ್.ಎಂ. ಪೂಜಾರ, ಸಂಜೀವರೆಡ್ಡಿ, ಸಂಗಪ್ಪ. ಕೆ, ಚಂದ್ರಪ್ಪ ಸಿ.ಬಿ., ಜಾವೇದ ಡಾಂಗೆ, ಉಮೇಶ, ಎ.ಎಂ. ಬಿರಾದಾರ ಎಫ್.ಬಿ. ಈಳಿಗೇರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

