ಸಾಲ ಮರು ಪಾವತಿಸುವಲ್ಲಿ ಮಹಿಳೆಯರೇ ಮೇಲು
ಬಾಗೇಪಲ್ಲಿ: ಬ್ಯಾಂಕಿನಿಂದ ವಿವಿಧ ರೀತಿಯ ಯೋಜನೆಗಳಲ್ಲಿ ಸಾಲ ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರಲ್ಲಿ ಮಹಿಳೆಯರೇ ಮೊದಲಿಗರು ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೋಲಾರ ವಿಭಾಗದ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ವಾಸು ತಿಳಿಸಿದರು.
ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಎಸ್ಬಿಎಂ ವತಿಯಿಂದ ಏರ್ಪಡಿಸಿದ್ದ ಕೃಷಿ ಸಾಲ ಮೇಳವನ್ನು ಉದ್ಟಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ವಿಕಾಸ ಟ್ರಸ್ಟ್ನ 16 ಸಾವಿರ ಗುಂಪುಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಈ ಗುಂಪುಗಳಿಗೆ 650 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿಕಾಸ ಟ್ರಸ್ಟ್ನ ಅವರು ಪ್ರತಿ ಹೋಬಳಿಮಟ್ಟದಲ್ಲಿ ಗುಂಪುಗಳ ರಚನೆ ಮಾಡಲಿದ್ದಾರೆ. ಇದನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಬೇಕು. ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಸಲಹೆ ನೀಡಿದರು.
ರೈತರು ಸಾಲ ಪಡೆಯುವ ಮುನ್ನಾ ಬ್ಯಾಂಕ್ ವ್ಯವಸ್ಥಾಪಕರಲ್ಲಿ ಸಮಗ್ರ ಮಾಹಿತಿ ಪಡೆದು ಬ್ಯಾಂಕ್ನಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು. ಯಾವುದಕ್ಕೆ ಬ್ಯಾಂಕ್ನಿಂದ ಸಾಲ ಪಡೆಯಲಾಗಿರುತ್ತದೆಯೋ ಅದಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು. ಆದರೆ, ರೈತರು ಸಾಲ ಪಡೆಯವಾಗ ಇರುವ ಆಸಕ್ತಿ ಮರುಪಾವತಿ ಮಾಡುವಾಗ ಹೊಂದಿರುವುದಿಲ್ಲ. ತಾವು ಯಾವುದಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆದಿರುತ್ತಾರೋ ಅದಕ್ಕೆ ಉಪಯೋಗಿಸುವುದರ ಬದಲಿಗೆ ಬೇರೆ ಬೇರೆ ವ್ಯವಹಾರಗಳಿಗೆ ಸಾಲದ ಹಣ ಬಳಸುತ್ತಾರೆ. ಇದರಿಂದ ಪಡೆದ ಸಾಲದ ಹಣ ಬ್ಯಾಂಕಿಗೆ ಮರುಪಾವತಿ ಮಾಡಲು ಆಗುವುದಿಲ್ಲ. ಪಡೆದ ಸಾಲಕ್ಕೆ ತಗಲುವ ಬಡ್ಡಿ ಎಷ್ಟು, ಯಾವ ಸಮಯಕ್ಕೆ ಹಿಂತಿರುಗಿಸಬೇಕು ಎಂಬ ಬಗ್ಗೆ ಮಾಹಿತಿ ಪಡೆಯದೇ ಕೊನೆಗೆ ಸಾಲ ಮರುಪಾವತಿ ಮಾಡಲು ಕಷ್ಟವಾಗಿ ರೈತರು ಆರ್ಥಿಕವಾಗಿ ಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಬ್ಯಾಂಕ್ನಿಂದ ಪಡೆದ ಸಾಲದ ಹಣ ಬಹುತೇಕರು ಮರುಪಾವತಿ ಮಾಡದೆ ಅನರ್ಹರಾಗಿ ಬ್ಯಾಂಕಿನ ವಿವಿಧ ಯೋಜನೆಗಳಲ್ಲಿ ಮತ್ತೆ ಸಾಲ ಪಡೆಯಲು ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದಂತೆ ರೈತರಿಗೆ 3 ಲಕ್ಷಗಳವರೆಗೆ ಶೇ.7ರ ಬಡ್ಡಿಯಂತೆ ಸಾಲ ನೀಡಲಾಗುತ್ತದೆ. ಸಕಾಲದಲ್ಲಿ ಸಾಲ ಮರುಪಾವತಿಸಿದಾಗ ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ.3ರಷ್ಟು ಬಡ್ಡಿ ರಿಯಾಯಿತಿ ನೀಡುತ್ತದೆ. ನೀವು ಪಡೆದ ಸಾಲಕ್ಕೆ ಕೇ.4ರಷ್ಟು ಮಾತ್ರ ಬಡ್ಡಿ ನೀಡಬೇಕಾಗುತ್ತದೆ. ಪ್ರತಿ ವರ್ಷ ಕೃಷಿ ಸಾಲ ನವೀಕರಣ ಮಾಡಿಸಿಕೊಳ್ಳಬೇಕು. ವಿದ್ಯಾಭ್ಯಾಸ ಮಾಡಲು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 4 ಲಕ್ಷವರೆವಿಗೆ ಜಾಮೀನು ಇಲ್ಲದೆ ಸಾಲ ನೀಡಲಾಗುತ್ತದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಮಳೆ ಬೆಳೆ ಇಲ್ಲದಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನು ಸಾಲವನ್ನು ತೀರಿಸುವುದು ಹೇಗೆ? ಇಂತಹ ಸಮಯದಲ್ಲಿ ಒಂದು ಗ್ರಾಮದಲ್ಲಿ ಕೆಲವು ರೈತರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲ. ಇದನ್ನೇ ನೆಪವಾಗಿಸಿಕೊಂಡ ಬ್ಯಾಂಕ್ನ ಸಿಬ್ಬಂದಿ ಈ ಗ್ರಾಮದಲ್ಲಿ ಯಾರಿಗೂ ಸಾಲವನ್ನು ನೀಡುವುದಿಲ್ಲ ಎಂದು ದೂರಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ಮುಖಂಡರು ಬರಗಾಲ ಬಂದಿರುವ ನಿಟ್ಟಿನಲ್ಲಿ ಸರ್ಕಾರ ಬಡ್ಡಿ ಮನ್ನಾ, ಅಸಲು ಮನ್ನಾ ಮಾಡುತ್ತೇನೆ ಎಂದು ರೈತರನ್ನು ನಂಭಿಸಲು ಬರುತ್ತಾರೆ. ಅವರನ್ನು ನಂಬೊ ಮರಳಾಗಬೇಡಿ ಎಂದು ರೈತರಿಗೆ ಕಿವಿಮಾತು ಹೇಳಿದರು.
ನಾವು ಸಾಲ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡಿದರೇ ಬ್ಯಾಂಕ್ನ ವ್ಯವಸ್ಥಾಪಕರೇ ಕರೆದು ಸಾಲವನ್ನು ನೀಡುತ್ತಾರೆ ಎಂದರು.
ಬಾಗೇಪಲ್ಲಿ ಶಾಖೆ ವ್ಯವಸ್ಥಾಪಕ ಎಚ್.ಎ. ವೆಂಕಟೇಶ್, ತಿಮ್ಮಂಪಲ್ಲಿ ವ್ಯವಸ್ಥಾಪಕ ನಾಗಕಿಶೋರ್, ಗೂಳೂರು ಶಾಖೆಯ ರಾಮಚಂದ್ರಪ್ಪ, ಸಾದಲಿ ಶಾಖೆಯ ಶಶಿಧರ್, ನಗರ ಶಾಖೆಯ ಅಭಿವೃದ್ಧಿ ಅಧಿಕಾರಿ ಎಚ್.ಡಿ. ಮಹೇಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

