ಇನ್ನಾದರೂ ಯೋಜನೆ ಸಫಲ ಅನುಷ್ಠಾನ ಖಾತ್ರಿನಾ?
ಕ.ಪ್ರ.ವಾರ್ತೆ ಕೋಲಾರ ಆ. 16
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೇಲ್ವಿಚಾರಣೆಗಾಗಿ ರಾಜ್ಯ ಸರ್ಕಾರ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಜಿ.ಗೋವಿಂದಪ್ಪ ಅವರನ್ನು ಒಂಬುಡ್ಸ್ಮನ್ ಆಗಿ ನೇಮಿಸಿದೆ.
ಈ ಹಿಂದೆ ಶಾಂತಪ್ಪ ಜಿಪಂ ಮುಖ್ಯ ಕಾರ್ಯ ನಿರ್ವಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿವೃತ್ತ ಪೊಲೀಸ್ ಅಧಿಕಾರಿ ಮುನಿಸ್ವಾಮಿ ಎಂಬುವರನ್ನು ಒಂಬುಡ್ಸ್ಮನ್ ಆಗಿ ನೇಮಿಸಿತ್ತು.
ಸದರಿ ಅಧಿಕಾರಿಗಾಗಿ ಜಿಪಂನಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿತ್ತಾದರೂ ಅಧಿಕಾರಿಗಳು ಅಗತ್ಯ ಮೂಲ ಸೌಕರ್ಯ ನೀಡದೆ ಅಸಹಕಾರ ತೋರಿದ್ದಾರೆಂದು ಆರೋಪಿಸಿ ಮುನಿಸ್ವಾಮಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಮುನಿಸ್ವಾಮಿ ಅವಧಿಯಲ್ಲಿ ನರೇಗಾ ಯೋಜನೆಯ ಅನುಷ್ಟಾನದಲ್ಲಿ ಕಂಡು ಬಂದ ಲೋಪ, ಅವ್ಯವಹಾರಗಳನ್ನು ಸರ್ಕಾರಕ್ಕೆ ವರದಿ ಮಾಡಲಾಗಿತ್ತು. ಇದರಿಂದ ಒಂಬುಡ್ಸ್ಮನ್ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದರು.
ಮುನಿಸ್ವಾಮಿ ರಾಜಿನಾಮೆ ನಂತರ ಸರ್ಕಾರ ಬೇರೆಯವರನ್ನು ಒಂಬುಡ್ಸ್ಮನ್ ಆಗಿ ನೇಮಕ ಮಾಡಿರಲಿಲ್ಲ. ಕೇಂದ್ರ ಸರ್ಕಾರ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಕೆಲವು ತಿದ್ದುಪಡಿ ತಂದಿದೆ. ಗ್ರಾಮೀಣ ಪ್ರದೇಶದಲ್ಲಿ ನರೆಗಾ ಯೋಜನೆಯಡಿ ಬಡವರಿಗೆ ಉದ್ಯೋಗ ನೀಡುವುದಕ್ಕಾಗಿ ಕಾಯಕ ಬಂಧು ಪದ್ದತಿಯನ್ನು ಜಾರಿಗೆ ತಂದಿರುವುದಲ್ಲದೆ, ಯಾವುದೇ ಸಂದರ್ಭದಲ್ಲೂ ಯೋಜನೆಯಲ್ಲಿ ತಪ್ಪು ಕಾಣಬಾರದೆಂದು ನಿರ್ಧರಿಸಿರುವುದರಿಂದ ಮತ್ತೆ ಜಿಲ್ಲೆಗೆ ಹೊಸ ಒಂಬುಡ್ಸ್ಮನ್ ನೇಮಕ ಮಾಡಲಾಗಿದೆ.
ಬೆಂಗಳೂರಿನ ಕೋರಮಂಗಲ ನಿವಾಸಿ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿಗೊಂಡಿರುವ ಕೆ.ಜಿ.ಗೋವಿಂದಪ್ಪನವರನ್ನು ನೇಮಿಸಲಾಗಿದೆ. ಖಾತ್ರಿ ಯೋಜನೆ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೋವಿಂದಪ್ಪನವರನ್ನು ಒಂಬುಡ್ಸ್ಮನ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಎರಡು ವರ್ಷದ ಅವಧಿಗೆ ಈ ನೇಮಕಾತಿ ಮಾಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಕೆಲಸ ನಿರ್ವಹಿಸಬೇಕೆಂದು ಮಾರ್ಗಸೂಚಿ ನೀಡಲಾಗಿದೆ.
ಈ ಹಿಂದೆ ಇದ್ದ ಅಧಿಕಾರಿಗೆ ಆದ ರೀತಿಯಲ್ಲಿ ಅಪಮಾನವಾದಲ್ಲಿ ನಾನು ಸಹಿಸುವುದಿಲ್ಲ. ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿರುವ ತಾವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೂಚನೆಯಂತೆ ಕೆಲಸ ಮಾಡಲು ಬದ್ಧ. ಆದರೆ, ಅಗತ್ಯ ಮೂಲ ಸೌಕರ್ಯ ಹಾಗೂ ಸರ್ಕಾರಗಳ ಉದ್ದೇಶ ಪಾಲನೆಗಾಗಿ ಬೇಕಾದ ಸಹಕಾರ ನೀಡದಿದ್ದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂದು ಕನ್ನಡಪ್ರಭದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಉದ್ಯೋಗಕ್ಕೆ ನೋಂದಣಿ: ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ ಒಟ್ಟು 1,92,129 ಕುಟುಂಬಗಳು ನೋಂದಾಯಿಸಿಕೊಂಡಿವೆ. ಯೋಜನೆ ಅನುಷ್ಟಾನಕ್ಕಾಗಿ 26.22 ಕೋಟಿ ಜಿಪಂನಲ್ಲಿ ಲಭ್ಯವಿದೆ. ಅದರಲ್ಲಿ 12.80 ಕೋಟಿ ವೆಚ್ಚ ಮಾಡಲಾಗಿದ್ದು ಇದರಿಂದ 6148 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
2009-10 ಮತ್ತು 2010-11ರಲ್ಲಿ ನರೇಗಾ ಯೋಜನೆ ಅನುಷ್ಟಾನದಲ್ಲಿ ಸಾಕಷ್ಟು ಲೋಪ ಆಗಿದ್ದು ಅನೇಕರಿಗೆ ಬಿಲ್ ಬಾಕಿ ಇದೆ. ಲೋಪಗಳ ಬಗ್ಗೆ ಮೂರನೇ ವ್ಯಕ್ತಿಯಿಂದ ತನಿಖೆ ನಡೆಸಲಾಗುತ್ತಿದೆ. ಸಣ್ಣ-ಪುಟ್ಟ ಸಿಬ್ಬಂದಿ ಶಿಕ್ಷೆ ಅನುಭವಿಸಿದ್ದಾರೆ. ದೊಡ್ಡ ಅಧಿಕಾರಿಗಳು ತಮ್ಮ ಕೆಲಸ ಮುಗಿಸಿಕೊಂಡು ಜಿಲ್ಲೆ ತೊರೆದಿದ್ದಾರೆ. ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೊಂಡಲ್ಲಿ ಜಿಲ್ಲೆಯ ಬಡ ಕೂಲಿ ಕಾರ್ಮಿಕರು ವಲಸೆ ಹೋಗುವುದು ತಪ್ಪುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊಸ ಒಂಬುಡ್ಸ್ಮನ್ ಅವರನ್ನು ಸರಿಯಾಗಿ ಬಳಕೆ ಮಾಡಿಕೊಂಡು ಮುಕ್ತವಾಗಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ನರೇಗಾ ಜಿಲ್ಲೆಯಲ್ಲಿ ಯಶಸ್ವಿಯಾಗುತ್ತದೆ.
ಸೋಮವಾರ ನೂತನ ಅಧಿಕಾರಿ ಅಧಿಕಾರ ವಹಿಸಿಕೊಳ್ಳುವರು. ಶುಕ್ರವಾರ ಕೋಲಾರಕ್ಕೆ ಆಗಮಿಸಿದ್ದ ಕೆ.ಜಿ.ಗೋವಿಂದಪ್ಪನವರು ಜಿ.ಪಂ ಸಿಇಒ ಜುಲ್ಫಿಖಾರ್ ಉಲ್ಲಾ ಜತೆ ಚರ್ಚೆ ನಡೆಸಿ ಬೆಂಗಳೂರಿಗೆ ಹೋಗಿದ್ದಾರೆ. ಹೊಸ ಒಂಬುಡ್ಸ್ಮನ್ನಿಂದಾದರೂ ಜಿಲ್ಲೆಯ ವಿವಿಧ ತಾಪಂ ಇಒಗಳು, ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳು ನರೇಗಾ ಯೋಜನೆಯ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುವರೇ? ಇಲ್ಲವೆ ಈ ಹಿಂದಿನ ಅಧಿಕಾರಿ ಮುನಿಸ್ವಾಮಿ ಅವರಿಗೆ ನೀಡಿದ ರೀತಿಯಲ್ಲೇ ಅಸಹಕಾರ ನೀಡಿ ನರೇಗಾ ಯೋಜನೆಯನ್ನು ದುರ್ಬಲಗೊಳಿಸುವರೇ ಎಂದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

