ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರ ಕಲಿಸಿ: ಮಲ್ಲಪ್ಪಗೌಡ ಮನವಿ
ಕ.ಪ್ರ.ವಾರ್ತೆ ಮೈಸೂರು ಆ. 4
ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸಾಲದು, ಜೊತೆಗೆ ಸಂಸ್ಕಾರ ಸಹ ಕಲಿಸಬೇಕು ಎಂದು ಬಿಜೆಪಿ ಮುಖಂಡ ಮಲ್ಲಪ್ಪಗೌಡ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಗಾಣಿಗ ಯುವಕರ ಸಂಘವು ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ಉತ್ತಮವಾಗಿ ಓದಿ ಹೆಚ್ಚಿನ ಅಂಕ ಪಡೆದು ಕೆಲಸಕ್ಕೆ ಸೇರಿಕೊಂಡರೆ ಸಾಲದು. ಓದಿನ ಜೊತೆಗೆ ಸಂಸ್ಕಾರ ಕಲಿಸಬೇಕು. ಇದರ ಬಗ್ಗೆ ಪೋಷಕರು ಗಮನಹರಿಸಬೇಕು ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಮೇಯರ್ ಹಾಗೂ ಕೆಪಿಸಿಸಿ ಸದಸ್ಯ ಅನಂತ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಕ್ರೀಡಾಪಟು ಎಂ. ಯೋಗೇಂದ್ರ, ಜ್ಯೋತಿಪಣ ಗಾಣಿಗರ ಸಂಘದ ಅಧ್ಯಕ್ಷ ಎಂ. ರಮೇಶ, ರೇಷ್ಮೆ ಇಲಾಖೆ ಅಧೀಕ್ಷಕಿ ಮಾಯಮ್ಮ, ಸಮಾಜದ ಮುಖಂಡರಾದ ಶಿವಲಿಂಗಪ್ಪ, ಪುಟ್ಟರಾಜು, ಸ್ವಾಮಿ, ಚನ್ನಕೇಶವಶೆಟ್ಟಿ, ಚಂದ್ರು, ಮಹದೇವಶೆಟ್ಟಿ, ಸತೀಶ್, ಸಂಘದ ಗೌರವ ಸಲಹೆಗಾರ ಟಿ.ವಿ. ನಾಗರಾಜು, ಅಧ್ಯಕ್ಷ ವಿ. ಮಹದೇವು ಇದ್ದರು.
ನಾಡಗೀತೆಗೆ ಅಗೌರವ: ಸಮಾರಂಭ ಆರಂಭದಲ್ಲಿ ನಾಡಗೀತೆ ಹಾಡಿಸಲಾಯಿತು. ಆದರೆ, ಈ ವೇಳೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಹಾಗೂ ಸಭಾಂಗಣದಲ್ಲಿದ್ದ ಬಹುತೇಕ ಮಂದಿ ಎದ್ದು ನಿಂತಿಲ್ಲ. ಈ ಮೂಲಕ ನಾಡಗೀತೆಗೆ ಅಗೌರವ ಸೂಚಿಸಿದರು. ಕೆಲವರು ನಾಡಗೀತೆ ಮುಗಿದ ಬಳಿಕ ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಎಚ್ಚೆತ್ತ ಆಯೋಜಕರು ಮತ್ತೊಮ್ಮೆ ನಾಡಗೀತೆ ಹಾಡಿಸಿ, ಎಲ್ಲರು ಎದ್ದು ನಿಂತು ಗೌರವ ಸೂಚಿಸುವಂತೆ ಕೋರಿದರು.
ಪ್ರತ್ಯೇಕ ಪ್ರಕರಣ: ಎರಡು ಕಡೆ ಸರ ಅಪಹರಣ
ಮೈಸೂರು: ಸರ ಅಪಹರಣಕಾರರು ನಗರದ ಎರಡು ಕಡೆ ಭಾನುವಾರ ಬೆಳಗ್ಗೆ ತಮ್ಮ ಕೈಚಳಕ ತೋರಿಸಿದ್ದು, ಇಬ್ಬರು ಮಹಿಳೆಯರಿಂದ ಒಟ್ಟು 64 ಗ್ರಾಂ. ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾರೆ. ಚಾಮರಾಜಪುರಂ ವಿಷ್ಣುವರ್ಧನ ರಸ್ತೆ ನಿವಾಸಿ ರಾಮಕೃಷ್ಣ ಶೆಣೈ ಎಂಬವರ ಪತ್ನಿ ಸುಗಂಧಿ (68) ಪಕ್ಕದ ಮನೆಗೆ ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಚಿನ್ನದ ಸರ ಕಸಿದಿದ್ದು, 49 ಗ್ರಾಂ. ಮಾತ್ರ ಕಿಡಿಗೇಡಿಗಳ ಪಾಲಾಗಿದೆ. ಲಕ್ಷ್ಮಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗೋಕುಲಂ 8ನೇ ಮುಖ್ಯರಸ್ತೆ ನಿವಾಸಿ ವಿಜಯಮ್ಮ (72) ಎಂಬವರು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು 15 ಗ್ರಾಂ. ಚಿನ್ನದ ಸರ ಎಗರಿಸಿದ್ದಾರೆ. ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

