ಏರಿಳಿತದ ಹಾದಿಯಲ್ಲಿ ರಾಷ್ಟ್ರಧ್ವಜ ಸಂಹಿತೆ
ರಾಜೇಂದ್ರ ವೈದ್ಯ
ಮಾಲೂರು: ದೇಶದ ರಾಜಧಾನಿ ದೆಹಲಿಯ ಸಂಸತ್ ಭವನ, ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮೇಲೆ ತ್ರಿವರ್ಣ ಧ್ವಜ ನಿತ್ಯ ಹಾರಾಡುವಂತೆ ಪಂಚಾಯ್ತಿ ಮಟ್ಟದಲ್ಲೂ ನಿರಂತರವಾಗಿ ರಾರಾಜಿಸಲಿದೆಯೇ?
ರಾಷ್ಟ್ರಾಭಿಮಾನ ಹೆಚ್ಚಿಸುವಂಥ ಅಲ್ಲದೆ, ಕೆಣಕುವಂಥ ಇಂಥದ್ದೊಂದು ಪ್ರಶ್ನೆ ನಾಡಿನ ಜನತೆಯಲ್ಲಿ ಮೂಡಿದೆ. ಅಲ್ಲದೆ, ಪಂಚಾಯ್ತಿ ವ್ಯವಸ್ಥೆಯ ಅಧಿಕಾರಿ-ಸಿಬ್ಬಂದಿಗಳಲ್ಲಿ ಸಣ್ಣದೊಂದು ನಡುಕವನ್ನೂ ತೇಬಿಬಿಟ್ಟಿದೆ.
ರಾಷ್ಟ್ರಧ್ವಜವನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಆ.15ರಿಂದ ಪ್ರತಿದಿನ ಹಾರಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದೇಶ ಅಧಿಕಾರಿಗಳಲ್ಲಿ ದೇಶಪ್ರೇಮ ಹೆಚ್ಚಿಸುವ ಪ್ರಯತ್ನವೇನೋ ಸರಿ. ಆದರೆ, ಧ್ವಜಾರೋಹಣದಲ್ಲಿರುವ ನೀತಿ ಸಂಹಿತೆ ಶಿಷ್ಟಾಚಾರ ಅಧಿಕಾರಗಳ ಎದೆಬಿಡಿತ ಹೆಚ್ಚಿಸಿದೆ.
ಈಗಾಗಲೇ ರಾಜ್ಯಾದ್ಯಂತ ಪಿಡಿಒಗಳು ಜನಪ್ರತಿನಿಧಿಗಳ ಕಿರುಕುಳದಿಂದ ಆತ್ಮಹತ್ಯೆ, ರಾಜಿನಾಮೆಯಂತ ಕಾರ್ಯಗಳಿಗೆ ಮುಂದಾಗಿದ್ದರ ಬಗ್ಗೆ ಪ್ರಕರಣಗಳಿವೆ. ಈಗ ರಾಷ್ಟ್ರಧ್ವಜ ಆರೋಹಣ- ಅವರೋಹಣ ನೀತಿ ಸಂಹಿತೆ 2002ರ ಕಾನೂನು ಈ ಅಧಿಕಾರಿಗಳನ್ನು ಇನ್ನಷ್ಟು ಮಾನಸಿಕ ಒತ್ತಡಕ್ಕೆ ತಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಏಕೆಂದರೆ ಧ್ವಜನೀತಿ ಸಂಹಿತೆ -2002ರ ಪ್ರಕಾರ ಧ್ವಜ ಆರೋಹಣ-ಅವರೋಹಣದಲ್ಲಿ ಸಣ್ಣ ಲೋಪ ಆದಲ್ಲಿ ಅಧಿಕಾರಿಗಳು ಕಠಿಣ ಕ್ರಮ ಎದುರಿಸುವುದು ಅನಿವಾರ್ಯ. ವಿಶೇಷವಾಗಿ ಪಿಡಿಒಗಳಲ್ಲಿ ಬ್ಲಾಕ್ ಮೇಲ್ಗಳಿಗೆ ಒಳಗಾಗಲಿದ್ದೇವೆ ಎಂಬ ಅಂಜಿಕೆ ಮನೆ ಮಾಡಿದೆ. ಸರ್ಕಾರವು ರಾಷ್ಟ್ರಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿದಾನ (ಅಸಮರ್ಪಕ ಬಳಕೆಯ ತಡೆ) ಕಾಯಿದೆ, 1950 ಮತ್ತು ರಾಷ್ಟ್ರ ಘನತೆಯಡೆಗಿನ ಅಪಮಾನ ತಡೆ ಕಾಯಿದೆ, 1971 ಇವುಗಳನ್ನು ಅನುಗುಣವಾಗಿ ಧ್ವಜ ಸಂಹಿತೆ 2002ನ್ನು ರೂಪಿಸಿದೆ. ಇದರಲ್ಲಿ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲಾ ನಿಯಮ, ಆಚರಣೆ, ಸಂಪ್ರದಾಯ ಮತ್ತು ಸೂಚನೆಗಳು ಒಳಗೊಂಡಿವೆ.
ಕಚೇರಿ ಮುಂಭಾಗ ಧ್ವಜ ಸ್ತಂಭದಲ್ಲಿ ಆ.15ರಿಂದ ಪ್ರತಿನಿತ್ಯ ರಾಷ್ಟ್ರಧ್ವಜ ತಪ್ಪದೆ ಹಾರಿಸುವ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಶಿಷ್ಟಾಚಾರ ಮತ್ತು ನಿಯಮಗಳನ್ವಯ ನಡೆಯಬೇಕಾದ ಧ್ವಜ ಆರೋಹಣ- ಅವರೋಹಣದಲ್ಲಿ ನಿಗದಿತ ಸಮಯದೊಳಕೆ ನಡೆಯಬೇಕಿದ್ದು, ಇದಕ್ಕೆ ಕಚೇರಿ ಅಧಿಕಾರಿಗಳನ್ನು ಮುಖ್ಯ ಹೊಣೆಗಾರನ್ನಾಗಿ ಮಾಡಲಾಗಿದೆ. ಎಚ್ಚರ ತಪ್ಪಿದರೆ ಕ್ರಿಮಿನಲ್ ಮೊಕದ್ದಮೆ ಸಹ ಎದುರಿಸಬೇಕಾಗುತ್ತದೆ. ಧ್ವಜ ನೀತಿ ಸಂಹಿತೆ ಪ್ರಕಾರ ರಜೆ ದಿನವಾದ ಭಾನುವಾರ ಸೇರಿದಂತೆ ವರ್ಷದ 365 ದಿನಗಳು ತಪ್ಪದೆ ಧ್ವಜ ಹಾರಿಸಬೇಕಾಗುತ್ತದೆ. ಮಳೆ ದಿನದಲ್ಲೂ ಆರೋಹಣ ಮಾಡಿ ತಕ್ಷಣ ಅವರೋಹಣ ಮಾಡಬೇಕಾಗಿದೆ. ಧ್ವಜ ಹಾರಿಸುವಾಗ ಸೆಲ್ಯೂಟ್ ಹಾಗೂ ಇಳಿಸುವಾಗ ರಾಷ್ಟ್ರಗೀತೆ ಹಾಡುತ್ತ ಸೆಲ್ಯೂಟ್ ಹಾಕಿ ಧ್ವಜವನ್ನು ಇಳಿಸಬೇಕಾಗಿದೆ.
ಹರಿದ, ಒದ್ದೆಯಾದ ಧ್ವಜಗಳನ್ನು ಹಾರಿಸುವಂತಿಲ್ಲ. ಧ್ವಜ ಮಡಿಚಿಡುವಾಗ ಶಿಷ್ಟಾಚಾರದಂತೆ ಕೇಸರಿ ಬಣ್ಣ ಮೇಲೆ ಬರುವ ಹಾಗೆ ಮಡಿಚಿ ಇಡಬೇಕು. ಹೀಗೆ ಇತ್ಯಾದಿ ಶಿಷ್ಟಾಚಾರಗಳಲ್ಲಿ ಸಿಬ್ಬಂದಿ ಅಥವಾ ಅಧಿಕಾರಿಗಳ ಬಗ್ಗೆ ಅಸಮಾಧಾನ ಹೊಂದಿರುವ ವ್ಯಕ್ತಿಗಳು ಅಧಿಕಾರಿಗಳ ಗಮನಕ್ಕೆ ಬಾರದಂತೆ ಚ್ಯುತಿ ತಂದರೆ ಅಧಿಕಾರಿಗಳ ತಲೆ ದಂಡ ಗ್ಯಾರೆಂಟಿ ಎಂಬಂತಾಗಿದೆ. ಇದರಿಂದ ರಾಷ್ಟ್ರಧ್ವಜದ ಬಗ್ಗೆ ಪೂಜ್ಯ ಭಾವನೆ ಹೊಂದಿರಬೇಕಾದ ಅಧಿಕಾರಿಗಳು ಈಗ ಧ್ವಜದ ವಿಷಯದಲ್ಲಿ ಭಯಬೀಳುವಂತಾಗಿದೆ.
ಧ್ವಜ ವಿಷಯದಲ್ಲಿ ಮಿಲಿಟರಿ ಅಧಿಕಾರಿ-ಸಿಬ್ಬಂದಿ ಖಡಕ್. ಆದರೆ, ಪಂಚಾಯ್ತಿ ಮಟ್ಟದ ಅಧಿಕಾರಿ-ಸಿಬ್ಬಂದಿಯ ಒತ್ತಡದ ಕರ್ತವ್ಯದ ಮಧ್ಯೆ ಈ ನಿಯಮ ಎಷ್ಟರಮಟ್ಟಿಗೆ ಯಶಸ್ಸ ಕಾಣಲಿದೆ ಎಂಬ ಪ್ರಶ್ನೆ ಉದ್ಭವವಾಗಿದೆ. ಸರ್ಕಾರ ಧ್ವಜಾಹೋರಣ ಸಂಬಂಧ ಪಂಚಾಯಿತಿಗಳಲ್ಲಿ ಹುದೆ ಸೃಷ್ಟಿಸಿ ಅವುಗಳಡಿ ಸೇವಾದಲದವರನ್ನು ಪ್ರತಿ ಪಂಚಾಯ್ತಿಗಳಲ್ಲಿ ನೇಮಿಸಿ ಅವರಿಗೆ ಜವಾಬ್ದಾರಿ ನೀಡಿದರೆ ಪಂಚಾಯ್ತಿ ಅಧಿಕಾರಿ-ಸಿಬ್ಬಂದಿ ಸೇವೆಯಲ್ಲಿ ಗುಣಮಟ್ಟ ಕಾಣಲು ಸಾಧ್ಯವಾಗಬಲ್ಲದು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂಭ್ರಮ, ಸಡಗರದಲ್ಲಿ ಪಾಲ್ಗೊಳ್ಳುವ ನಮಗೆ ಪ್ರತಿನಿತ್ಯ ಈ ಧ್ವಜಾರೋಹಣ- ಅವರೋಹಣ ರೋಟಿನ್ ಆಗಿ ಮಾಡುವಾಗ ಅಭಿಮಾನ ಮೂಡಲು ಸಾಧ್ಯವೇ ಎಂಬ ಪ್ರಶ್ನೆ ಅಧಿಕಾರಿಗಳದ್ದು.
ದೆಹಲಿಯ ಸಂಸತ್ ಭವನ ಹಾಗೂ ಬೆಂಗಳೂರಿನ ವಿಧಾನಸೌಧ ಮೇಲೆ ನಿತ್ಯ ಧ್ವಜಾರೋಹಣ-ಅವರೋಹಣ ನಡೆಯುತ್ತಿದೆ. ಈ ವ್ಯವಸ್ಥೆ ಈಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೂ ತರಲು ಸರ್ಕಾರ ಉದ್ದೇಶಿಸಿದೆ. ವಿಧಾನಸೌಧ, ಸಂಸತ್ ಭವನದಲ್ಲಿ ಆಕಸ್ಮಿಕವಾಗಿ ಲೋಪಗಳು ಹೊರ ಪ್ರಂಪಚಕ್ಕೆ ಕಂಡುಬರುವುದು ಬಹಳ ಕಡಿಮೆ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ಹಾಗಲ್ಲ.
ಇಲ್ಲಿನ ಪಿಡಿಒಗಳು ಹಳ್ಳಿ ರಾಜಕೀಯದ ಸೂಕ್ಷ್ಮ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಹಾಗೇಯೇ ಅವರಲ್ಲೂ ಸಹ ನಿತ್ಯ ಶಿಷ್ಟಾಚಾರದಲ್ಲಿ ನಡೆಯಬೇಕಾದ ಧ್ವಜಾರೋಹಣ ಕಾರ್ಯಕ್ಕೆ ಹೆಮ್ಮೆ ಪಟ್ಟು ಮಾಡುವಂತಹ ಮನಸ್ಥಿತಿಗೆ ಬರಬೇಕಾಗಿದೆ. ಆದರೆ, ಇದು ಸಾಧ್ಯನಾ ಎಂಬುದೀಗ ಮಿಲಿಯನ್ ಡಾಲರ್ ಪ್ರಶ್ನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

