ಕೋಲಾರ

ಅಸಮರ್ಪಕ ಸಾರಿಗೆ ಸೇವೆ: ಜನರ ಪರದಾಟ

Published On :

- ಆರ್. ರಜನೀಕಾಂತ್
ಕೆಜಿಎಫ್: ಖಾಸಗಿ ಬಸ್‌ಗಳ ಹಾವಳಿ ಮಧ್ಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರು ಮತ್ತು ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ರಾಜ್ಯ ಸಾರಿಗೆ ಬಸ್‌ಗಳು ವ್ಯವಸ್ಥೆಗಳನ್ನು ಕಲ್ಪಿಸಿ, ಪೈಪೋಟಿ ನೀಡುವ ಬದಲು ಅಧಿಕಾರಿಗಳಿಗೆ ಮನಬಂದಂತೆ ಒಂದೊಂದು ಮಾರ್ಗದ ಬಸ್‌ಗಳನ್ನು ರದ್ದುಗೊಳಿಸುತ್ತಿರುವುದು ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸರಿಯಾದ ಸಮಯಕ್ಕೆ ಹಾಗೂ ಎಲ್ಲಾ ಉತ್ತಮ ರೀತಿಯಲ್ಲಿ ಖಾಸಗಿ ಬಸ್‌ಗಳು ರಾಜ್ಯ ಸಾರಿಗೆ ಬಸ್‌ಗಳಿಗೆ ಪೈಪೋಟಿ ನೀಡುತ್ತಿವೆ. ಆದರೆ, ಖಾಸಗಿ ಬಸ್‌ಗಳು ಓಡಾಡುವ ಮಾರ್ಗಗಳಿಗೆ ಯಾವುದೇ ಅನುಮತಿ ಮತ್ತು ಸರಿಯಾದ ದಾಖಲಾತಿಗಳು ಇಲ್ಲದ ಆರೋಪಗಳಿವೆ. ಇದಕ್ಕೆ ಉದಾಹರಣೆ ಎಂಬಂತೆ 10-15 ದಿನಗಳಿಂದ ಬೆಂಗಳೂರಿನ ಸಾರಿಗೆ ಇಲಾಖೆ (ಆರ್‌ಟಿಓ) ಅಧಿಕಾರಿಗಳು ಕೋಲಾರದಲ್ಲಿ ಮತ್ತು ಕೆ.ಆರ್.ಪುರಂನಲ್ಲಿ ಖಾಸಗಿ ಬಸ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಅವರು ಓಡಿಸುತ್ತಿರುವ ಮಾರ್ಗಗಳಿಗೆ ಯಾವುದೇ ಅನುಮತಿ ಇಲ್ಲದ ಕಾರಣ ಪ್ರತಿ ಖಾಸಗಿ ಬಸ್‌ಗೆ 15000 ದಿಂದ 20000 ವರೆಗೆ ದಂಡ ವಸೂಲಿ ಮಾಡುತ್ತಿರುವುದು.
ಆರ್‌ಟಿಓ ಇಲಾಖೆ ಅಧಿಕಾರಿಗಳ ಈ ದಾಳಿಯಿಂದ ಭೀತರಾದ ಖಾಸಗಿ ಬಸ್‌ಗಳ ಮಾಲೀಕರು ತಮ್ಮ ಬಸ್‌ಗಳನ್ನು ಕೋಲಾರ, ಬೆಂಗಳೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಮುಳಬಾಗಿಲು ಮುಂತಾದ ಮಾರ್ಗಗಳಲ್ಲಿ ಓಡಿಸುವುದನ್ನು ನಿಲ್ಲಿಸಿದ್ದಾರೆ. ಆದರೆ, ಕೆಜಿಎಫ್- ಬಂಗಾರಪೇಟೆ ಮತ್ತು 20 ಕಿಮೀ ಒಳಗೆ ಸಂಚರಿಸುತ್ತಿವೆ.  ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಮತ್ತು ಕೆಜಿಎಫ್‌ನ ಸರ್ಕಾರಿ ಸಾರಿಗೆ ಬಸ್‌ಗಳ ಸೌಲಭ್ಯ ಒದಗಿಸಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಾಡುವ ಸಾರಿಗೆ ಬಸ್‌ಗಳನ್ನು ಕಲ್ಪಿಸುವ ಬದಲು ತಮಗಿಷ್ಟ ಬಂದ ಹಾಗೆ ಬಸ್ ನಿಲ್ದಾಣಗಳಿಗೆ ಬಸ್‌ಗಳನ್ನು ಕಳಿಸುವುದು, ಕೋಲಾರ, ಮುಳಬಾಗೀಲು, ಬೆಂಗಳೂರು, ಚಿಕ್ಕಬಳ್ಳಾಪುರ ಮುಂತಾದ ನಗರಗಳಿಗೆ ಹೋಗುವ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳ ವ್ಯವಸ್ಥೆಗಳನ್ನು ಮಾಡದೇ ಇದೀಗ ಕೇವಲ 3-4 ಖಾಸಗಿ ಬಸ್‌ಗಳು ಇದ್ದರೂ ಅವರು ಎಲ್ಲರನ್ನು ತುಂಬಿಕೊಂಡು ಹೋದ ನಂತರ ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಹಾಗೆ ಪ್ರಯಾಣಿಕರೆಲ್ಲರೂ ಖಾಲಿಯಾದ ಮೇಲೆ ಸಾರಿಗೆ ಬಸ್‌ಗಳನ್ನು ನಿಲ್ದಾಣದೊಳಗೆ ಬರುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಕೆಜಿಎಫ್ ಘಟಕದ ಅಧಿಕಾರಿಗಳು ಇತ್ತ ಗಮನಹರಿಸಿ ಮಹಿಳೆಯರು, ವಯೋವೃದ್ಧರು, ಅಂಗವಿಕಲರು ಮತ್ತು ಶಾಲಾ -ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ತ ಸರ್ಕಾರಿ ಸಾರಿಗೆ ಬಸ್‌ಗಳ ಸೇವೆಗಳನ್ನು ಕಲ್ಪಿಸುವ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಈಗಾಗಲೇ ಹಲವಾರು ವರ್ಷಗಳಿಂದ ಓಡಾಡುತ್ತಿರುವ ಕೆಲ ಬಸ್‌ಗಳ ಮಾರ್ಗಗಳನ್ನು ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೇ ರದ್ದುಗೊಳಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಗುರುವಾರ 2-3 ಗಂಟೆಗಳವರೆಗೆ ಕಾಯುತ್ತಿದ್ದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್ ಬಾರದೆ ಇದ್ದಾಗ ನಿಲ್ದಾಣದ ಟಿಸಿ ಅವರನ್ನು ವಿಚಾರಿಸಿದರು. ಆಗ ಬಸ್ ವ್ಯವಸ್ಥೆ ನಿಲ್ಲಿಸಲಾಗಿದೆ ಎಂದು ತಿಳಿಸಿದ ನಂತರ, ಖಾಸಗಿ ಬಸ್‌ಗಳು, ಆಟೋಗಳು ಹಾಗೂ ಇತರೆ ವಾಹನಗಳಲ್ಲಿ ತಮ್ಮ ಊರುಗಳನ್ನು ಸೇರಿಕೊಳ್ಳುವಂತಾಯಿತು ಎಂಬುದು ಕೆಜಿಎಫ್ ಕ್ಷೇತ್ರದ ಸಾರ್ವಜನಿಕರ ಆರೋಪ. ಈ ಬಗ್ಗೆ ಕೋಲಾರ ಮತ್ತು ಬೆಂಗಳೂರು ಕೇಂದ್ರ ವಿಭಾಗಾಧಿಕಾರಿ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಖಾಸಗಿ ಬಸ್‌ಗಳ ಪೈಪೋಟಿಯಲ್ಲಿ ಇಂತಹ ಮಾರ್ಗಗಳನ್ನು ರದ್ದುಗೊಳಿಸುತ್ತಿರುವ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಬೇಕು ಎಂಬು ಕೆಜಿಎಫ್ ಕ್ಷೇತ್ರದ ಜನತೆ ಮಾತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.