ಕೋಲಾರ

ಮೋದಿ ಸರ್ವ ಧರ್ಮ ಸಮನ್ವಯಕಾರ

Published On :

ಕಾಂಗ್ರೆಸ್‌ನಿಂದ ಬಡತನ ನಿರ್ಮೂಲನೆಯಾಗದ ಕಾರಣ ದೇಶ ರಕ್ಷಣೆಗೆ ನಮೋ ನಾಯಕತ್ವ ಅಗತ್ಯ: ಚಕ್ರವರ್ತಿ ಸೂಲಿಬೆಲೆ
ಕ.ಪ್ರ.ವಾರ್ತೆ ಕೋಲಾರ ಆ.3
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಡ ಕುಟುಂಬದಿಂದ ಬಂದವರಾಗಿರುವುದರಿಂದ ದೇಶದಲ್ಲಿನ ಬಡತನ ನಿವಾರಣೆಗಾಗಿ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ ಎಂದು ಅಂಕಣಕಾರ ಹಾಗೂ ನಮೋ ಬ್ರಿಗೇಡ್ ಸಂಘಟನೆ ಮುಖಂಡ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಪಟ್ಟಿದ್ದಾರೆ.
ನಗರದ ಕೆಇಬಿ ಸಮುದಾಯ ಭವನದಲ್ಲಿ ಶನಿವಾರ ನಮೋ ಬ್ರಿಗೇಡ್ ಸಂಘಟನೆ ಯ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುದೀರ್ಘಕಾಲ ದೇಶ ಆಳುತ್ತಾ ಬಂದಿರುವ ಕಾಂಗ್ರೆಸ್‌ಗೆ ಬಡತನ ನಿವಾರಣೆ ಮಾಡಲು ಸಾಧ್ಯವಾಗಿಲ್ಲ. ಮಾತ್ರವಲ್ಲ, ಭಾರತದ ಗಡಿ ಅಕ್ರಮಿಸುತ್ತಿರುವ ಚೀನಾ ದೇಶಕ್ಕೆ ಪಾಠ ಕಲಿಸಲಾಗುತ್ತಿಲ್ಲ, ನಾವು ಮಾತ್ರವೇ ಈ ದೇಶವನ್ನು ಆಳಬೇಕೆಂಬ ದುರುದ್ದೇಶ ಹೊಂದಿರುವ ಯುಪಿಎ ನಾಯಕರು ಗುಜರಾತ್ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಂಡು ಅಸೂಯೆ ಪಡುತ್ತಿರುವುದಲ್ಲದೆ, ಸಂಬಂಧವಿಲ್ಲದ ಗೋದ್ರಾ ಘಟನೆಯನ್ನೇ ಮುಂದಿಟ್ಟುಕೊಂಡು ಮೋದಿ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಶ್ವವೇ ಮೆಚ್ಚುವಂಥದ್ದು: ಗುಜರಾತ್‌ನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದೆ. ಯಾವ ಗೋದ್ರಾ ಘಟನೆಯನ್ನು ಯುಪಿಎ ತನ್ನ ರಾಜಕೀಯಕ್ಕೆ ಬಳಸಿಕೊಳ್ಳಲು ಹುನ್ನಾರ ನಡೆಸುತ್ತಿದೆಯೇ ಆ ಪ್ರದೇಶದಲ್ಲಿ ಆಗಿರುವ ಕ್ರಾಂತಿಕಾರಿಕ ಅಭಿವೃದ್ಧಿ ಹಾಗೂ ಪ್ರಗತಿ ಸಹಿಸಲಾಗದೆ ಮೋದಿ ವಿರುದ್ಧ ಸಿಬಿಐ ಸಂಸ್ಥೆಯನ್ನು ಛೂ ಬಿಟ್ಟು ಮೋದಿ ದೇಶದ ಸಮರ್ಥ ನಾಯಕನಾಗಿ ಹೊರ ಹೊಮ್ಮುವುದನ್ನು ತಪ್ಪಿಸಲು ಪ್ರಯತ್ನಿಸಲಾಗುತ್ತಿದ್ದು ನಮೋ ಬಿಗ್ರೇಡ್ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ನಿಜ ಸಂಗತಿ ತಿಳಿಸುವ ಮೂಲಕ ಯುಪಿಎ ನಾಯಕರ ಬಣ್ಣ ಬಯಲು ಮಾಡುವಂತೆ ಕಿವಿಮಾತು ಹೇಳಿದರು.
ಸರ್ವ ಧರ್ಮಗಳ ಸಮ್ಮಿಲನ ಶಕ್ತಿ: ನರೇಂದ್ರ ಮೋದಿ ಎಲ್ಲ ಜಾತಿಗಳು, ಎಲ್ಲ ಧರ್ಮಗಳ ಸಮ್ಮಿಲನ ಶಕ್ತಿಯಾಗಿ ರೂಪುಗೊಳ್ಳುತ್ತಿರುವುದರಿಂದ ಹೇಗಾದರೂ ಮಾಡಿ ಮೋದಿಯವರ ವ್ಯಕ್ತಿತ್ವ ಮತ್ತು ವರ್ಚಸ್ಸಿಗೆ ಧಕ್ಕೆ ತರಬೇಕೆಂದು ಯುಪಿಎ ಮತ್ತಿತರ ಸಂಘಟನೆಗಳ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ದೇಶದ ರಕ್ಷಣೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗದ ಯುಪಿಎ ನಾಯಕರಿಗೆ ಮತ್ತೆ ಈ ದೇಶದ ಆಡಳಿತ ಚುಕ್ಕಾಣಿ ಸಿಕ್ಕಿದಲ್ಲಿ ಭಾರತ ಸ್ಥಿತಿ ದೈನ್ಯ ಸ್ಥಿತಿಗೆ ತಲುಪುತ್ತದೆ, ಒಂದು ಕಡೆ ಪಾಕಿಸ್ತಾನ ಕಾಶ್ಮೀರ ಅಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ನೆರೆ ಹೊರೆ ಕಿರಿಕಿರಿ ಹತ್ತಿಕ್ಕಲಾಗಲಿಲ್ಲ: ಚೀನಾ ದೇಶ ಈಗಾಗಲೇ ಭಾರತದ ಗಡಿಯನ್ನು ದಾಟಿ ಸುಮಾರು 5 ಕಿಮೀ ಪ್ರದೇಶ ಕಬಳಿಸಿದೆ, ದೇಶದ ಸಾರ್ವಭೌಮತ್ವದ ಬಗ್ಗೆ ಕಾಳಜಿಯಿಲ್ಲದೆ, ದುರದೃಷ್ಟಿ ಇಲ್ಲದೆ ಆಂಧ್ರ ಪ್ರದೇಶವನ್ನು ಇಬ್ಬಾಗ ಮಾಡಿ, ಹೈದರಬಾದನ್ನು ತೆಲಂಗಾಣಕ್ಕೆ ರಾಜಧಾನಿ ಮಾಡಬೇಕೇ ಇಲ್ಲವೇ ಸೀಮಾಂಧ್ರಕ್ಕೆ ರಾಜಧಾನಿ ಮಾಡಬೇಕೆಂಬ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗದೆ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದರು.
ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯ ಜಾರಿಯ ಹಿಂದೆ ಸದುದ್ದೇಶವಿಲ್ಲ, 1 ರುಪಾಯಿಗೆ 1 ಕೆಜಿಯಂತೆ ಬಿಪಿಎಲಲ್ಕಾರ್ಡುದಾರರಿಗೆ 30 ಕೆಜಿ ಅಕ್ಕಿ ನೀಡುತ್ತಿರುವುದರಿಂದ ಬಡತನ ನಿವಾರಣೆ ಆಗುವುದಕ್ಕೆ ಬದಲು ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ, 1 ರುಪಾಯಿಗೆ ಅಕ್ಕಿ ಸಿಗುವಂತೆ ಮಾಡಿ, ಮತ್ತೊಂದು ಕಡೆ ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿರುವುದರಿಂದ ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಪ್ರತಿನಿತ್ಯ ಹೆಂಡ ಸೇವನೆ ಮಾಡುವಂತಾದರೆ ಬಡತನ ನಿವಾರಣೆ ಹೇಗೆ ಸಾಧ್ಯವಾಗಿತ್ತು ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದರು.
ಎಬಿವಿಪಿ ಮುಖಂಡ ತೇಜಸ್ವಿ ಸೂರ್ಯ ಮಾತನಾಡಿ, ಹಗರಣಗಳಿಂದ ತುಂಬಿರುವ ಯುಪಿಎ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಮೂಲಕ ಸ್ವಚ್ಛ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯ ಕೈ ಬಲಪಡಿಸಬೇಕಾಗಿದೆ ಎಂದರು.  
ಓಟ್ ಬ್ಯಾಂಕ್ ರಾಜಕಾರಣ ಧಿಕ್ಕರಿಸಿ: ಓಟ್ ಬ್ಯಾಂಕ್ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಾಗಿದೆ. ಎಲ್ಲ ಜಾತಿ, ಧರ್ಮಗಳು ನೆಮ್ಮದಿಯಿಂದ ಬಾಳ್ವೆ ಮಾಡುವಂತಹ ಹಾಗೂ ಪ್ರತಿಯೊಬ್ಬರಲ್ಲಿ ನಾವು ಭಾರತೀಯರು ಎಂಬ ಭಾವನೆ ಮೂಡಿಸಲು ಇದು ಸಕಾಲವಾಗಿರುವುದರಿಂದ ನಮೋ ಬ್ರಿಗೇಡ್ ಮೂಲಕ ಯುವ ಜನತೆಯಲ್ಲಿ ಆತ್ಮವಿಶ್ವಾಸ ಹಾಗೂ ದೇಶದ ಮೇಲೆ ಪ್ರೀತಿ ಹೆಚ್ಚಿಸುವ ಕೆಲಸವಾಗಬೇಕೆಂದು ಹೇಳಿದರು.
ಮೋದಿ ಯುವಕರ ಕಣ್ಮಣಿ: ಗಲ್ಲಿಯಿಂದ ದಿಲ್ಲಿಯವರೆಗೆ ಮೋದಿ ಹವಾ ಕಾಣುತ್ತಿದೆ. ಯುಪಿಎ ಸರ್ಕಾರದ ಭ್ರಷ್ಟಾಚಾರ, ಅನೀತಿಗಳ ವಿರುದ್ಧ ಯುವಕರು ಹೋರಾಡಬೇಕು, ವಯಸ್ಸಿನಲ್ಲಿ ದೊಡ್ಡವರಾದರೂ ಯುವಕರ ಕಣ್ಮಣಿಯಾಗಿರುವ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ವಿಶ್ವದಲ್ಲಿ ದೊಡ್‌ಡ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುವಂತೆ ಮಾಡಲು ಶ್ರಮಿಸಬೇಕೆಂದರು.
ಸಂಘಟನೆ ಮುಖ್ಯಸ್ಥೆ ಶಕುಂತಲಾ ಮಾತನಾಡಿದರು. ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣಪ್ಪ ಗಬ್ಬೂರು ಸ್ವಾಗತಿಸಿ, ಮಹೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.