ಕವಿವಿ ಘಟಿಕೋತ್ಸವಕ್ಕೆ ಆಹ್ವಾನವಿಲ್ಲ
ಕರ್ನಾಟಕ ವಿಶ್ವ ವಿದ್ಯಾಲಯ ಇದೇ 25ರಂದು ಘಟಿಕೋತ್ಸವ ಆಚರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆಯಾದರೂ, ಘಟಿಕೋತ್ಸವದ ಕೇಂದ್ರ ಬಿಂದುಗಳೆನಿಸಿಕೊಂಡಿರುವ ಪಿಎಚ್ಡಿ ಅಧ್ಯಯನ ಪೂರ್ಣಗೊಳಿಸಿದ ಹಾಗೂ ಚಿನ್ನದ ಪದಕ ಪಡೆಯಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಇನ್ನೂ ಅಧಿಕೃತ ಆಹ್ವಾನ ತಲುಪಿಲ್ಲ.
ಹೌದು, ಸದಾ ಒಂದಿಲ್ಲೊಂದು ವಿವಾದದಿಂದಾಗಿ ಸುದ್ದಿಯಲ್ಲಿರುವ ಕವಿವಿ ಇದೀಗ ಘಟಿಕೋತ್ಸವಕ್ಕೆ ಆಹ್ವಾನ ನೀಡುವಲ್ಲೂ ಎಡವಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆಲ್ಲ ಘಟಿಕೋತ್ಸವ ನಡೆಯುವುದಕ್ಕೆ ಒಂದು ವಾರ ಮೊದಲೇ ವಿದ್ಯಾರ್ಥಿಗಳಿಗೆ ಆಹ್ವಾನ ಪತ್ರ ಕಳುಹಿಸುತ್ತಿದ್ದ ಕವಿವಿ, ಈ ಬಾರಿ ಘಟಿಕೋತ್ಸವ ಆಚರಿಸುವ ಹೊಸ್ತಿಲಲ್ಲಿ ನಿಂತಿದ್ದರೂ ಆಹ್ವಾನ ಪತ್ರ ಮುಟ್ಟಿಸುವ ಗೋಜಿಗೆ ಹೋಗಿಲ್ಲ.
ಏಕೆ ಆಹ್ವಾನ?: ಪಿಎಚ್ಡಿ ಪದವಿ ಪೂರ್ಣಗೊಳಿಸಿದ ಹಾಗೂ ಚಿನ್ನದ ಪದಕ ಪಡೆಯಲಿರುವ ವಿದ್ಯಾರ್ಥಿಗಳಿಗೆ ಶಿಷ್ಟಾಚಾರದ ಪ್ರಕಾರ ಕವಿವಿ ಘಟಿಕೋತ್ಸವಕ್ಕೆ ಮುನ್ನ ಅಧಿಕೃತ ಆಹ್ವಾನ ಪತ್ರಿಕೆ ಕಳುಹಿಸಿಕೊಡಬೇಕು. ಆಹ್ವಾನ ಪತ್ರಿಕೆಯೊಟ್ಟಿಗೆ ವಿದ್ಯಾರ್ಥಿ ಕುಳಿತುಕೊಳ್ಳುವ ಆಸನದ ಸಂಖ್ಯೆ ಹಾಗೂ ವಿದ್ಯಾರ್ಥಿ, ಪಾಲಕರು ಸೇರಿದಂತೆ ಮೂವರಿಗೆ ಪಾಸ್ ತಲುಪಿಸಲಾಗುತ್ತದೆ. ಈ ಹಿಂದಿನ ದಿನಗಳಲ್ಲಿ ವಾರ ಒಪ್ಪತ್ತಿನ ಮುಂಚೆ ಆಹ್ವಾನ ಪತ್ರಿಕೆ ವಿದ್ಯಾರ್ಥಿಗಳ ಕೈ ಸೇರುತ್ತಿತ್ತು. ಆದರೆ ಈ ಬಾರಿ ಘಟಿಕೋತ್ಸವದ ಹೊಸ್ತಿಲಲ್ಲಿ (ಶುಕ್ರವಾರ) ಅಸಾಮಾನ್ಯ ವಿದ್ಯಾವಿಷಯಕ ಪರಿಷತ್ ಸಭೆ ನಡೆಸಿದೆಯಲ್ಲದೇ, ಈ ಹೊತ್ತಿನಲ್ಲೂ ಆಹ್ವಾನ ಪತ್ರಿಕೆ ವಿದ್ಯಾರ್ಥಿಗಳ ಕೈ ಸೇರಿಲ್ಲ.
ಅವಿಸ್ಮರಣೀಯ ದಿನ: ವರ್ಷಕ್ಕೊಮ್ಮೆ ಬರುವ ಘಟಿಕೋತ್ಸವ ವಿದ್ಯಾರ್ಥಿಗಳ ಪಾಲಿಗೆ ಅವಿಸ್ಮರಣೀಯ ದಿನ. ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು, ಪಿಎಚ್ಡಿ ವಿದ್ಯಾರ್ಥಿಗಳಿಗೆ ಈ ದಿನ ಪದವಿ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕೆಂಬ ಬಯಕೆ ವಿದ್ಯಾರ್ಥಿಗಳದ್ದಾಗಿರುತ್ತದೆ. ಆದರೆ ಆಹ್ವಾನ ಪತ್ರಿಕೆ ಕೈ ಸೇರದ ಪರಿಣಾಮ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಎಂದು ನಡೆಯುತ್ತಿದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಮತ್ತೆ ಕೆಲವರು ಅಧ್ಯಯನ ಮುಗಿದಿರುವ ಕಾರಣ ಪರ ಸ್ಥಳಕ್ಕೆ ಹೋಗಿರುತ್ತಾರೆ. ಇಂಥವರಿಗೆ ಪೂರ್ವ ಮಾಹಿತಿ ಸಿಗದಿರುವ ಪರಿಣಾಮ ಘಟಿಕೋತ್ಸವಕ್ಕೆ ಬರಲು ಸಾಧ್ಯವಾಗುವುದಿಲ್ಲ. ಏತನ್ಮಧ್ಯೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎನ್ನುವಂತೆ ಕವಿವಿ ಗುರುವಾರ ರಾತ್ರಿ ವೆಬ್ಸೈಟ್ನಲ್ಲಿ ಘಟಿಕೋತ್ಸವ ನಡೆಯುತ್ತಿದೆ ಎಂದು ಪ್ರಕಟಿಸಿದೆ. ಆದರೆ ವೆಬ್ಸೈಟ್ ನೋಡಿಕೊಂಡು ಘಟಿಕೋತ್ಸವಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಎಷ್ಟು? ಎನ್ನುವ ಪ್ರಶ್ನೆ ವಿದ್ಯಾರ್ಥಿಗಳದ್ದಾಗಿದೆ. ಅಲ್ಲದೇ ಇದೀಗ ಆಹ್ವಾನ ಪತ್ರ ರವಾನಿಸಿದರೂ ಘಟಿಕೋತ್ಸವಕ್ಕೆ ಒಂದು ದಿನ ಮೊದಲು ಅಥವಾ ಘಟಿಕೋತ್ಸವ ಮುಗಿದ ಬಳಿಕ ವಿದ್ಯಾರ್ಥಿಗಳ ಕೈಗೆ ಆಮಂತ್ರಣ ಸಿಕ್ಕರೂ ಆಶ್ಚರ್ಯ ಪಡಬೇಕಿಲ್ಲ.
ಕವಿವಿ ಆಹ್ವಾನ ನೀಡುವಲ್ಲಿ ಈ ರೀತಿಯ ಅವಾಂತರ ಸೃಷ್ಟಿಸಿದ್ದರೆ, ಪಕ್ಕದ ಬಿಜಾಪುರ ಮಹಿಳಾ ವಿವಿ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಕನಿಷ್ಠ 15 ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಆಹ್ವಾನ ತಲುಪಿಸಿದೆ.
ಗೌಡಾ ಗೊಂದಲ: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಘಟಿಕೋತ್ಸವ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ನಡೆಯಬೇಕಿತ್ತು. ಆದರೆ ಈ ಬಾರಿ ವಿಳಂಬವಾಗಿದೆ. ಇದಕ್ಕೆ ಕವಿವಿ ತಾಂತ್ರಿಕ ಕಾರಣದ ಸಬೂಬು ನೀಡುತ್ತಿದೆ. ಆದರೆ ಸಿದ್ಧತೆ, ಹೊಂದಾಣಿಕೆ ಕೊರತೆ ಪ್ರಮುಖ ಕಾರಣ. ಎಲ್ಲದಕ್ಕೂ ಮುಖ್ಯವಾಗಿ ಗೌರವ ಡಾಕ್ಟರೇಟ್ ನೀಡುವುದಕ್ಕೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆದಿದೆ. ಗೌರವ ಡಾಕ್ಟರೇಟ್ಗೆ ಹೆಸರು ಸೂಚಿಸಿ ಕವಿವಿ ಸಲ್ಲಿಸಿರುವ ಪಟ್ಟಿಗೆ ರಾಜ್ಯಪಾಲರ ಅಂಕಿತ ಇನ್ನೂ ಬಿದ್ದಿಲ್ಲ. ಶುಕ್ರವಾರ ಅಸಾಮಾನ್ಯ ವಿದ್ಯಾವಿಷಯಕ ಪರಿಷತ್ ಸಭೆ ನಡೆದಾಗಲೂ ಗೌರವ ಡಾಕ್ಟರೇಟ್ ಯಾರಿಗೆ ನೀಡಲಾಗುತ್ತಿದೆ ಎಂಬ ಸಂಗತಿ ಬಹಿರಂಗ ಪಡಿಸಿಲ್ಲ. ಮಾ. 24ರಂದು ಗೌರವ ಡಾಕ್ಟರೇಟ್ ಪಡೆದವರ ಹೆಸರು ಪ್ರಕಟಿಸುವುದಾಗಿ ಕುಲಪತಿ ಎಚ್. ಬಿ. ವಾಲೀಕಾರ ತಿಳಿಸಿದ್ದಾರೆ. ಈ ಗೊಂದಲವೂ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಆಹ್ವಾನ ಪತ್ರಿಕೆ ಕಳುಹಿಸಲು ವಿಳಂಬವಾಗಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

