ಶಿಗ್ಗಾಂವಿಯಲ್ಲಿ ರಂಗೇರಿದ ಹೋಳಿ
ಶಿಗ್ಗಾಂವಿ: ಪಟ್ಟಣದಲ್ಲಿ ಶನಿವಾರ ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ರಂಗಿನಾಟದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಪಾಲ್ಗೊಂಡು ಪರಸ್ಪರ ಬಣ್ಣ ಎರಚಿ ಸಂತಸಪಟ್ಟರು. ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಚುನಾವಣಾ ನೀತಿ ಸಂಹಿತೆಯ ಮಧ್ಯೆಯೂ ಸಡಗರದಿಂದ ರಂಗಪಂಚಮಿಯನ್ನು ಶಾಂತಿಯುತವಾಗಿ ಆಚರಿಸಲಾಯಿತು. ಶುಕ್ರವಾರ ರಾತ್ರಿ ದೊಡ್ಡಾಟ, ಸಣ್ಣಾಟ, ಗೀಗೀ ಪದ, ಕಾಮಣ್ಣನ ಪದಗಳು ಹಳಪೇಟೆಯ ಕಾಮನಬೈಲಿನಲ್ಲಿ ಜರುಗಿದವು. ಶನಿವಾರ ಬೆಳಗ್ಗೆಯಿಂದ ಮಕ್ಕಳು, ಯುವಕರು ಪರಸ್ಪರ ಬಣ್ಣ ಹಾಕುತ್ತಾ, ಪಿಚಕಾರಿಗಳನ್ನು ಸಿಡಿಸುತ್ತಾ ಆನಂದಿಸಿದರು. ವಿವಿಧ ವೇಷಧರಿಸಿ ಕೆಲ ಯುವಕರ ಗುಂಪು ಸೋಗು ಹಾಕಿಕೊಂಡು ಮಾಡುತ್ತಿದ್ದ ನೃತ್ಯ ಎಲ್ಲರ ಗಮನ ಸೆಳೆಯುತ್ತಿತ್ತು. ಸೋಗಿನ ಮೆರವಣಿಗೆಯು ಈಶ್ವರ ದೇವಸ್ಥಾನದಿಂದ ಆರಂಭವಾಗಿ ಮುಖ್ಯ ರಸ್ತೆಗಳಲ್ಲಿ ಸಾಗಿ ಕುಂಬಾರ ಓಣಿ ಮೂಲಕ ಹಳೆ ತಹಸೀಲ್ದಾರ್ ಕಚೇರಿ ರಸ್ತೆ ಮೂಲಕ ಮರಳಿ ಸಂತೆ ಮೈದಾನದಲ್ಲಿ ಕಾಮದಹನದ ಮೂಲಕ ಹೋಳಿ ಹಬ್ಬವು ಮುಕ್ತಾಯಗೊಂಡಿತು.
ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ
ಹಾವೇರಿ: ಜನ್ಮಪೂರ್ವ ಮತ್ತು ಜನ್ಮ ನಂತರದಿಂದ ಮಕ್ಕಳ ಸಂಸ್ಕಾರ ಪ್ರಾರಂಭವಾಗಿ ಅವರ ಅಂತ್ಯದವರೆಗೂ ಇರುತ್ತದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳಿರುವಾಗ ಅವರ ಪಾಲಕರು ಸಂಸ್ಕಾರ, ಸದ್ಭಾವನೆ, ಸದಾಚಾರ, ಪ್ರೀತಿ ತೋರಿಸಿದರೆ ಮಕ್ಕಳು ವಿಕಸಿತವಾಗಿ ಸಮಾಜದಲ್ಲಿ ತಮ್ಮ ಸ್ಥಾನಮಾನ ಅರಿತು ಯಾವುದೇ ಬಾಲಾಪರಾಧಕ್ಕೆ ಗುರಿಯಾಗುವುದಿಲ್ಲ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಸ್. ಸಾವಿತ್ರಿ ವಿನಾಯಕ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲ ನ್ಯಾಯ ಮಂಡಳಿ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯ ಸಭಾಭವನದಲ್ಲಿ ಜರುಗಿದ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವಿಕಸನಕ್ಕೆ ಮತ್ತು ಅವರ ಅಭಿವೃದ್ಧಿಗೆ ಪಾಲಕರೇ ಹೊಣೆ. ಮಕ್ಕಳಿಗೆ ಮನೆಯಲ್ಲಿ ಮತ್ತು ಸಮಾಜದಲ್ಲಿ ಒಳ್ಳೆಯ ವಾತಾವರಣವನ್ನು ಪಾಲಕರು ನಿರ್ಮಿಸಿದಲ್ಲಿ ಮಕ್ಕಳು ಅದನ್ನೇ ಅನುಸರಿಸಿ ಸುಸಂಸ್ಕೃತರಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕಾಗಿ ಮಕ್ಕಳಿಗೆ ಶಿಕ್ಷಣ ಮುಖ್ಯ. ಮೂಲ ಸೌಕರ್ಯಗಳಿಂದ ವಂಚಿತರಾದ ಮಕ್ಕಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಸರ್ಕಾರವು ಬಾಲ ನ್ಯಾಯ ಮಂಡಳಿಯನ್ನು ಸ್ಥಾಪಿಸಿದ್ದು, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಅವರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ ಜಿಲ್ಲಾ ಆಸ್ಪತ್ರೆ ಮಾನಸಿಕ ತಜ್ಞೆ ಡಾ. ಪಿ. ಲೀಲಾ ಮಾತನಾಡಿ, ಅಪ್ರಾಪ್ತ ಮಕ್ಕಳು ತಿಳಿವಳಿಕೆ ಇಲ್ಲದೆ ಯಾವುದಾದರೂ ಚಿಕ್ಕ-ಪುಟ್ಟ ತಪ್ಪು ಮಾಡಿ ಕಾನೂನಿನಡಿಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವರಿಗೆ ತಮ್ಮ ತಪ್ಪಿನ ಅರಿವು ಆಗುವಂತೆ ಸರಳ ಶಿಕ್ಷೆ ನೀಡಿ ಅವರ ಭವಿಷ್ಯಕ್ಕೆ ಒಂದು ಅವಕಾಶ ಕೊಡಬೇಕು. ಮಕ್ಕಳು ಬಾಲಾಪರಾಧಿಯಾಗಲು ಅವರ ಮನೆಯ ವಾತಾವರಣವೇ ಕಾರಣ. ಪೋಷಕರು ಮೊದಲು ಉತ್ತಮ ಸಂಸ್ಕಾರಿಗಳಾಗಬೇಕು. ಪಾಲಕರನ್ನು ಅನುಸರಿಸಿ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ವಿಕಸನಮಾಡಿಕೊಳ್ಳುತ್ತವೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ ಅವರು ಮಕ್ಕಳ ಹಕ್ಕುಗಳ ಮತ್ತು ಬಾಲ ನ್ಯಾಯ ಕಾಯ್ದೆ ಕುರಿತು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಎಂ.ವಿ. ಚನ್ನಕೇಶವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ರವಿ ಡಿ.ಅರಿ, ಎಸ್.ಬಿ. ಕೆಂಭಾವಿ , ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ, ಕಾರ್ಯದರ್ಶಿ ಎಸ್.ಎಸ್. ಹಿರೇತನದ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಸ್.ಕುದರಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

