ವೆಂಕಟರಮಣಸ್ವಾಮಿ ದರ್ಶನ ಪಡೆದ ಚಿರಂಜೀವಿ
ಚಿಕ್ಕಬಳ್ಳಾಪುರ: ಚಿತ್ರನಟ, ಕೇಂದ್ರ ಪ್ರವಾಸೋದ್ಯಮ ಸಚಿವ ಮೆಗಾಸ್ಟಾರ್ ಚಿರಂಜೀವಿ ಭಾನುವಾರ ಶ್ರೀ ಕ್ಷೇತ್ರ ಶ್ರೀನಿವಾಸ ಸಾಗರದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗದಲ್ಲಿ ಸುಮಾರು 12 ಕಿ.ಮೀ ದೂರದಲ್ಲಿ ಬರುವ ಶ್ರೀ ಶ್ರೀನಿವಾಸ ಸಾಗರದ ಬಳಿ ನಿರ್ಮಿಸಲಾಗಿದ್ದ ಶಿಥಿಲಾವಸ್ಥೆಯ ಶ್ರೀ ವೆಂಕಟರಮಣಸ್ವಾಮಿ ದೇವಾಲಯವನ್ನು ಇದೀಗ ಈ ಹಿಂದಿನ ವಾಸ್ತುಶಿಲ್ಪದ ಮಾದರಿಯಲ್ಲಿ ಪುನರ್ನಿರ್ಮಾಣ ಮಾಡಿದ್ದು ಇದರ ಸಲುವಾಗಿ ಮೂರು ದಿನಗಳ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಕುಂಭಾಭಿಷೇಕ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸುತ್ತಿರುವುದರ ನಡುವೆ ಭಾನುವಾರ ಚಿರಂಜೀವಿ, ಸುದೀರ್ಘ ಕಾಲದ ಇತಿಹಾಸ ಹೊಂದಿರುವ ಶ್ರೀ ವೆಂಕಟರಮಣಸ್ವಾಮಿ ದೇವರ ದರ್ಶನ ಪಡೆದರು.
ನಂತರ ಮಾತನಾಡಿದ ಅವರು, ಚಿಕ್ಕಬಳ್ಳಾಪುರಕ್ಕೆ ಹೆಚ್ಚಿಗೆ ಭೇಟಿ ಕೊಡುವ ಆಶಯವನ್ನು ಹೊಂದಿದ್ದೇನೆ. ಈ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ಶಾಸಕ ಸುಧಾಕರ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದೆ. ಅದರಂತೆ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಗೆಲ್ಲಿಸಿದ ಜನರಿಗೆ ಅಭಾರಿಯಾಗಿರುತ್ತೇನೆ. ಇದೀಗ ಶ್ರೀನಿವಾಸ ಸಾಗರದ ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ತಮಗೆ ತುಂಬಾ ಸಂತಸವಾಗಿದೆ. ಈ ದೇವಾಲಯದ ಅಭಿವೃದ್ಧಿಗಾಗಿ ಅಗತ್ಯವಿರುವ ನೆರವನ್ನು ನೀಡುವುದಾಗಿ ಎಂದು ತಿಳಿಸಿದರು.
ಪ್ರತಿಯೊಬ್ಬರು ತಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡುತ್ತ ಒಳ್ಳೆಯ ಜೀವನವನ್ನು ನಡೆಸಬೇಕು. ಆಗ ಮನುಷ್ಯನಿಗಾಗಿ ಹುಟ್ಟಿದಕ್ಕೆ ಸಾರ್ಥಕತೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀನಿವಾಸ ಸಾಗರದ ಸುಂದರ ಪರಿಸರದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಿರುವುದು ಪುಣ್ಯದ ಕೆಲಸ. ಅದರಲ್ಲೂ 800 ವರ್ಷಗಳ ಇತಿಹಾಸದ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿರುವುದು ವಿಶೇಷವೇ ಸರಿ ಎಂದು ತಿಳಿಸಿದರು.
ಶಾಸಕ ಸುಧಾಕರ್ ಮಾತನಾಡಿ, ಶ್ರೀನಿವಾಸ ಸಾಗರ ದೇವರ ಆಶೀರ್ವಾದದಿಂದ ಅಭಿವೃದ್ಧಿಯತ್ತ ಸಾಗಲಿದೆ. ಇದಕ್ಕೆ ಕಳೆದ ಮೂರು ದಿನಗಳಿಂದ ಇಲ್ಲಿಗೆ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವುದೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಶ್ರೀನಿವಾಸ ಮೂರ್ತಿ, ಸಂಚಾಲಕ ಎಂ. ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

