ಹಾವೇರಿ

ಕರಡಿ ದಾಳಿ: ಬೆಳೆ ನಾಶ, ಲಕ್ಷಾಂತರ ಆಸ್ತಿ ನಷ್ಟ

Published On :

ಹಾನಗಲ್ಲ: ಕರಡಿ ದಾಳಿಯಿಂದ ಹಾನಗಲ್ಲ ತಾಲೂಕಿನ ಚೀರನಹಳ್ಳಿ, ಗುಡಗುಡಿ ಭಾಗದ ರೈತರ ಮಾವು, ಚಿಕ್ಕು ನಾಶವಾಗಿ ರೈತರು ಆತಂಕದಲ್ಲಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರು. ಫಸಲು ನಷ್ಟವಾಗಿದೆ ಎಂದು ರೈತರು ದೂರು ಸಲ್ಲಿಸಿದ್ದಾರೆ. ಹಾನಗಲ್ಲ ತಾಲೂಕಿನ ಚೀರನಹಳ್ಳಿ, ಗುಡಗುಡಿ, ರಾಮತೀರ್ಥ, ಹೊಸಕೊಪ್ಪ, ಬೈಚವಳ್ಳಿ ಗ್ರಾಮದ ರೈತರ ಹೊಲಗಳಿಗೆ ಕರಡಿ, ಆನೆಗಳು ಪ್ರತಿ ವರ್ಷ ದಾಳಿ ಇಡುವ ಪರಿಣಾಮವಾಗಿ ರೈತರು ನಿರಂತರ ಆತಂಕ ಎದುರಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ. ಈ ಬಾರಿ ಈ ಭಾಗದಲ್ಲಿ ದಾಳಿ ಮಾಡಿದ ಕರಡಿಗಳ ಹಾವಳಿಗೆ ನೂರಾರು ಎಕರೆ ಪ್ರದೇಶದ ಚಿಕ್ಕು ಹಾಗೂ ಮಾವಿನ ಫಸಲು ದಿವಾಳಿಯಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ದಾಳಿ ಇಡುವ ಕರಡಿಗಳು ಗಿಡವನ್ನೂ ಏರಿ ಚಿಕ್ಕು ಹಾಗೂ ಮಾವಿನ ಫಸಲನ್ನು ತಿನ್ನುವುದು ಮಾತ್ರವಲ್ಲ ಗಿಡದ ಹರಿಗಳು ಮುರಿದು ಗಿಡಗಳೇ ನಾಶವಾಗುತ್ತಿವೆ. ಕಾಯಿಗಳೂ ಉದುರಿ ಫಸಲು ನಾಶವಾಗುತ್ತಿದೆ. ಹೊಲಕ್ಕೆ ಹಾಕಿದ ತಂತಿ ಬೇಲಿ ಭೇದಿಸಿ ಕರಡಿಗಳು ದಾಳಿ ಮಾಡುತ್ತಿವೆ. ಇದರಿಂದ ಈ ಭಾಗದ 50ಕ್ಕೂ ಅಧಿಕ ರೈತರು ಆತಂತದಲ್ಲಿದ್ದಾರೆ. ಕಾರವಾರ ಜಿಲ್ಲೆಯ ಮುಂಡಗೋಡ ಅರಣ್ಯದಿಂದ ಕರಡಿಗಳು ಬರುತ್ತಿವೆ. ತಿನ್ನಲು ಆಹಾರ, ಕುಡಿಯಲು ನೀರಿಗಾಗಿ ಈ ಭಾಗಕ್ಕೆ ಬರುತ್ತಿವೆ ಎನ್ನಲಾಗಿದೆ. ಪ್ರಾಣಿಗಳು ಗ್ರಾಮಗಳಿಗೂ ದಾಳಿ ಇಡುವ ಸಾಧ್ಯತೆ ಇದೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇಲಾಖೆ ನಿರ್ಲಕ್ಷ್ಯಕ್ಕೆ ಕಾರಣ ತಿಳಿದಿಲ್ಲ. ರೈತರಿಗಾದ ಹಾನಿ ತುಂಬಿ ಕೊಡುವುದರ ಜತೆಗೆ ಕೂಡಲೇ ಅರಣ್ಯ ಇಲಾಖೆ ಕರಡಿ ದಾಳಿ ನಿಯಂತ್ರಿಸಬೇಕು. ಕರಡಿಗಳನ್ನು ಸೆರೆ ಹಿಡಿದು ದೂರದ ಕಾಡಿಗೆ ಸಾಗಿಸಬೇಕು. ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಹಲವು ರೀತಿಯ ಅನಾಹುತಗಳನ್ನು ಈ ಭಾಗದ ಜನರು ಅನುಭವಿಸಬೇಕಾಗುತ್ತದೆ. ಕೂಡಲೇ ಅರಣ್ಯ ಇಲಾಖೆ ಕ್ರಮ ಜರುಗಿಸಲಿ ಎಂದು ರೈತರು ಒತ್ತಾಯಿಸಿದ್ದಾರೆ. ರೈತರಾದ ಸಹದೇವಪ್ಪ ಕೋಟಿ, ಮಲ್ಲನಗೌಡ ದೊಡ್ಡಗೌಡ್ರ, ಶಂಕರಗೌಡ್ರ ಪಾಟೀಲ, ಮರಿಗೌಡ ಪಾಟೀಲ, ಚಂದ್ರಣ್ಣ ಕೋಟಿ, ಚಂದ್ರಗೌಡ ಪಾಟೀಲ, ಸಿ.ಕೆ. ಪಾಟೀಲ, ಚನ್ನವೀರಗೌಡ ಪಾಟೀಲ, ಜಿ.ಎಂ. ಮುಲ್ಲಾ ಪರಸಪ್ಪ ತುಂಬರಗಿ, ಗೋವಿಂದಪ್ಪ ವಾಲೀಕಾರ ಮುಂತಾದವರು ಕೂಡಲೇ ಕ್ರಮ ಜರುಗಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.