ಪೌರಾಯುಕ್ತರ 'ನೀರಿಳಿಸಿದ' ಸಾರ್ವಜನಿಕರು
ಚಿಕ್ಕಬಳ್ಳಾಪುರ: ನಮ್ಮ ವಾರ್ಡ್ಗೆ ಸಮರ್ಪಕವಾಗಿ ನೀರೇ ಸರಬರಾಜಾಗುತ್ತಿಲ್ಲ. ಈ ಬಗ್ಗೆ ಎಷ್ಟೇ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ನಗರಸಭೆಯ ಅಧಿಕಾರಿಗಳು ಏನ್ ಮಾಡುತ್ತಿದ್ದಾರೆ. ಹೋಗಲಿ ನಾವು ಏನನ್ನು ಕುಡಿದು ಬದುಕಬೇಕು. ಈಗ ರಂಜಾನ್ ಉಪವಾಸ ಬೇರೆ, ನಾವು ನೀರಿಲ್ಲದೇ ಸಾಯಬೇಕಾ?
ಹೀಗೆ ನಗರದಲ್ಲಿ ನೀರು ಸಮರ್ಪಕವಾಗಿ ಸರಬರಾಜಾಗದಿರುವುದರಿಂದ ಬೇಸತ್ತ ಜನರು ಸೋಮವಾರ ನಗರಸಭೆಗೆ ಬಂದು ಸಭೆಯಲ್ಲಿದ್ದ ಪೌರಾಯುಕ್ತ ರುದ್ರಮುನಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿ ಇದು.
17ನೇ ವಾರ್ಡಿನ ಸೈಯದ್ ಮಹಮದ್ ಮಾತನಾಡಿ, ನಗರಸಭೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ನಾವು ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಬದಲಿಗೆ ಸಾರ್ವಜನಿಕರ ವಿರುದ್ಧವೇ ಜೋರಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದ ಅವರು, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದಲ್ಲಿ ನಗರಸಭೆ ಕಚೇರಿಗೆ ಬಾಗಿಲು ಹಾಕಿಬಿಡಿ. ಸುಮ್ಮನೆ ಜನರ ಪ್ರಾಣವನ್ನು ಏಕೆ ತಿನ್ನುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಸಂಬಂಧಪಟ್ಟ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಮಾತನಾಡುತ್ತೇನೆ ಎಂದಾಗ, ನಮ್ಮ ವಾರ್ಡಿಗೆ ಬಂದು ನೋಡಿ. ಆಗ ಗೊತ್ತಾಗುತ್ತದೆ ಜನರ ಸಮಸ್ಯೆ ಏನೆಂದು ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಆಗ ಪೌರಾಯುಕ್ತರು, ಅಧಿಕಾರಿಗಳ ಜತೆಗೆ ಜೋರಾಗಿ ಮಾತನಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಮಾಧಾನವಾಗಿ ಮಾತನಾಡಬೇಕು. ನಿಮ್ಮ ವಾರ್ಡಿಗೆ ಬಂದು ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯರ ಆಕ್ರೋಶ: ನಗರಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಇನ್ನೂ ನಡೆಯದ ಕಾರಣ ಇಲ್ಲಿನ ಅಧಿಕಾರಿಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ನಗರದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. 15 ದಿನಗಳಾದರೂ ನೀರು ಸರಬರಾಜಾಗುವುದಿಲ್ಲ. ನಾವು ಎಷ್ಟೇ ಬಾಯಿ ಬಡಿದುಕೊಂಡರೂ ಅಧಿಕಾರಿಗಳು ಗಮನಕ್ಕೆ ಹಾಕಿಕೊಳ್ಳುತ್ತಿಲ್ಲ. ನೀರಿನ ಸಮಸ್ಯೆಯಿಂದ ಜನರು ಮಾತ್ರ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಪೌರಾಯುಕ್ತರು ನಿರ್ಲಕ್ಷ್ಯ ವಹಿಸಿಕೊಂಡಿದ್ದಾರೆ ಎಂದು ಸದಸ್ಯರಾದ ರಫೀಕ್, ಗಜೇಂದ್ರ, ಕಿಸಾನ್ ಕೃಷ್ಣಪ್ಪ, ಮಹಾಕಾಳಿ ಬಾಬು ಸೇರಿದಂತೆ ಅನೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿ: ಸದಸ್ಯ ಮಹಾಕಾಳಿ ಬಾಬು ಮಾತನಾಡಿ, ನಮ್ಮ ವಾರ್ಡಿನಲ್ಲಿ ಚರಂಡಿ ನಿರ್ಮಾಣದ ಕಾಮಗಾರಿಯು ಕಳಪೆಯಿಂದ ನಡೆದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಕಾಮಗಾರಿ ಪರಿಶೀಲನೆ ನಡೆಸಿಲ್ಲ. ಇದರಲ್ಲಿ ಯಾವ ಹೊಂದಾಣಿಕೆ ಇದೆಯೋ ತಮಗೆ ಅರ್ಥವಾಗುತ್ತಿಲ್ಲ. ಕಳಪೆ ಕಾಮಗಾರಿ ನಡೆದಿದೆ ಎಂದು ತಿಳಿಸಿದರೂ ಸಹ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರೆ ಏನರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

