ಕೋಲಾರ

ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ

Published On :

ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಶನಿವಾರ ನಡೆದ ಮೊದಲ ದಿನ ಉದ್ಯೋಗ ಮೇಳದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಾಂಕ್ಷಿಗಳು ಭಾಗವಹಿಸಿ ಸಂದರ್ಶನ ಎದುರಿಸಿದರು.
ಕಳೆದ ವರ್ಷದಂತೆ ಈ ಬಾರಿಯು ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ,ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತ, ಎಸ್‌ಜೆಸಿಐಟಿ ಕಾಲೇಜು ಮತ್ತು ಆಳ್ವಾಸ್ ಎಜುಕೇಷನ್ ಫೌಂಡೇಶನ್ ಕಳೆದ ಮೂರು ವರ್ಷಗಳಿಂದಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಯೋಗ ಮೇಳ ನಡೆಸಿಕೊಂಡು ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಉದ್ಯೋಗಾಕಾಂಕ್ಷಿಗಳು ಹೆಚ್ಚಾಗಿ  ಉದ್ಯೋಗ ಮೇಳಕ್ಕೆ ಆಗಮಿಸುತ್ತಿದ್ದಾರೆ.  ಶನಿವಾರ ಕಾಲೇಜಿನ ಆವರಣದಲ್ಲೆಲ್ಲಾ ಸ್ಥಾಪಿಸಿದ್ದ ವಿವಿಧ ಮಳಿಗೆಗಳಲ್ಲಿ ಪ್ರತಿಷ್ಠಿತ ಕಂಪನಿಗಳು ತಮಗೆ ಸೂಕ್ತವಾದ ಉದ್ಯೋಗಾಂಕ್ಷಿಗಳನ್ನು ಆಯ್ಕೆ ಮಾಡಿಕೊಂಡವು. ಮಳಿಗೆಗಳ ಮುಂಭಾಗ ಉದ್ಯೋಗಾಕಾಂಕ್ಷಿಗಳು ದೊಡ್ಡ ಸಾಲಿನಲ್ಲಿ ನಿಂತುಕೊಂಡಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.
ಸದುಪಯೋಗಕ್ಕೆ ಸಲಹೆ: ಎಸ್‌ಜೆಸಿಐಟಿ ಕಾಲೇಜಿನಲ್ಲಿ 36ನೇ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ  ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶದಲ್ಲಿ ವಿಫುಲ ಉದ್ಯೋಗಾವಕಾಶಗಳಿದ್ದು, ಉದ್ಯೋಗಾಕಾಂಕ್ಷಿಗಳು ವಿಶೇಷ ತರಬೇತಿ ಪಡೆದುಕೊಂಡು ಕೌಶಲ್ಯ, ಸಾಮರ್ಥ್ಯ ಗಳಿಸುವ ಮೂಲಕ ಉದ್ಯೋಗ  ಸಂಪಾದನೆ ಮಾಡಬೇಕೆಂದು ಸಲಹೆ ನೀಡಿದರು.
30 ವಿಶೇಷ ಕಂಪನಿಗಳು: ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಕಲ್ಪಿಸಲು 30 ವಿಶೇಷ ಕಂಪನಿಗಳು ಮತ್ತು ಇತರೆ ಅರ್ಹತೆ ಹೊಂದಿರುವವರಿಗಾಗಿ 200 ಕ್ಕೂ ಹೆಚ್ಚಿಗೆ ಕಂಪನಿಗಳು ಸಂದರ್ಶನ ನಡೆಸುತ್ತಿದ್ದು, ಉದ್ಯೋಗದಾತರು ಹಾಗೂ ಉದ್ಯೋಗಾಂಕ್ಷಿಗಳಿಗೆ ಈ ಉದ್ಯೋಗ ಮೇಳ ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ಮಧ್ಯವರ್ತಿ ಹಾವಳಿ ಇಲ್ಲ: ಉದ್ಯೋಗ ಮೇಳದಲ್ಲಿ ನೋಂದಣಿ ಹಾಗೂ ತರಬೇತಿ ಎರಡೂ ಉಚಿತವಾಗಿದ್ದು, ಯಾವುದೇ ಮಧ್ಯವರ್ತಿ, ಪ್ರಭಾವ ಆಮಿಷಗಳಿಲ್ಲದೇ ಉದ್ಯೋಗವನ್ನು ಪಡೆದುಕೊಳ್ಳಬಹುದು. ಜು. 28 ಹಾಗೂ 29 ರಂದು 9 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ತರಬೇತಿಯಲ್ಲಿ ಸುಮಾರು 3700 ಜನರು ಭಾಗವಹಿಸಿದ್ದರು.
ಲೇಬರ್‌ನೆಟ್ ಹೊಸ ಕಾರ್ಯಕ್ರಮ: ಮುಂದಿನ ತಿಂಗಳಿಂದ ಲೇಬರ್‌ನೆಟ್ ಎಂಬ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ತಿಂಗಳಿಗೆ ಕೌಶಲ್ಯ ತರಬೇತಿ ಜೊತೆಗೆ 4,500 ರೂ.ಗಳ  ಸ್ಟೈಫಂಡ್ ನೀಡಲಾಗುವುದು. ಸುಮಾರು 8200 ಜನರಿಗೆ ಇದರಿಂದ ಉದ್ಯೋಗ ಸಿಗಲಿದೆ ಎಂದರು.
ಯಶಸ್ಸಿಗೆ ಹಿಡಿದ ಕೈಗನ್ನಡಿ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾವ್ ಮಾತನಾಡಿ, ಈ ಉದ್ಯೋಗ ಮೇಳದ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಪ್ರಮುಖವಾಗಿ ಉದ್ಯೋಗ ಕಲ್ಪಿಸುವುದೇ ಆಗಿದೆ. ಈ ಮೇಳದಿಂದ ಅವರವರ ವಿದ್ಯಾರ್ಹತೆಗೆ ತಕ್ಕ ಕೆಲಸವನ್ನು ದೊರೆಯುತ್ತದೆ. ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದ ಅವರು, ಸಾವಿರಾರು ಮಂದಿ ಉದ್ಯೋಗಾಕಾಂಕ್ಷಿಗಳು ಸಾಲುಗಟ್ಟಿ ನಿಂತಿರುವುದು ಉದ್ಯೋಗ ಮೇಳದ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ನಿರುದ್ಯೋಗಿಗಳಿಗೆ ಬಹು ಉಪಯುಕ್ತ: ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಈ ಉದ್ಯೋಗ ಮೇಳವು ನಿರುದ್ಯೋಗಿಗಳಿಗೆ ಬಹು ಉಪಯುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರದಲ್ಲೂ ಸಹ ಮುಂದಿನ ತಿಂಗಳು ಉದ್ಯೋಗ ಮೇಳವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೌಶಲ್ಯ ಸಾಮರ್ಥ್ಯವಿದ್ದರೆ ಉದ್ಯೋಗಾವಕಾಶ ಅಧಿಕ: ಆದಿಚುಂಚನಗಿರಿ ಸಂಸ್ಥಾನ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಇಂದು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯೇ ನಿರುದ್ಯೋಗ ಸಮಸ್ಯೆ. ಕೆಲಸವಿದ್ದರೆ ಕೌಶಲ್ಯದ ಕೊರತೆ ಇರುತ್ತದೆ. ಕೌಶಲ್ಯ ಸಾಮರ್ಥ್ಯವಿದ್ದರೆ ಉದ್ಯೋಗಾವಕಾಶಗಳ ಕೊರತೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆ ನಡುವೆ ಜನರಿಗೆ ಉದ್ಯೋಗ ದೊರಕುವುದೇ ಹರಸಾಹಸ ಎನ್ನುವಂತಾಗಿದೆ ಎಂದು ವಿಶ್ಲೇಷಿಸಿದರು.  ಅಧ್ಯಕ್ಷತೆ ವಹಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ಮುಂದುವರೆಯುತ್ತಿರುವ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಕೌಶಲ್ಯವೃದ್ಧಿ ಅವಶ್ಯಕ  ಎಂದು ಹೇಳಿದರು.  
ವಿಧಾನಸಭೆ ಉಪಾಧ್ಯಕ್ಷ ಶಿವಶಂಕರರೆಡ್ಡಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಶಾಸಕರಾದ ಎಂ.ರಾಜಣ್ಣ, ಎಂ. ಕೃಷ್ಣಾರೆಡ್ಡಿ, ಪಿಳ್ಳಮುನಿರಾಮಪ್ಪ, ಕೆ.ಶ್ರೀನಿವಾಸಮೂರ್ತಿ, ಎಸ್.ಆರ್.ವಿಶ್ವನಾಥ್, ವೆಂಕಟರಮಣಯ್ಯ,ನಾಗರಾಜು, ಗೋವಿಂದ ರಾಜು, ಡಾ.ಮುಮ್ತಾಜ್ ಅಲಿಖಾನ್, ಡಾ.ಮೋಹನ್ ಆಳ್ವ  ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.