ಶೀಘ್ರ ಕೆನರಾ ಬ್ಯಾಂಕ್ ಪ್ರಾರಂಭ
ಗೌರಿಬಿದನೂರು: ಸೊನಗಾನಹಳ್ಳಿಯಲ್ಲಿ ಶೀಘ್ರ ಕೆನರಾ ಬ್ಯಾಂಕಿನ ಶಾಖೆ ಪ್ರಾರಂಭಿಸಲಾಗುವುದು ಎಂದು ಶಾಸಕ ಹಾಗೂ ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ರೈತರ ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ರೈತರ ಏಳ್ಗೆಗೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ಜನರ ಬಳಿಗೆ ಬ್ಯಾಂಕ್ ಎಂಬ ಕಾರ್ಯಕ್ರಮದಡಿ ಶಾಖೆಗಳನ್ನು ಪ್ರಾರಂಭಿಸುತ್ತಿದೆ. ಕೃಷಿ ಉಪಯೋಗಕ್ಕಾಗಿ ಬ್ಯಾಂಕುಗಳಿಂದ ಸಾಲ ಸಹಾಯ ಪಡೆದು ರೈತರು ಆರ್ಥಿಕವಾಗಿ ಮುಂದುವರಿಯಬೇಕೆಂದು ತಿಳಿಸಿದರು. ಬ್ಯಾಂಕಿನ ಶಾಖೆ ಪ್ರಾರಂಭಿಸುವುದು ಮುಖ್ಯವಲ್ಲ. ಅದನ್ನು ಈ ಭಾಗದ ಜನರು ಸದುಪಯೋಗಪಡಿಸಿಕೊಂಡು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕುಡುಮುಲಕುಂಟೆ ಹಾಗೂ ನಗರಗೆರೆಯಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಉಪಪ್ರಧಾನ ವ್ಯವಸ್ಥಾಪಕ ಆರ್.ಜಿ. ಸ್ವಾಮಿ (ಗ್ರಾಮೀಣ ವೃತ್ತ) ಮಾತನಾಡಿ, ಶಾಖೆ ತೆರೆಯುವ ಉದ್ದೇಶದ ಬಗ್ಗೆ ತಿಳಿಸಿದರು. ಉಪಪ್ರಧಾನ ವ್ಯವಸ್ಥಾಪಕ ಎಂ.ಎನ್. ಸಂಪತ್ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗಪ್ಪ, ಸದಸ್ಯ ನಂಜೇಗೌಡ, ದೇವರಾಜು, ತಾರಾನಾಥ್, ಕಾಂಗ್ರೆಸ್ ಮುಖಂಡರಾದ ಬೊಮ್ಮಣ್ಣ, ಸತೀಶ್, ಪ್ರಕಾಶ ರೆಡ್ಡಿ, ವೇದಲವೇಣಿ ವೇಣು, ಹೊಸೂರು ಶಾಖಾ ಪ್ರಭಂದಕ ಮಧುಸೂಧನರಾವ್, ಗೌರಿಬಿದನೂರಿನ ಶಾಖೆಯ ಪ್ರಭಂದಕರಾದ ಜನಾರ್ದನರಾವ್ ಮುಂತಾದವರು ಉಪಸ್ಥಿತರಾಗಿದ್ದರು.
ಧ್ವಜಾರೋಹಣ ಕಡ್ಡಾಯ
ಶಿಡ್ಲಘಟ್ಟ: ಜಿಲ್ಲಾ ಪಂಚಾಯಿತಿ ಸೇರಿದಂತೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಮೇಲೆ ಆ.15ರಿಂದ ನಿತ್ಯ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಿಸಲು ಹಾಗೂ ಇಳಿಸಲು ಎಲ್ಲಾ ಅಧಿಕಾರಿಗಳು ಬದ್ಧರಾಗಿರಬೇಕು ಎಂದು ಭಾರತ ಸೇವಾದಳ ಜಿಲ್ಲಾ ಸಂಘಟಕ ಎಚ್.ಮಹೇಶಗೌಡ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ರಾಷ್ಟ್ರ ಧ್ವಜಾರೋಹಣ ಹಾಗೂ ಅವರೋಹಣಗಳ ವಿಷಯದಲ್ಲಿ ಯಾವೊಬ್ಬ ಅಧಿಕಾರಿಯೂ ನಿರ್ಲಕ್ಷ್ಯ ವಹಿಸಬಾರದು. ಪ್ರತಿದಿನ ಬೆಳಿಗ್ಗೆ 9.30 ನಿಮಿಷದೊಳಗೆ ಕಡ್ಡಾಯವಾಗಿ ಧ್ವಜ ಹಾರಿಸಬೇಕು. ಸಂಜೆ 5 ರಿಂದ 6 ಗಂಟೆಯೊಳಗೆ (ಸೂರ್ಯಾಸ್ತಮಾನದೊಳಗೆ) ಅವರೋಹಣ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 3 ಬಾವುಟಗಳನ್ನು ಖರೀದಿ ಮಾಡಬೇಕು ಎಂದು ವಿವರಿಸಿದರು. ಇದೇ ಸಂದರ್ಭ ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ನೌಕರರಿಗೆ ಧ್ವಜ ಕಟ್ಟುವ ಬಗ್ಗೆ ಹಾಗೂ ಧ್ವಜ ಆರೋಹಣ ಮಾಡುವ ರೀತಿ ಮತ್ತು ಅವರೋಹಣ ಮಾಡುವ ರೀತಿ-ನೀತಿಗಳ ಬಗ್ಗೆ ತರಬೇತಿ ನೀಡಲಾಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದೇವರಾಜಗೌಡ, ಭಾರತ ಸೇವಾದಳದ ಸಹ ಸಂಘಟಕ ವೆಂಕಟರೆಡ್ಡಿ, ತಾಲೂಕು ಸಂಘಟಕ ರಾಮಕೃಷ್ಣಪ್ಪ ಮುಂತಾದವರು ಹಾಜರಿದ್ದರು.
ವಿಶೇಷ ಪೂಜೆ: ಭಕ್ತರಿಗೆ ಸೂಚನೆ
ಶಿಡ್ಲಘಟ್ಟ: ತಾಲೂಕಿನ ಕಸಬಾ ಹೋಬಳಿ ತಲದುಮ್ಮನಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಆ.15ರಂದು ವಿಶೇಷ ಪೂಜಾಕಾರ್ಯಗಳು ನಡೆಯಲಿವೆ.ನವಗ್ರಹ ಪ್ರತಿಷ್ಠಾಪನೆ, ಗಣಪತಿ ಪೂಜೆ, ನವಗ್ರಹ ಹೋಮ ಸೇರಿ ಹಲವು ಹೋಮ ಹವನಾದಿಗಳು, ವಿಶೇಷ ಪೂಜೆ ಏರ್ಪಡಿಸಲಾಗಿದೆ. ವೇಣುಗೋಪಾಲಸ್ವಾಮಿ, ಚೌಡೇಶ್ವರಿದೇವಿ ಕುಲಬಾಂಧವರು ಪಾಲ್ಗೊಳ್ಳಲು ದೇವಾಲಯ ಸಮಿತಿ ಮನವಿ ಮಾಡಿದೆ. ವಿಶೇಷ ಪೂಜೆ ಬಗ್ಗೆ ಮಾಹಿತಿಗೆ ಮೊ. 9481028659, 9900415361 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

