ಕೋಲಾರ

ಕುಡಿವ ನೀರಿಗಾಗಿ ಮಳೆಯಲ್ಲೇ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಚಿಂತಾಮಣಿ ,  ಆ. 18
ಎಂಜಿ ರಸ್ತೆಯ ಅಂಬೇಡ್ಕರ್ ನಗರದ ನೂರಾರು ಮಹಿಳೆಯರು ಮತ್ತು ನಾಗರಿಕರು ಮಳೆಯನ್ನೂ ಲೆಕ್ಕಿಸದೆ ಕುಡಿಯುವ ನೀರಿಗೆ ಒತ್ತಾಯಿಸಿ ದಿಢೀರ್ ರಸ್ತೆತಡೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಶನಿವಾರ ಸಂಜೆ 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಂ.ಜಿ ರಸ್ತೆಯ ಆದರ್ಶ ಚಿತ್ರಮಂದಿರ ಬಳಿ ಇರುವ ಅಂಬೇಡ್ಕರ್ ನಗರ ಸುತ್ತಮುತ್ತಲಿನ ನೂರಾರು ಮಹಿಳೆಯರು ಸೇರಿದಂತೆ ನಾಗರಿಕರು ಏಕಾಏಕಿ ನಗರಸಭೆ ಅಧಿಕಾರಿಗಳ ಹಾಗೂ ಸದಸ್ಯರ ಕಾರ್ಯವೈಖರಿ ವಿರುದ್ಧ ಬೇಸತ್ತು ರಸ್ತೆಗಿಳಿದು ಖಾಲಿ ಬಿಂದಿಗೆಗಳೊಂದಿಗೆ ರಸ್ತೆಗೆ ಅಡ್ಡಲಾಗಿ ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಲ್ಲೂ ಹೋರಾಟ: ಕಳೆದ ಹಲವು ದಿನಗಳಿಂದ ವಾರ್ಡ್ 25ರ ಸುತ್ತಮುತ್ತಲೂ ನೀರಿನ ಅಭಾವದ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳಿಗೂ ಹಾಗೂ ಅಧಿಕಾರಿಗಳಿಗೂ ದೂರು ನೀಡಿದರೂ ಸಮಸ್ಯೆಗೆ ಸ್ಪಂದಿಸಿಲ್ಲ. ಇದರಿಂದ ಶನಿವಾರ ಸಂಜೆ ಏಕಾಏಕಿ ಎಂಜಿ ರಸ್ತೆಯಲ್ಲಿ ನೂರಾರು ಮಹಿಳೆಯರು ಸೇರಿ ಖಾಲಿ ಬಿಂದಿಗೆಗಳನ್ನು ರಸ್ತೆಗೆ ಅಡ್ಡಲಾಗಿ ಇರಿಸಿ ಪ್ರತಿಭಟಿಸಿದರು. ಮಳೆ ಸುರಿಯುತ್ತಿದ್ದರೂ ಲೆಕ್ಕಸದೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ವಾಗ್ವಾದ: ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮುರಳಿ ಹಾಗೂ ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಜೊತೆ ಪ್ರತಿಭಟನಾಕಾರರು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲಗೊಂಡಿರುವ ಜೊತೆ ವಾಗ್ವಾದಕ್ಕಿಳಿದರು. ನಾಗರಿಕರಿಗೆ ನೀರನ್ನು ಕಲ್ಪಿಸಿಕೊಡಬೇಕೆಂದು ಘೇರಾವ್ ಹಾಕಿದರು. ನಂತರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಕೂಡಲೇ ನಗರಸಭಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದನ್ನು ತಕ್ಷಣ ಸರಿಪಡಿಸಲು ಸೂಚಿಸಿದರು. ನಂತರ ನೀರು ಸರಬರಾಜನ್ನು ಪಕ್ಕದ ವಾರ್ಡ್‌ನಿಂದ ತಾತ್ಕಾಲಿಕವಾಗಿ ಕಲ್ಪಿಸಿದ ನಂತರ ನಿವಾಸಿಗಳು ರಸ್ತೆತಡೆಯನ್ನು ಹಿಂದಕ್ಕೆ ಪಡೆದರು.
ಪರದಾಟ: ಏಕಾಏಕಿ ರಸ್ತೆತಡೆ ನಡೆಸಿದ್ದರಿಂದ 1 ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದ ಪರಿಣಾಮ ಬಾಗೇಪಲ್ಲಿ ವೃತ್ತದಿಂದ ಗಜಾನನ ವೃತ್ತದವರೆಗೂ ವಾಹನಗಳು ನಿಂತ ಪರಿಣಾಮ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟಾಯಿತು. ಇದರಿಂದ ದೂರದ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿ ಮಳೆಯಲ್ಲೇ ಜನರು ಪರದಾಡುವ ದೃಶ್ಯ ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.