ಹಾವೇರಿ

ಕ್ರಿಯಾಶೀಲತೆಯಿಂದ ಯಶಸ್ವಿ ಬದುಕು: ಸಿ.ಎಂ. ಉದಾಸಿ

Published On :

ಹಾನಗಲ್ಲ:  ಸಾಮರಸ್ಯ, ಸಹಬಾಳ್ವೆ, ಸಹಕಾರದ ಮೂಲಕ ಕ್ರಿಯಾಶೀಲ ಚಟುವಟಿಕೆ ಹೊಂದಿ ವಿದ್ಯಾರ್ಥಿ ಗುಣಮಟ್ಟದ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಿನ ಯಶಸ್ಸು ಕಾಣಬೇಕಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಕರೆ ನೀಡಿದರು.
ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಯ ಪರಿಪಾಲನೆ ದಿನಚರಿಯನ್ನು ಯೋಜಿಸಿಕೊಂಡು ಬದುಕಿನಲ್ಲಿ ಯಶಸ್ಸು ಕಾಣಬೇಕು. ಸಮಯ ವ್ಯರ್ಥವಾಗಿ ಹಾಳು ಮಾಡಬಾರದು. ಬದುಕು ಹಾಗೂ ಸಮಯದ ಶಿಸ್ತು ಯಶಸ್ಸಿನ ಗುಟ್ಟು. ನಾಳಿನ ಭಾರತ ನಿರ್ಮಾಣದಲ್ಲಿ ಸುಶಿಕ್ಷಿತ ಯುವಕರ ಪಾತ್ರ ಮಹತ್ವದ್ದಾಗಿದೆ. ಕಾಲ ಬದಲಾದಂತೆ ಹೊಸ ಸಂಶೋಧನೆ ಆವಿಷ್ಕಾರಗಳನ್ನು ಅಳವಡಿಸಿಕೊಂಡು ತಂತ್ರಜ್ಞಾನ ಬಳಸಿಕೊಂಡು ಬೆಳೆಯಬೇಕಾಗಿದೆ. ದೇವರು, ಧರ್ಮ, ಸಮಾಜಮುಖಿ ಸೇವೆಗೆ ಹೆಸರಾದ ಹಾನಗಲ್ಲ ಪುಣ್ಯಕ್ಷೇತ್ರದಲ್ಲಿ ಅಧ್ಯಯನ ಮಾಡುವುದೇ ಒಂದು ಪವಿತ್ರ ಕಾರ್ಯ ಎಂದರು.  ಅತಿಥಿಯಾಗಿ ಮಾತನಾಡಿದ ಅಕ್ಕಿಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ದಿಲೀಪ ಮುಗಳಿ, ಶಿಕ್ಷಣ ಮನಸ್ಸು ಹಾಗೂ ಬುದ್ಧಿಯ ಬಾಗಿಲನ್ನು ತೆರೆಯಬೇಕು. ಶಿಕ್ಷಣ ಒಂದು ಅಂತರಂಗದ ಸಂಸ್ಕಾರ. ಇದೊಂದು ಅರಿವು. ವಿದ್ಯಾರ್ಥಿಯಾದವರು ತಮ್ಮ ಸಾಮರ್ಥ್ಯದ ಅರಿವಿಗೆ ಮುಂದಾಗಬೇಕು. ಬದುಕಿನಲ್ಲಿ ವಚನಬದ್ಧತೆ, ಇಚ್ಛಾಶಕ್ತಿ, ಕಠಿಣ ಪರಿಶ್ರಮ, ಚಾರಿತ್ರ್ಯ, ಸಕಾರಾತ್ಮಕ ನಿಲುವು, ಗಟ್ಟಿ ನಿರ್ಧಾರ ಹಾಗೂ ತನ್ನ ನಡೆ-ನುಡಿಗಳಲ್ಲಿ ನಂಬಿಕೆ ಇರಬೇಕು. ಮೌಲ್ಯಯುತ ಬದುಕು ನಡೆಸದಿದ್ದರೆ ಸಮಾಜ ವ್ಯಕ್ತಿಗೆ ಛೀಮಾರಿ ಹಾಕುತ್ತದೆ ಎಂದು ಎಚ್ಚರಿಸಿದ ಅವರು, ಯೋಗ, ಧ್ಯಾನ, ಭಕ್ತಿಯನ್ನು ಅಳವಡಿಸಿಕೊಳ್ಳಿ. ಹಿರಿಯರನ್ನು ಕಿರಿಯರು ಅನುಕರಿಸುತ್ತಾರೆ ಎಂಬ ಎಚ್ಚರಿಕೆ ಇರಲಿ. ವಾಮಮಾರ್ಗಗಳು ಬದುಕಿಗೆ ಯಶಸ್ಸು ನೀಡಲಾರವು ಎಂದರು. ವೇದಿಕೆಯಲ್ಲಿ ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿರ್ದೇಶಕ ಗುರುಸಿದ್ದಪ್ಪ ಕೊಂಡೋಜಿ, ಪ್ರಾಚಾರ್ಯ ಎನ್. ಸದಾಶಿವಪ್ಪ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೇಮಕಿಶನ್ ಬಳ್ಳಾರಿ, ಸೌಮ್ಯ ಚಳಕಟ್ಟಿ, ಜಿ.ಪಿ. ಜೀತೆಂದ್ರ ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 2012ನೇ ಸಾಲಿನ ಏಳನೇ ರ್ಯಾಂಕ್ ಪಡೆದ ವಿದ್ಯಾರ್ತಿನಿ ಪುಷ್ಪಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ರೀನಾ ಕಾಟೇಕರ ಭರತನಾಟ್ಯದ ಮೂಲಕ ಗಮನಸೆಳೆದರು. ಖ್ವಾಜಮೋಹಿದ್ದೀನ ಮೈಗುದ್ದೀನ ಸ್ವಾಗತಿಸಿದರು. ಅನುಪಮಾ ಬಿ.ಪಿ. ನಿರೂಪಿಸಿದರು. ಶರಣಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.