ಮೈನವಿರೇಳಿಸಿದ ಕಾವಡಿ ಮಹೋತ್ಸವ
ಮಾಲೂರು: ಇಲ್ಲಿನ ಶ್ರೀಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಕಾವಡಿ ಮಹೋತ್ಸವ ಅಂಗವಾಗಿ ಗುರುವಾರ ನಡೆದ ಭಕ್ತಿ ಪರಾಕಾಷ್ಟೆಯ ವಿವಿಧ ರೀತಿಯ ಊಂಜಲ್ ಸೇವೆ ಮೈನೇರವೇಳಿಸುವಂತಿತ್ತು.
ದೇವಾಲಯದ 15ನೇ ವರ್ಷದ ಕಾವಡಿ ಮಹೋತ್ಸವದ 2ನೇ ದಿನವಾದ ಗುರುವಾರ ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ವಿಶೇಷ ರಜತ ವಜಾಂಗ್ರಿ ಅಲಂಕಾರ ನಡೆಯಿತು. ಸಂಜೆ ತಾಲೂಕಿನ ಮೇಡಹಟ್ಟಿ ಹಾಗೂ ಪಟ್ಟಣದ ಹನುಮಂತನಗರ ಭಕ್ತರು ನಡೆಸಿಕೊಟ್ಟ ಕಾವಡಿ, ಊಂಜಲ್ ಸೇವೆ ಅತ್ಯಾಕರ್ಷಕವಾಗಿತ್ತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾವಡಿ ಉತ್ಸವದಲ್ಲಿ ಹರಕೆ ಹೂತ್ತ ಭಕ್ತರು ತಮ್ಮ ಬೆನ್ನಿಗೆ ಕೊಕ್ಕೆ ಮೂಲಕ ಚುಚ್ಚಿಸಿಕೊಂಡು ಕ್ರೇನ್ನಲ್ಲಿ ತೂಗಿಕೊಂಡು ಸಂಚರಿಸುವುದು, ತಿರುಗುವ ರಾಟೆಯಲ್ಲಿ ನಾಲ್ಕು ದಿಕ್ಕುಗಳಲ್ಲಿ ಕೊಕ್ಕೆಯೊಡನೆ ನೇತಾಡಿಕೊಂಡು ಹೋಗುವುದು, ಮೈ ತುಂಬ ನಿಂಬೆಹಣ್ಣು ಚುಚ್ಚಿಸಿಕೊಳ್ಳುವುದು, 15 ಅಡಿ ಉದ್ದದ ಕಂಬಿಯನ್ನು ಬಾಯಲ್ಲಿ ತೂರಿಸಿಕೊಂಡು ಹರಕೆ ಸಲ್ಲಿಸುವಂಥ ಆಚರಣೆಗಳು ರೋಮಾಂಚನ ನೀಡಿದವು. ಭಕ್ತರು ಸ್ವಾಮಿಯ ಸಣ್ಣ ಸಣ್ಣ ರಥಗಳನ್ನು ಬೆನ್ನಿಗೆ ಚುಚ್ಚಿಸಿಕೊಳ್ಳುವ ಕೊಕ್ಕೆ ಮೂಲಕ ಎಳೆಯುವುದು ಸೇರಿದಂತೆ ವಿವಿಧ ರೀತಿಯಲ್ಲಿ ತಮ್ಮ ಹರಕೆ ಅರ್ಪಿಸಿ, ಭಕ್ತಿ ಮೆರೆಯುವ ಊಂಜಲ್ ಸೇವೆಗಳು ಈ ಉತ್ಸವದ ವಿಶೇಷ.
ದೇವಾಲಯ ಬಳಿ ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹಗ್ಗದಲ್ಲಿ ಆಳವಡಿಸಿದ ರಾಟೆಯಲ್ಲಿ ಕೊಕ್ಕೆ ಮೂಲಕ ಚಲಿಸುವುದು ಮೈ ಜುಂ ಎನ್ನಿಸುವಂತಿತ್ತು. ತಾಲೂಕಿನ ಸುಮಾರು 5000ಕ್ಕೂ ಹೆಚ್ಚು ಭಕ್ತರು ಕಾವಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಮಾಲೂರು -ಹೊಸೂರು ರಸ್ತೆಯಲ್ಲಿನ ಸಂಚಾರ 3 ಗಂಟೆಗಳಿಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

