ಕೋಲಾರ

ಜನಮನದಲ್ಲಿ ಅರಸು, ರಾಜೀವ್‌ಗಾಂಧಿ ಚಿರಸ್ಥಾಯಿ

Published On :

ಕನ್ನಡಪ್ರಭ ವಾರ್ತೆ , ಕೋಲಾರ , ಆ.20
ಪ್ರತಿ ವರ್ಷ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ ಹುಟ್ಟುಹಬ್ಬವನ್ನು ಸಾಂಕೇತಿಕವಾಗಿ ಆಚರಿಸುತ್ತಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಬಾರಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಡವರಿಗೆ ವಸ್ತ್ರ ಮತ್ತು ಹೊದಿಕೆಗಳ ದಾನದ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಸಹಕಾರದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ನಜೀರ್ ಅಹಮ್ಮದ್ ಮಾತನಾಡಿ, ದೇವರಾಜ ಅರಸು ಮತ್ತು ರಾಜೀವ್‌ಗಾಂಧಿ ಅವರು ಈ ದೇಶದ ಆಶಾಕಿರಣವಾಗಿದ್ದರು ಎಂದು ಬಣ್ಣಿಸಿದರು.
ಅಪರೂಪದ ಸಾಧನೆ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್. ಅನಿಲ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಭೂ ಸುಧಾರಣೆಗಾಗಿ ದೇವರಾಜ ಅರಸು ಹಾಗೂ ಆಡಳಿತ ವಿಕೇಂದ್ರೀಕರಣದ ರುವಾರಿಯಾಗಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಸಾಧನೆ ಮಾಡಿದ್ದಾರೆಂದು ಹೇಳಿದರು.
ಯುವಕರಿಗೆ ಮತದಾನದ ಹಕ್ಕನ್ನು 21ರಿಂದ 18 ವರ್ಷಕ್ಕೆ ಇಳಿಸುವ ಮೂಲಕ ಹೊಸ ಕ್ರಾಂತಿಯನ್ನು ಮೂಡಿಸಿದ ರಾಜೀವ್‌ಗಾಂಧಿ ಮತ್ತು ಶೋಷಿತರ ದನಿಯಾಗಿ ದೇವರಾಜ ಅರಸು ಇಂದಿಗೂ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಈ ಇಬ್ಬರು ನಾಯಕರ ಆದರ್ಶಗಳನ್ನು ಪಾಲಿಸುವ ಮುಖೇನ ಕಾಂಗ್ರೆಸ್ ಕಾರ್ಯಕರ್ತರು ದೇಶವನ್ನು ಸುಭ್ರವಾಗಿಸಲು ಪಣತೊಡಬೇಕಾಗಿದೆ ಎಂದರು.
ಶ್ಲಾಘನೀಯ: ಮುಳಬಾಗಲು ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಪಕ್ಷ ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಗರ್ಭಿತವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಮಾತನಾಡಿ, ದೇಶದ ಬಡವರು, ಹಿಂದುಳಿದ ವರ್ಗದವರು ಸಹ ಅಧಿಕಾರವನ್ನು ಅನುಭವಿಸುವ ಅವಕಾಶವನ್ನು ಈ ಇಬ್ಬರು ಮಹಾನಾಯಕರು ಕಲ್ಪಿಸಿದ ಪರಿಣಾಮ ಅನೇಕ ವರ್ಗದವರು ಮೇಲೆ ಬರಲು ಸಹಕಾರಿಯಾಗಿದೆ ಎಂದರು.
ಹೊದಿಕೆ ವಿತರಣೆ: ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಣಿ, ನಗರಸಭೆ ಸದಸ್ಯ ರಮೇಶ್, ಮಾಜಿ ಅಧ್ಯಕ್ಷ ನಾಜೀಯಾ ಬೇಗಂ, ಮುಕ್ಕಡ್ ವೆಂಕಟೇಶ್, ಮಂಜುನಾಥ್, ಬುಸನಹಳ್ಳಿ ಆಂಜಿನಪ್ಪ, ವೆಂಕಟಚಲಪತಿ, ಗೋಪಾಲಗೌಡ ಮತ್ತಿತರ ಪದಾಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಅಂತರಗಂಗೆ ಬುದ್ಧಿಮಾಂದ್ಯ ಮಕ್ಕಳಿಗೆ ಹೊದಿಕೆ, ಹಣ್ಣುಗಳನ್ನು ವಿತರಣೆ ಮಾಡಲಾಯಿತು. ನಂತರ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್ ಬಳಿ ಇರುವ ನಿರ್ಗತಿಕರ ಕೇಂದ್ರ ಹಾಗೂ ಇನ್ನಿತರ ಕಡೆ ಬಡವರಿಗೆ ಸೀರೆ, ಹೊದಿಕೆಗಳನ್ನು ವಿತರಣೆ ಮಾಡಲಾಯಿತು.
ಮುಖಂಡರ ಮುನಿಸು: ಕಾರ್ಯಕ್ರಮಕ್ಕೆ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಭಾಗವಹಿಸಿದ್ದರಿಂದ ಕೆಲ ಕಾಂಗ್ರೆಸ್ ಮುಖಂಡರು ಮುನಿಸಿಕೊಂಡು ಕಾರ್ಯಕ್ರಮದಿಂದ ಹೊರಗೆ ಉಳಿದಿದ್ದರು.
ಜಿಲ್ಲಾ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಮುಖಂಡ ಅಶ್ವಥನಾರಾಯಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.