ಕೋಲಾರ

ಭೀಕರ ಅಪಘಾತ; ನಾಲ್ವರ ದಾರುಣ ಸಾವು

Published On :

ಚಿಕ್ಕಬಳ್ಳಾಪುರ: ಸರಕು ಸಾಗಣೆ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಪಟ್ಟಣದ ಹೊರವಲಯದ ಬೆಂಗಳೂರು- ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯ ಮಂಜುನಾಥ ಡಾಬಾ ಬಳಿ ನಡೆದಿದೆ. ಒಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದು, 7 ವರ್ಷದ ಹೆಣ್ಣು ಮಗು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಬೊಲೆರೋ ಸರಕು ಸಾಗಣೆ ವಾಹನಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತರನ್ನು ಮುದಿಗುಬ್ಬ ಗ್ರಾಮದ ಬೊಲೆರೋ ವಾಹನ ಚಾಲಕ ಸುರೇಶ್(25), ತಮಿಳುನಾಡಿನ ಸೂಳಗಿರಿ ಗ್ರಾಮದ ರಮೇಶ್(35) ಕದರಿ ಪಟ್ಟಣದ ಮೌಲಾಲಿ(30) ಆಂಧ್ರದ ಮಧುರೆಪಲ್ಲಿ ಗ್ರಾಮದ ಅಂಜನೇಯಲು(30) ಎಂದು ಗುರುತಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಕದಿರಿ ಗ್ರಾಮದ ಖಾಜಾ(22) ಎಂಬುವವರನ್ನು ಬೆಂಗಳೂರು ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಶಿವಪ್ರಸಾದ್(35)ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಆರಕ್ಷಕ ಉಪ ನಿರೀಕ್ಷಕ ವಿ. ಮುನಿರೆಡ್ಡಿ, ಅಪರಾಧ ವಿಭಾಗದ ಆರಕ್ಷಕ ಉಪ ನಿರೀಕ್ಷಕ ಕೆ.ಎಂ. ಶ್ರೀನಿವಾಸಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರೈಲಿನಿಂದ ಬಿದ್ದು ಮೂವರಿಗೆ ಗಾಯ
ಟೇಕಲ್: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪರಿಣಾಮ 3 ಮಂದಿಗೆ ಗಾಯಗಳಾದ ಘಟನೆ ಪಟ್ಟಣದ ರೈಲು ನಿಲ್ದಾಣದ ಸಮೀಪದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಈತನನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
   ಗಾಯಗೊಂಡವರನ್ನು ಬಂಗಾರಪೇಟೆಯ ಸೇಠ್ ಕಾಂಪೌಂಡ್ ನಿವಾಸಿ ಸುಹೇಲ್, ಊರಿಗಾಂನ ನವೀನ್, ಚಾಂಪಿಯನ್‌ರಿಪ್ಪ್‌ನ ನವೀನ್‌ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿಲ್ಲ.
ನಿಗಾ ವಹಿಸುವಂತೆ ಆಗ್ರಹ: ಬಹುತೇಕ ರಜಾ ದಿನಗಳಾದ್ದರಿಂದ ಸೋಮವಾರದ ಎಲ್ಲಾ ರೈಲುಗಳು ಕಿಕ್ಕಿರಿದ ಜನಸಂದಣಿಯಾಗಿತ್ತು. ಇತ್ತೀಚಿನ ದಿನದಲ್ಲಿ ರೈಲು ಗಾಡಿಯ ಬಾಗಿಲುಗಳ ಬಳಿ ಯುವಕರು ತುಂಬಿ ತುಳುಕುತ್ತಿದ್ದು, ನಿಲ್ದಾಣ ಬಂತ್ತೆಂದರೆ ಪ್ರಯಾಣಿಕರು ಇಳಿಯಲು ಆಗುವುದಿಲ್ಲ. ಬಾಗಿಲುಗಳಲ್ಲಿ ಜನರು ತೂರಾಡುತ್ತಿರುವುದು ದಿನನಿತ್ಯದ ಪ್ರಯಾಣಿಕರ ನರಕ ಯಾತನೆಯಾಗಿದೆ. ಟೇಕಲ್ ರೈಲು ನಿಲ್ದಾಣ ಬೆಂಗಳೂರು ದಂಡು ರೈಲ್ವೆ ಪೊಲೀಸರ ಸುಪರ್ದಿಗೆ ಇದ್ದು, ಈ ಬಗ್ಗೆ ಅವರು ಕ್ರಮಕೈಗೊಳ್ಳಬೇಕಾಗಿದೆ. ಪೊಲೀಸರು ನಿಗಾ ವಹಿಸಿದರೆ ಅವಘಡ ತಪ್ಪಿಸಬಹುದೆಂದು ಪ್ರಯಾಣಿಕರ ಅಳಲಾಗಿದೆ.
ಅಪಘಾತ; ವ್ಯಕ್ತಿ ಸಾವು
ಕೋಲಾರ: ತೋಟಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಲಕ್ಷ್ಮೀಸಾಗರದ ನಿವಾಸಿ ರಂಜಿತ್ ಎಂದು ಗುರುತಿಸಲಾಗಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಕಳವು
ಕೋಲಾರ: ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ತೋಕಲಘಟ್ಟದಲ್ಲಿ ಕಳ್ಳರು ಲಕ್ಷ್ಮೇಗೌಡ ಎಂಬುವರ ಮನೆಯ ಬೀಗವನ್ನು ಮುರಿದು 1.50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.