ಸಂಚಾರಿ ನಿಯಮ ಉಲ್ಲಂಘನೆಯಾದ್ರೂ ಕೇಳೋರಿಲ್ಲ...
ಚಿಂತಾಮಣಿ: ವಾಣಿಜ್ಯ ನಗರಿಯ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ಹಾಗೂ ಜನಸಂದಣಿ ಸ್ಥಳಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಪೊಲೀಸರ ಕಾರ್ಯವೈಖರಿ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಪ್ರಮುಖ ಜನಸಂದಣಿ ವೃತ್ತಗಳಾದ ಗಜಾನನ ವೃತ್ತ, ಚೇಳೂರು ಸರ್ಕಲ್, ಪಿ.ಸಿ.ಆರ್.ಕಾಂಪ್ಲೆಕ್ಸ್ ವೃತ್ತಗಳಲ್ಲಿ ನಿತ್ಯ ಸಾವಿರಾರು ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಸರಕು ಸಾಗಣೆಯ ವಾಹನ, ಬಸ್ಸುಗಳು ಸಂಚಾರಿ ನಿಯಮಗಳನ್ನು ಪಾಲಿಸದೆ ಅವಸರವಾಗಿ ಚಾಲನೆ ಮಾಡುತ್ತಿರುವ ಸವಾರರಿಂದ ಸ್ಥಳೀಯ ನಾಗರಿಕರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.
ಚಿಂತಾಮಣಿಗೆ ರಾಜ್ಯದ ವಿವಿಧ ಮೂಲಗಳಿಂದ ಹಾಗೂ ಹೊರರಾಜ್ಯಗಳಿಂದ ವ್ಯಾಪಾರ ವಹಿವಾಟು ನಡೆಸಲು ಸಾವಿರಾರು ವಾಹನಗಳು ಬರುತ್ತಿರುವುದು ಸರಿಯಷ್ಟೆ. ಆದರೆ ಸಾರ್ವಜನಿಕರ ಹಿತ ಕಾಪಾಡಬೇಕಾದ ಪೊಲೀಸರು ನಾಮ್ ಕೆ ವಾಸ್ತೆ ಕೆಲಸ ಮಾಡಿದರೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಆಗಿ ಜನರ ತಾಳ್ಮೆ ಪರೀಕ್ಷಿಸುವಂತಾಗಿದೆ. ಸ್ಥಳೀಯ ವೃದ್ಧರಿಗೆ, ಮಹಿಳೆ, ವಿದ್ಯಾರ್ಥಿಗಳಿಗೆ ರಸ್ತೆದಾಟಲು 1 ಗಂಟೆ ಸಮಯ ಬೇಕಾಗಿದೆಯೆಂದು ನಾಗರಿಕರ ಪ್ರಶ್ನೆ. ಇದಕ್ಕೆ ಸ್ಥಳೀಯ ಪೊಲೀಸರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಕಾಟಾಚಾರಕ್ಕೆ ವೃತ್ತಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ನಾಗರಿಕರಿಗೆ ಸುಗಮವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.
ಸಂಚಾರಿ ಠಾಣೆ ತೆರೆಯಲು ಮನವಿ: ಈ ಹಿಂದೆ ಕೆಲಸ ಮಾಡಿದ ಐ.ಪಿ.ಎಸ್ ಅಧಿಕಾರಿ ರಮೇಶ್ ಬಾನೂತ್ ಅವಧಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ತೆರೆಯಲು ಸರ್ಕಾರದ ಗಮನಕ್ಕೆ ತರಲಾಗಿತ್ತು. ಆದರೆ ಚುನಾವಣೆ ವೇಳೆ ವರ್ಗಾವಣೆಗೊಂಡ ನಂತರ ದಿನಗಳಲ್ಲಿ ಈ ಪ್ರಯತ್ನ ವಿಫಲವಾಯಿತು. ನಿತ್ಯ ನಗರದಲ್ಲಿ ವಾಹನಗಳಲ್ಲಿ ಬರುವ ದಟ್ಟ ಹೊಗೆ, ವಾಹನಗಳಲ್ಲಿ ಬಳಸುವ ಅತಿಯಾದ ಧ್ವನಿವರ್ಧಕ ಮತ್ತು ವಾಯುಮಾಲಿನ್ಯ ಹಾಳಾಗಿ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಈ ಕೂಡಲೇ ಪೊಲೀಸ್ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ಜಿಲ್ಲೆಯಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಕ್ಕೆ ಸಂಚಾರಿ ಠಾಣೆ ತೆರೆದು ಜನರ ಪ್ರಾಣ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರ ಬಹುದಿನಗಳ ಆಸೆಯಾಗಿದೆ.
- ಎನ್.ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

