ಮರಳು ಮಾಫಿಯಾ ತಡೆಗೆ ರಾಜಕೀಯ ಅಡ್ಡಿ
ಕ.ಪ್ರ.ವಾರ್ತೆ ಕೋಲಾರ ಆ.13
ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ತಡೆಗಟ್ಟಲು ಸಾಧ್ಯವಾಗದಿರುವುದಕ್ಕೆ ಅಧಿಕಾರಿಗಳ ಅಸಹಕಾರ ಮತ್ತು ರಾಜಕೀಯ ಒತ್ತಡಗಳೇ ಕಾರಣ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂಪತ್ಕೃಷ್ಣ ಜಿಪಂ ಕೆಡಿಪಿ ಸಭೆಯಲ್ಲಿ ಸತ್ಯ ಬಹಿರಂಗಪಡಿಸುವ ಮೂಲಕ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದರು.
ಕೋಲಾರ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಪಂ ಅಧ್ಯಕ್ಷೆ ಚೌಡೇಶ್ವರಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮರಳು ದಂಧೆ ನಿಯಂತ್ರಣ ಕುರಿತಂತೆ ಜಿಪಂ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮರಳು ದಂಧೆ ನಿಯಂತ್ರಣ ಕೇವಲ ನಮ್ಮ ಇಲಾಖೆಗೆ ಮಾತ್ರ ಸಂಬಂಧಿಸಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಆಗಿದೆ. ಆದರೆ, ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಯಿಂದ ಅಕ್ರಮ ಮರಳು ಸಾಗಣೆ ತಡೆಗಟ್ಟಲು ಆಗುತ್ತಿಲ್ಲ ಎಂದು ತಮ್ಮೊಳಗೆ ಅದುಮಿಟ್ಟುಕೊಂಡಿದ್ದ ಅಸಮಾಧಾನ ಹಾಗೂ ಆಕ್ರೋಶ ಹೊರ ಹಾಕಿದರು.
ಕೆರೆಗಳಲ್ಲಿ ಮರಳು ಫಿಲ್ಟರ್ ನಡೆಸಿ ನಂತರ ಮರಳು ಮಾರಾಟ ಮಾಡಲಾಗುತ್ತಿದೆ. ಕೆರೆಗಳಲ್ಲಿ ಮರಳು ಶೋಧನೆ ತಡೆಯುವುದು ನೀರಾವರಿ ಇಲಾಖೆಯವರ ಕೆಲಸ, ಇನ್ನು ನಮ್ಮ ಇಲಾಖೆ ಜಿಲ್ಲೆಯಲ್ಲಿ ಎಷ್ಟು ಕಡೆ ಮರಳು ನಿಕ್ಷೇಪವಿದೆ ಎಂದು ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿದೆ, ಅದರ ಪ್ರಕಾರ ಲೋಕೋಪಯೋಗಿ ಇಲಾಖೆಯವರು ಮರಳು ಸಿಗುವ ಪ್ರದೇಶವನ್ನು ಸರ್ಕಾರದ ನೀತಿಯ ಪ್ರಕಾರ ಹರಾಜು ಹಾಕಿ ಮರಳು ಸಾಗಣೆ ಅವಕಾಶ ಕಲ್ಪಿಸಬೇಕೆಂದರು.
ಮಧ್ಯ ಪ್ರವೇಶಿಸಿದ ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ, ಜಿಲ್ಲೆಯಲ್ಲಿ ಎಷ್ಟು ಕಡೆ ಮರಳು ಸಿಗುತ್ತದೆ ಎಂದಾಗ, ನಾವು ಮರಳು ಸಿಗುವ ಪ್ರದೇಶವನ್ನು ಸಮೀಕ್ಷೆ ಮಾಡಿ ಜಿಲ್ಲೆಯ 20 ಕಡೆ ಮರಳು ಸಿಗುತ್ತದೆ ಎಂದು ಲೋಕೋಪಯೋಗಿ ಇಲಾಖೆಗೆ ವರದಿ ನೀಡಿದ್ದೇವೆ. ಆದರೆ ಲೋಕೋಪಯೋಗಿ ಇಲಾಖೆಯವರು ಕೇವಲ ಮೂರು ಕಡೆ ಮಾತ್ರ ಮರಳು ಸಿಗುವ ಪ್ರದೇಶ ಹರಾಜು ಹಾಕಿದ್ದಾರೆಂದು ಆರೋಪಿಸಿದರು.
20 ಕಡೆ ಮರಳು ನಿಕ್ಷೇಪ: ಹಿರಿಯ ಭೂವಿಜ್ಞಾನಿಯ ಹೇಳಿಕೆಯಿಂದ ಅಚ್ಚರಿಗೊಂಡ ಜಿ.ಪಂ ಅಧ್ಯಕ್ಷರು ಲೋಕೋಪಯೋಗಿ ಇಲಾಖೆ ಅಧಿಕಾರಿಯಿಂದ ಸ್ಪಷ್ಟನೆ ಕೇಳಿದಾಗ, ಜಿಲ್ಲೆಯಲ್ಲಿ 20 ಕಡೆ ಮರಳು ನಿಕ್ಷೇಪವಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಅವೈಜ್ಞಾನಿಕವಾಗಿ ವರದಿ ನೀಡಿದ್ದಾರೆ. ನಮ್ಮ ಇಲಾಖೆಯು ಈಗಾಗಲೇ 3 ಮರಳು ನಿಕ್ಷೇಪಗಳನ್ನು ಹರಾಜು ಹಾಕಿ ಮರಳು ಸಂಗ್ರಹಣೆ ಮಾಡಿ ಮಾರಾಟಕ್ಕೆ ಅವಕಾಶ ಮಾಡಿದ್ದೇವೆ ಎಂದರು.
ಇದರಿಂದ ಕೆಂಡಾಮಂಡಲಾದ ಹಿರಿಯ ಭೂವಿಜ್ಞಾನಿ ಸಂಪತ್ಕೃಷ್ಣ ಅವರು, ಕೇವಲ ಮೂರು ಕಡೆ ಮಾತ್ರ ಮರಳು ಸಿಗುತ್ತಿರುವುದು ನಿಜವೇ ಆಗಿದ್ದಲ್ಲಿ ಮರಳು ದಂಧೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರಲಿಲ್ಲ. ಮರಳು ಲಾರಿಗಳನ್ನು ಹಿಡಿದು ದಂಡ ಹಾಕುವಂತಾಗುತ್ತಿರಲ್ಲ. ಲೋಕೋಪಯೋಗಿ ಇಲಾಖೆಯವರು ಹೇಳುವುದು ನಿಜವೇ ಆಗಿದ್ದಲ್ಲಿ ಪ್ರತಿನಿತ್ಯ ಜಿಲ್ಲೆಯಿಂದ ನೂರಾರು ಮರಳು ತುಂಬಿದ ಲಾರಿಗಳು ಹೆದ್ದಾರಿಯಲ್ಲಿ ಸಂಚರಿಸಲು ಹೇಗೆ ಸಾಧ್ಯವಾಗುತ್ತಿದೆ ಎಂದು ಪ್ರಶ್ನಿಸುವ ಮೂಲಕ ಅಕ್ರಮವಾಗಿ ಸಾಗಣೆ ಆಗುತ್ತಿರುವ ಮರಳು ನಿಯಂತ್ರಣಕ್ಕೆ ಅಧಿಕಾರಿಗಳ ಅಸಹಕಾರ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಪಾದಿಸಿದರು.
ಮರಳು ಮಾಫಿಯಾ ನಿಯಂತ್ರಣ ಹಾಗೂ ಸರ್ಕಾರದ ನೀತಿ ಪ್ರಕಾರ ಮರಳು ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆ ಆಗಿರುವ ಸಮಿತಿಯಲ್ಲಿ ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ, ಪೊಲೀಸ್, ನೀರಾವರಿ, ಕಂದಾಯ, ಜಿ.ಪಂ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿದ್ದಾರೆ.
ಸಮಸ್ಯೆ ಬಂದಾಗ ಪ್ರತಿಯೊಬ್ಬರು ನಮ್ಮ ಇಲಾಖೆ ಹೊಣೆ ಮಾಡುತ್ತಾರೆಯೇ ಹೊರತು ಮರಳು ಮಾಫಿಯಾ ತಡೆಗೆ ಸಹಕಾರ ನೀಡುತ್ತಿಲ್ಲವೆಂದು ಹೇಳಿದರು.
ಪ್ರಾಣ ಬೆದರಿಕೆ ಹಾಕುತ್ತಾರೆ: ನಾವೇನಾದರೂ ಮರಳು ಲಾರಿಗಳನ್ನು ಹಿಡಿದು ಸರ್ಕಾರದ ಆದೇಶ ಪ್ರಕಾರ ದಂಡ ಹಾಕಿದರೆ ಅನೇಕ ಕಡೆಗಳಿಂದ ಕಡಿಮೆ ದಂಡ ಹಾಕುವಂತೆ, ಲಾರಿಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಬರುತ್ತದೆ. ಅನೇಕ ಬಾರಿ ನಾವು ನಮ್ಮ ಜೀವದ ಹಂಗು ತೊರೆದು ಮರಳು ಲಾರಿಗಳನ್ನು ಹಿಡಿದಿದ್ದೇವೆ, 3 ಕೋಟಿ ದಂಡ ವಸೂಲಿ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯವರು ಮರಳು ನಿಕ್ಷೇಪದಲ್ಲಿ ಸಿಗುವ ಮರಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡುವುದಕ್ಕೆ ಗಮನ ನೀಡದಿರುವುದೇ ಸಮಸ್ಯೆಗೆ ಕಾರಣ, ಅದೇ ರೀತಿ ಪೊಲೀಸರು ನಾವು ಹಿಡಿದುಕೊಟ್ಟ ಲಾರಿಗಳ ವಿರುದ್ಧ ಸಕಾಲಕ್ಕೆ ಕ್ರಮ ಕೈಗೊಳ್ಳುವುದಿಲ್ಲ. ಎಫ್.ಐ.ಆರ್. ದಾಖಲಿಸಲು ವಿಳಂಬ ಮಾಡುತ್ತಾರೆ. ಜೊತೆ ದಾಳಿಗೆ ಸಹಕಾರ ನೀಡದೆ ಅವರ ಪಾಡಿಗೆ ಅವರು ದಾಳಿ ಮಾಡಿದರೆ ಏನು ಪ್ರಯೋಜನ ಎಂದರು.
ಸರ್ಕಾರ ನಮ್ಮ ಇಲಾಖೆಗೆ 5 ಕೋಟಿ ರಾಯಲ್ಟಿ ಸಂಗ್ರಹಣೆ ಮಾಡಿಕೊಡಬೇಕೆಂದು ಸೂಚನೆ ನೀಡಿದೆ. ಜಿಲ್ಲೆಯಲ್ಲಿ 77 ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಈಗ 57 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೊಸ ಗಣಿಗಾರಿಕೆಗೆ ಸುಪ್ರೀಂಕೋರ್ಟ್ನಿಂದ ಒಪ್ಪಿಗೆ ಸಿಕ್ಕಿಲ್ಲ. ನಮ್ಮ ಇಲಾಖೆಯು ಸರ್ಕಾರ ನಿಗದಿ ಮಾಡಿರುವ ರಾಯಲ್ಟಿ ಸಂಗ್ರಹಣೆ ಮಾಡುವುದೇ ದೊಡ್ಡ ಕಷ್ಟದ ಕೆಲಸವಾಗಿದೆ. ಇದರಿಂದ ಮರಳು ಮಾಫಿಯಾ ತಡೆಗಟ್ಟಲು ನಮಗೆ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಸಮನ್ವಯದಿಂದ ಕೆಲಸ ಮಾಡಿದಲ್ಲಿ ಮಾತ್ರ ಅಕ್ರಮ ಮರಳು ಸಾಗಾಣೆ ತಡೆಯಬಹುದಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಯು 347 ಕ್ಯುಬಿಕ್ ಮೀಟರ್ ಮರಳನ್ನು 340 ರಂತೆ 600 ಕ್ಯುಬಿಕ್ ಮೀಟರ್ ಮರಳು ಮಾರಾಟ ಮಾಡಲಾಗಿದೆ. ಎಲ್ಲೂ ಮರಳು ಸಿಗುತ್ತಿಲ್ಲ ಎಂದು ಹೇಳಿದಾಗ ಸಿಡಿಮಿಡಿಕೊಂಡ ಹಿರಿಯ ಭೂವಿಜ್ಞಾನಿ ಸಂಪತ್ಕೃಷ್ಣ, ಇವರು ಸಬೂಬು ಹೇಳುತ್ತಿದ್ದಾರೆ. ಮರಳು ಇಲ್ಲ ಎಂದ ಮೇಲೆ ಪ್ರತಿನಿತ್ಯ ಬೆಂಗಳೂರಿಗೆ ನೂರಾರು ಲಾರಿಗಳಲ್ಲಿ ಮರಳು ಹೇಗೆ ಸಾಗಾಣೆ ಆಗಲು ಸಾಧ್ಯ? ನಾವು ಪ್ರಾಣ ಬೆದರಿಕೆ ನಡುವೆಯೂ ಅಕ್ರಮವಾಗಿ ಸಾಗಣೆ ಆಗುತ್ತಿರುವ ಮರಳು ತಡೆಯಲು ಶ್ರಮಿಸುತ್ತಿದ್ದೇವೆ. ಸರ್ಕಾರದಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳು ಲಾರಿಗಳನ್ನು ಹಿಡಿಯದಂತೆ ಒತ್ತಡ ತರುತ್ತಿರುವಾಗ ನಾವೇನು ಮಾಡಲು ಸಾಧ್ಯ? ಸಂಬಂಧಪಟ್ಟ ಎಲ್ಲ ಇಲಾಖೆಯವರು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾಫಿಯಾ ನಿಯಂತ್ರಿಸಬಹುದು ಎಂದರು.
ಸಭೆ ಕರೆಯಲು ಸಲಹೆ: ಮರಳು ಮಾಫಿಯಾ ಕುರಿತು ನಡೆದ ಸುದೀರ್ಘ ಚರ್ಚೆ ನಂತರ ಜಿಪಂ ಅಧ್ಯಕ್ಷೆ ಚೌಡೇಶ್ವರಿ, ಇನ್ನು ಹತ್ತು ದಿನಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಬೇಕು. ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಿರಬೇಕು. ನಮ್ಮನ್ನು ಸಹ ಸಭೆಗೆ ಆಹ್ವಾನಿಸಿದಲ್ಲಿ ಅಕ್ರಮ ಕಡೆಗಟ್ಟಲು ಅನುಕೂಲ ಎಂದು ಮರಳು ಕುರಿತ ಪ್ರವಚನಕ್ಕೆ ತೆರೆ ಎಳೆದರು.
ಸಭೆಯಲ್ಲಿದ್ದ ಕೃಷಿ ಮತ್ತು ಕೈಗಾರಿಕೆ ಇಲಾಖೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್, ಕೆಡಿಪಿ ಸಭೆಯಲ್ಲಿ ಹೇಳಿರುವುದನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು. ಅಧಿಕಾರಿಗಳಿಗೆ ಒತ್ತಡ ಹಾಕುವ ಜನಪ್ರತಿನಿಧಿಗಳು ಹೆಸರು ಬಹಿರಂಗಪಡಿಸಬೇಕೆಂದಾಗ, ಅಧಿಕಾರಿಯ ಮೇಲೆ ಈ ರೀತಿ ಒತ್ತಡ ಹಾಕುವುದು ಸರಿಯಲ್ಲ. ಚನ್ನಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ ಆನಂದ್ ಅವರ ಬಾಯಿ ಮುಚ್ಚಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ರತ್ನಮ್ಮ, ಸಿಇಒ ಜುಲ್ಫಿಖರ್ ಉಲ್ಲಾ, ಉಪ ಕಾರ್ಯದರ್ಶಿ ಬದನೂರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

