575 ಮಂದಿಗೆ ತಕ್ಷಣ ಕೆಲಸ
9 ಸಾವಿರ ಮಂದಿಗೆ ಉದ್ಯೋಗ ಖಾತ್ರಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಮುಕ್ತಾಯ
ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿರುವ ಎಸ್ಜೆಸಿಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಬೃಹತ್ ಉದ್ಯೋಗ ಮೇಳವು ಭಾನುವಾರ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು ಸುಮಾರು 575 ಮಂದಿ ಸ್ಥಳದಲ್ಲಿಯೇ ಉದ್ಯೋಗ ಗಿಟ್ಟಿಸಿಕೊಂಡರೆ, ಸುಮಾರು 9 ಸಾವಿರ ಮಂದಿಗೆ ಉದ್ಯೋಗ ಖಾತ್ರಿ ಸಿಕ್ಕಿದೆ.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಉದ್ಯೋಗ ಮೇಳವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಂಡು ಅದ್ಧೂರಿ ಪ್ರಚಾರ ಪಡೆದ ಕಾರಣ ವಿವಿಧೆಡೆಯಿಂದ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಮೊದಲ ವರ್ಷ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿ, ಆ ನಂತರದ ವರ್ಷದಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಉದ್ಯೋಗ ಮೇಳ ನಡೆದರೆ, ಈ ವರ್ಷ ಬೇರೆ ಬೇರೆ ರಾಜ್ಯಗಳಿಗೂ ಉದ್ಯೋಗ ಮೇಳ ವ್ಯಾಪ್ತಿ ವಿಸ್ತಾರಗೊಂಡು ಕೇರಳ, ಆಂಧ್ರಪ್ರದೇಶ, ಬಿಹಾರ ಮೂಲದವರು ಸೇರಿದಂತೆ ಅನ್ಯ ರಾಜ್ಯದವರು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕೇಳಿ ಬಂದ, ಈ ಬಾರಿ ಹೆಚ್ಚಿಗೆ ಸ್ಥಳೀಯರಿಗೆ ಆದ್ಯತೆ ಸಿಗಲಿಲ್ಲ, ಉದ್ಯೋಗಾಕಾಂಕ್ಷಿಗಳಿಗೆ ಸರಿಯಾಗಿ ಕೆಲಸವನ್ನು ನೀಡಲು ಸಾಧ್ಯವಾಗಲಿಲ್ಲ. ಜತೆಗೆ ಕೇವಲ ನಾಮ್ಕೆವಸ್ತೆಗೆ ಕೆಲ ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಯಿತು ಎಂಬಿತ್ಯಾದಿ ಟೀಕೆಗಳ ನಡುವೆ ಅನೇಕರು ಉದ್ಯೋಗವನ್ನು ಪಡೆದುಕೊಂಡರು. ಹೆಚ್ಚಿಗೆ ಬಿಇ ಪದವೀಧರರು, ವಿಶೇಷ ತಾಂತ್ರಿಕ ತರಬೇತಿಯನ್ನು ಪಡೆದವರಿಗೆ ಉದ್ಯೋಗ ಮೇಳ ವರದಾಯಕವಾಯಿತು. ಪ್ರಾರಂಭದ ವರ್ಷದಲ್ಲಿ ಏಳನೇ ತರಗತಿ ಅನುತ್ತೀರ್ಣರಾದವರಿಂದ ಹಿಡಿದು ದ್ವಿತೀಯ ಪಿಯುಸಿ ಮುಗಿಸಿರುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಆದರೆ, ಈ ವರ್ಷ ಇವರ ಸಂಖ್ಯೆ ತೀರಾ ಇಳಿಮುಖವಾಗಿತ್ತು. ಅದೇ ರೀತಿ ಪ್ರತಿಷ್ಠಿತ ಕಂಪನಿಗಳ ಭಾಗವಹಿಸುವ ನಿರೀಕ್ಷೆಯು ಹುಸಿಯಾಗಿದ್ದು ಒಟ್ಟಾರೆ ಈ ಎರಡೂ ದಿನಗಳ ಉದ್ಯೋಗ ಮೇಳದಲ್ಲಿ ಸುಮಾರು 30,491 ಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಒಟ್ಟು 277 ಕಂಪೆನಿಗಳು ನೋಂದಣಿಯಾಗಿದ್ದು, 572 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗಿದೆ. ಇನ್ನು 9,768 ಜನರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಅತಿ ಹೆಚ್ಚು ಅಭ್ಯರ್ಥಿಗಳು ಉತ್ಪಾದನಾ ಘಟಕದಲ್ಲಿ ನೋಂದಣಿಯಾಗಿದ್ದಾರೆ. ಒಟ್ಟಿನಲ್ಲಿ 2012 ರ ಉದ್ಯೋಗ ಮೇಳಕ್ಕೆ ಹೋಲಿಸಿದರೆ 2013 ರಲ್ಲಿ ಶೇ.38 ರಷ್ಟು ಹೆಚ್ಚು ಕಂಪೆನಿಗಳು ಹಾಗೂ ಶೇ.40 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದು ಶೇ.67 ರಷ್ಟು ಜನರಿಗೆ ಉದ್ಯೋಗ ದೊರೆತಿದೆ.(ಇನ್ನೂ 43 ಕಂಪೆನಿಗಳ ಫಲಿತಾಂಶ ಬಾಕಿಯಿದೆ) ಎಂದು ಸಂಘಟಕರು ತಿಳಿಸಿದ್ದಾರೆ.
ಆಗಸ್ಟ್ 3 ರಂದು ಸುಮಾರು 28,342 ಜನರು ಮೇಳಕ್ಕೆ ಆಗಮಿಸಿ, ವಿವಿಧ ಕಂಪೆನಿಗಳಲ್ಲಿ ನೋಂದಣಿಯಾದರು. ಎಂಜಿನಿಯರಿಂಗ್ ಪದವೀಧರರೇ ಸುಮಾರು 14,722 ಜನರು ನೋಂದಣಿಯಾಗಿದ್ದು 265 ಕಂಪೆನಿಗಳು ಭಾಗವಹಿಸಿದ್ದವು. ಅದರಲ್ಲಿ 457 ಜನರು ಸ್ಥಳದಲ್ಲಿಯೇ ಉದ್ಯೋಗ ದೊರಕಿಸಿಕೊಂಡರೆ, 7438 ಜನರಿಗೆ ಉದ್ಯೋಗದ ಖಾತ್ರಿಯನ್ನು ಮತ್ತು ಎರಡನೇ ದಿನವಾದ ಆಗಸ್ಟ್ 4 ರಂದು ಹೆಚ್ಚುವರಿಯಾಗಿ 12 ಕಂಪೆನಿಗಳು ನೋಂದಣಿಗೊಂಡಿದ್ದು, ಸುಮಾರು 2,149 ಉದ್ಯೋಗಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, 115 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ದೊರೆಯಿತು. ಇನ್ನು 1,261 ಜನರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಹೊಸ ದಾಖಲೆ ಸೃಷ್ಟಿ; ಮೊಯ್ಲಿ ಶ್ಲಾಘನೆ
ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ಉದ್ಯೋಗ ಮೇಳ ಅಭೂತ ಪೂರ್ವ ಯಶಸ್ಸುಗಳಿಸಿ ಒಂದು ಹೊಸ ದಾಖಲೆ ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಇಲ್ಲಿನ ಎಸ್ಜೆಸಿಐಟಿ ಕಾಲೇಜಿನಲ್ಲಿ ಉದ್ಯೋಗ ಮೇಳದ ಕೊನೆಯ ದಿನವಾದ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉದ್ಯೋಗ ಮೇಳದಲಿ ಪಾಲ್ಗೊಂಡ ಎಲ್ಲರಿಗೂ ಉದ್ಯೋಗ ದೊರೆತಿಲ್ಲವಾದರೂ ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಂಪೆನಿಗಳ ಪರಿಚಯವಾಗಿದೆ. ಮುಂಬರುವ ದಿನಗಳಲ್ಲಿ ಉಳಿದವರಿಗೂ ಕಂಪೆನಿಗಳಿಂದ ಉದ್ಯೋಗ ದೊರೆಯುವ ಸಾಧ್ಯತೆಯಿದೆ.ಅಲ್ಲದೇ ಈ ಉದ್ಯೋಗ ಮೇಳ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಅವಕಾಶ ಹಾಗೂ ಸ್ಫೂರ್ತಿಯನ್ನು ಹೆಚ್ಚಿಸಿದೆ. ಹೇಗೆ ಸಂದರ್ಶನವನ್ನು ಎದುರಿಸಬೇಕು ಸ್ಪರ್ಧಾತ್ಮಕ ಮನೋಭಾವವನ್ನು ಹೇಗೆ ಬೆಳಸಿಕೊಳ್ಳಬೇಕೆಂಬುದನ್ನು ಅವರು ಕಲಿತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಎಸ್ಪಿ ಎನ್. ಶಿವಪ್ರಸಾದ್, ಕೆವಿಟಿಎನ್ಟಿಡಿಸಿ ಯ ಕಾರ್ಯ ನಿರ್ವಾಹಕ ನಿರ್ದೇಶಕ ಗಿರಿಧರ್ ಸಾಲಿಯಾನ್, ಆಳ್ವಾಸ್ ಫೌಂಡೇಷನ್ನ ವಿವೇಕ್ ಆಳ್ವ, ನಿವೃತ್ತ ಡಿಸಿಪಿ ಜಿ.ಎ. ಭಾವ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

