ಕೋಲಾರ

ನೌಕರರ ಸಂಘಕ್ಕೆ ಆಯ್ಕೆ

Published On :

ಕೋಲಾರ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಕೋಲಾರ ಶಾಖೆಯ ಅಧ್ಯಕ್ಷರಾಗಿ ಕೋಲಾರ ನಗರಸಭೆಯ ಪೌರ ಕಾರ್ಮಿಕ ಸಿ.ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಜಿಎಫ್ ಶಾಖೆಗೆ ಎಂ.ಜಯರಾಂ, ಬಂಗಾರಪೇಟೆ- ಬಿ.ಎನ್. ವೆಂಕಟೇಶ್, ಮಾಲೂರು- ಆರ್. ವೆಂಕಟರಮಣ, ಮುಳಬಾಗಿಲು- ಲಕ್ಷ್ಮಯ್ಯ ಹಾಗೂ ಶ್ರೀನಿವಾಸಪುರ ಶಾಖೆಗೆ ರಾಮಚಂದ್ರಪ್ಪ ಅಧ್ಯಕ್ಷರಾಗಿದ್ದಾರೆಂದು ಸಂಘದ ಸಲಹೆಗಾರ ಎನ್. ವೆಂಕಟೇಶಪ್ಪ ತಿಳಿಸಿದ್ದಾರೆ.
ಅಕ್ರಮ ಮದ್ಯ ವಶ
ಚಿಂತಾಮಣಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸಾವಿರಾರು ರು. ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಲ್ಲಿಗಡ್ಡೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.  ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಪಲ್ಲಿಗಡ್ಡೆ ಗ್ರಾಮದ ನಿವಾಸಿ ರವಿ ಎಂಬಾತನು ತನ್ನ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಎಂಬ ದೂರಿನ ಮೇರೆಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ, ಸಿಬ್ಬಂದಿ ಶನಿವಾರ ರಾತ್ರಿ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿ ತಲೆ ಮರೆಸಿದ್ದಾನೆ.
ಯುವಕ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಬೇಸತ್ತು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಹೊರವಲಯದ ಕಲ್ಲಹಳ್ಳಿ ಹತ್ತಿರದ ತೋಟವೊಂದರಲ್ಲಿ ನಡೆದಿದೆ. ತಾಲೂಕಿನ ಕಲ್ಲಹಳ್ಳಿ ಗ್ರಾಮದ ಚಂದ್ರಶೇಖರ್ (25) ಎಂಬಾತನು ಪಟ್ಟಣದ ಹೊರವಲಯದ ಚಿಂತಾಮಣಿ- ಮದನಪಲ್ಲಿ ರಸ್ತೆಯ ಕುರುಟಹಳ್ಳಿ ಗೇಟ್ ಬಳಿ ಡಾಬಾವೊಂದನ್ನು ನಡೆಸುತ್ತಿದ್ದ ಎನ್ನಲಾಗಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುರೇಶ್ ಗೆಲವು ಖಚಿತ: ನಾರಾಯಣಸ್ವಾಮಿ
ಬಂಗಾರಪೇಟೆ: ರಾಜ್ಯದ ಜನತೆಯ ತೀವ್ರ ಕುತೂಹಲ ಕೆರಳಿಸಿರುವ ಎರಡು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರದಲ್ಲಿ ಕ್ಷೇತ್ರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ರ್ಧಿಸಿ ಸುಮಾರು 30 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲವು ದಾಖಲಿಸಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರಾಗಿ ನೇಮಿಸಲಾಗಿದೆ. ಅವರು ಮೂರು ದಿನ ಚನ್ನಪಟ್ಟಣ ಕ್ಷೇತ್ರದಲ್ಲಿ ಬೆಂಬಲಿಗರೊಂದಿಗೆ ಪ್ರವಾಸ ಮಾಡಿ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತದಾರರನ್ನು ಯಾವ ರೀತಿ ಸೆಳೆಯಬಹುದು ಎಂಬ ಬಗ್ಗೆ ಸ್ಥಳೀಯ ಮುಖಂಡರಿಗೆ ತಿಳಿಸಿದರು. ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎರಡೂ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸುವುದರಲ್ಲಿ ಎರಡು ಮಾತಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿದ್ದಾಗ ಏನೂ ಕೆಲಸ ಮಾಡದಿರುವುದು ಕಾಂಗ್ರೆಸ್‌ಗೆ ವರದಾನವಾಗಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿರುವುದರಿಂದ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಪಕ್ಷದ ಅಭ್ಯರ್ಥಿಗಳನ್ನು ಪುನರಾಯ್ಕೆ ಮಾಡಿದರೆ ಕ್ಷೇತ್ರ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಮತದಾರರು ನಿರ್ಧರಿಸಿರುವುದರಿಂದ ಕಾಂಗ್ರೆಸ್ ಜಯಭೇರಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷ ಮಂಜುನಾಥ್ ಇತರರು ಶಾಸಕರ ಜತೆ ಇದ್ದರು.
ಶೇಷಾದ್ರಿ ನೃತ್ಯ ಶಾಲೆಯ 3ನೇ ವಾರ್ಷಿಕೋತ್ಸವ
ಗೌರಿಬಿದನೂರು: ನೇತ್ರಗಳಿಗೆ ನಾಟ್ಯ ಆನಂದ ಉಂಟು ಮಾಡುತ್ತದೆ ಎಂದು ಪೊಲೀಸ್ ಅಧಿಕಾರಿ ವೆಂಕಟಪ್ಪ ನುಡಿದರು. ಪಟ್ಟಣದ ಸ್ಟೆಲ್ಲಾ ಕಾನ್ವೆಂಟು ರಸ್ತೆಯಲ್ಲಿರುವ ಶೇಷಾದ್ರಿ ನೃತ್ಯ ಶಾಲೆಯ 3ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾರತೀಯ ನೃತ್ಯ ಪ್ರಕಾರಗಳಾದ ಕಥಕ್ಕಳಿ, ಭರತನಾಟ್ಯ, ಒಡಿಸ್ಸಿ, ಮಣಿಪುರಿ ಮುಂತಾದ ನೃತ್ಯಗಳಲ್ಲಿ ಶಿಕ್ಷಣ ನೀಡುತ್ತಿರುವ ಪ್ರಾಂಶುಪಾಲ ಶೇಷಾದ್ರಿ ಯವರು ಅಭಿನಂದನೀಯರು ಎಂದರು. ಇದೇ ಸಂದರ್ಭದಲ್ಲಿ ನೃತ್ಯ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ  ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಾಂಶುಪಾಲರಾದ ಶೇಷಾದ್ರಿ ಶಾಲೆಯ ಧ್ಯೇಯೋದ್ದೇಶದ ಬಗ್ಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ನೃತ್ಯ ಸಭಿಕರಿಗೆ ಆನಂದ ಉಂಟುಮಾಡಿತು.
ಮಳೆ, ಬೆಳೆಗಾಗಿ ಕುಂಭಾಭಿಷೇಕ
ಚಿಂತಾಮಣಿ: ಜನರಿಗೆ ಉತ್ತಮ ಮಳೆ ಹಾಗೂ ಬೆಳೆಗಾಗಿ ಭಾನುವಾರ ಪಟ್ಟಣದ ಪ್ರಸಿದ್ಧ ನಾಗನಾಥೇಶ್ವರ ದೇವಾಲಯದಲ್ಲಿ ಕುಂಭಾಭಿಷೇಕವನ್ನು ಏರ್ಪಡಿಸಲಾಗಿತ್ತು. ಪಟ್ಟಣದ ಎನ್ ಎನ್.ಟಿ ರಸ್ತೆಯ ನೆಕ್ಕುಂದಿಯ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಜನರು ಸಮೃದ್ಧಿಯಾಗಿರಲು ಮತ್ತು ಉತ್ತಮ ಮಳೆ ಮತ್ತು ಬೆಳೆಗಾಗಿ ಭಾನುವಾರ ದೇವಾಲಯದಲ್ಲಿ ಕುಂಭಾಭಿಷೇಕವನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ 6 ಗಂಟೆಗೆ ಶ್ರೀ ವಿಘ್ನೇಶ್ವ ಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ವರ್ಣ, ಗಂಗಾ ಭಾಗೀರಥಿ ಪೂಜೆ, ಶತ ರುದ್ರಾಭಿಷೇಕ ಹಾಗೂ ಪೂರ್ಣ ಕುಂಭಾಭಿಷೇಕವನ್ನು ನಡೆಯಿತು. ಇದೇ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ, ವಿನಿಯೋಗ ಮಾಡಲಾಯಿತು.
ಗಾಯಗೊಂಡಿದ್ದ ಕಾರ್ಮಿಕ ಸಾವು
ಮಾಲೂರು: ಗ್ರಾನೆಟ್‌ನ್ನು ಕತ್ತರಿಸುವಾಗ ಸಿಡಿದ ಕಲ್ಲಿನಿಂದ ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ಪಟ್ಟಣದಲ್ಲಿ ಸಂಭವಿಸಿದೆ. ಮೃತನನ್ನು ಇಲ್ಲಿನ ಕೈಗಾರಿಕಾ ಪ್ರಾಂಗಾಣದಲ್ಲಿರುವ ಎಸ್‌ಎಪಿ ಗ್ರಾನೆಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾ ಮೂಲದ ಸಂತೋಷ್ ಕುಮಾರ್(22)ಎಂದು ಗುರುತಿಸಲಾಗಿದೆ. ಗ್ರಾನೆಟ್‌ನ್ನು ಕತ್ತರಿಸುವಾಗ ಸಿಡಿದ ಕಲ್ಲು ನೇರವಾಗಿ ಸಂತೋಷ ಕುಮಾರ್‌ಗೆ ಬಡಿದ ಕಾರಣ ಈ ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಸಂತೋಷನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತಂದರಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ ಆಶ್ರಯದಲ್ಲಿ 2013- 14ನೇ ಸಾಲಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯನ್ನು ಆ. 19ರಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಪುಪ್ಪಾ ಸರ್ಕಾರ್ ಉದ್ಘಾಟಿಸಲಿದ್ದಾರೆ.
ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಹಣ ವಶ
ಮಂಡ್ಯ: ಹಾಸನ ಜಿಲ್ಲೆಯ ಬೇಲೂರಿನಿಂದ ಬೆಂಗಳೂರಿಗೆ ಯಾವುದೇ ದಾಖಲಾತಿ ಇಲ್ಲದೆ ಕಾರೊಂದರಲ್ಲಿ ಸಾಗಿಸುತ್ತಿದ್ದ 15 ಲಕ್ಷ ಹಣವನ್ನು ಪೊಲೀಸರು ನಾಗಮಂಗಲ ತಾಲೂಕಿನ ಕದಬಳ್ಳಿ ಚೆಕ್‌ಪೋಸ್ಟ್ ಬಳಿ ಪೊಲೀಸರು ಹಣ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾನಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.