ಕೋಲಾರ

ಬಡವರಿಗೆ ಭೂಮಿ ನೀಡಿ: ದಸಂಸ

Published On :

ಶ್ರೀನಿವಾಸಪುರ: ತಾಲೂಕಿನಾದ್ಯಂತ ಇರುವ ಬುಗರ್‌ಹುಕುಂ ಸಾಗುವಳಿ ಭೂಮಿಯನ್ನು ಅಕ್ರಮ ಸಕ್ರಮ ಮಾಡುವ ಧರಖಾಸ್ತು ಸಮಿತಿಯನ್ನು ರಚಿಸಿ ಬಡವರಿಗೆ ಭೂಮಿಯನ್ನು ಮಂಜೂರು ಮಾಡಿ, ಸಾಗುವಳಿ ಚೀಟಿಗಳನ್ನು ನೀಡುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಕಳೆದ 12-13 ವರ್ಷಗಳ ಹಿಂದೆ ಇದ್ದಂತಹ ಆಡಳಿತ ಪಕ್ಷದವರು ಭೂ ಮಂಜೂರಾತಿ ಸಮಿತಿಯನ್ನು ರಚಿಸಿ ಆಗ ಅಕ್ರಮವಾಗಿ ಗೋಮಾಳ  ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದಾರೆ. ಗೋಮಾಳ ಜಮೀನುಗಳನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ಜಮೀನುಗಳನ್ನು ಸಕ್ರಮ ಮಾಡಿ ಸಾಗುವಳಿ ಚೀಟಿಗಳನ್ನು ನೀಡುವ ಧರಖಾಸ್ತು ಸಮಿತಿಯನ್ನು ಶೀಘ್ರವೇ ರಚಿಸಿ ಬಡ ಸಾಗುವಳಿದಾರರಿಗೆ ಜಮೀನುಗಳನ್ನು ಮಂಜೂರು ಮಾಡಿಕೊಡುವಂತೆ ದಲಿತ ಸಂಘರ್ಷ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
11 ಜನ ನಿರ್ದೇಶಕರ ಅವಿರೋಧ ಆಯ್ಕೆ
ಚಿಂತಾಮಣಿ: ಅಂಕಾಲಮಡುಗು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2013-14ರಿಂದ 2017-18ವರೆಗೆ 11 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎನ್.ಎ. ಪ್ರಕಾಶ್ ತಿಳಿಸಿದ್ದಾರೆ. ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಅಂಕಾಲಮಡುಗು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2013-14ರಿಂದ 2017-18ವರೆಗೆ 11 ಜನ ನಿರ್ದೇಶಕರು ಅವಿರೋಧವಾಗಿ ಟಿ. ಕೊಂಡಪ್ಪ, ಎಸ್. ಶ್ರೀನಿವಾಸರೆಡ್ಡಿ, ಎ.ಇ. ರವಣಮ್ಮ, ಎ.ವಿ. ನಾನಮ್ಮ, ಚೌಡಪ್ಪ, ಆಂಜನೇಯರೆಡ್ಡಿ, ಮದ್ದಿರೆಡ್ಡಿ, ಎ.ವಿ. ಆಂಜನೇಯರೆಡ್ಡಿ, ಎ.ಎಸ್. ವೆಂಕಟರವಣ, ವೆಂಕಟರಾಯಪ್ಪ, ವೆಂಕಟರಮಣ ಆಯ್ಕೆಯಾಗಿದ್ದಾರೆ.
ಪ್ರತಿಭಟನೆ
ಗೌರಿಬಿದನೂರು: ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ನಗರ ಕಾರ್ಯದರ್ಶಿ ಹರೀಶ್‌ಕುಮಾರ್ ಆರೋಪಿಸಿದರು. ಸರ್ಕಾರಿ ಪದವಿ ಕಾಲೇಜು ಹಾಗೂ ನ್ಯಾಷನಲ್ ಕಾಲೇಜು ಪದವಿ ವಿದ್ಯಾರ್ಥಿಗಳಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾತನಾಡಿದರು. ನಗರೆಗೆರೆ, ಡಿ. ಪಾಳ್ಯ, ಕಡಬೂರು ಮುಂತಾದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸರಿಯಾಗಿಲ್ಲದಿರುವುದರಿಂದ ವ್ಯಾಸಂಗಕ್ಕೆ ತೊಂದರೆಯಾಗಿದೆ ಎಂದರು. ಎಂ.ಜಿ. ಸರ್ಕಲ್‌ನಲ್ಲಿ ಕೆಲವು ಕಾಲ ರಸ್ತೆ ತಡೆ ಮಾಡಿದರು. ಸಮಸ್ಯೆಯನ್ನು ಆಲಿಸಿದ ತಹಸೀಲ್ದಾರ್ ಡಾ. ಎನ್. ಭಾಸ್ಕರ್ ಹಾಗೂ ಸಾರಿಗೆ ನಿಗಮದ ಡಿಪೋ ವ್ಯವಸ್ಥಾಪಕ ಹನುಮಂತಪ್ಪ ಅವರು ಮನವಿ ಪತ್ರವನ್ನು ಸ್ವೀಕರಿಸಿ ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಪಾಳು ಬಾವಿಗೆ ಬಿದ್ದಿದ್ದ ಹಸು ರಕ್ಷಣೆ
ಚಿಂತಾಮಣಿ: ಹಸುವೊಂದು ಹುಲ್ಲು ಮೇಯುತ್ತಾ ಆಕಸ್ಮಿಕವಾಗಿ ಪಾಳು ಬಿದ್ದ 30 ಅಡಿ ಆಳವಿರುವ ಬಾವಿಗೆ ಬಿದ್ದ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ತಾಲೂಕಿನ ದೊಡ್ಡಹಳ್ಳಿ ಗ್ರಾಮದ ರೈತ ಆಂಜನೇಯರೆಡ್ಡಿ ಎಂಬವರಿಗೆ ಸೇರಿದ ಹಸು ಹುಲ್ಲು ಮೇಯುತ್ತಿದ್ದಾಗ ಬಾವಿಗೆ ಬಿದ್ದಿದೆ. ತಕ್ಷಣ ಮಾಲೀಕನ ದೂರಿನ ಮೇರೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು 2 ಗಂಟೆ ಕಾಲ ಹರ ಸಾಹಸದಿಂದ ಮೇಲಕ್ಕೆ ಹಸುವನ್ನು ಎತ್ತಲು ಪ್ರಯತ್ನಿಸಿ ಯಶಸ್ವಿಯಾದರು.  ಇದರಿಂದ ನೊಂದ ರೈತನಿಗೆ ಅಲ್ಪ ಪ್ರಮಾಣದಲ್ಲಿ ನಿಟ್ಟುಸಿರು ಬಿಡುವಂತಾಯಿತು. ಅಗ್ನಿಶಾಮಕ ಅಧಿಕಾರಿಯಾದ ನಾಗೇಶ್, ಸಿಬ್ಬಂದಿ ಸೋಮಶೇಖರ್, ನರಸಪ್ಪ, ಮಂಜುನಾಥ್, ರಾಮಾಂಜಿ, ಮುಕುಂದಪ್ಪ, ಜಯಾನಾಯಕ್ ಸೇರಿದಂತೆ ಗ್ರಾಮಸ್ಥರ ಸಹಕಾರದೊಂದಿಗೆ ಹಸುವನ್ನು ಮೇಲೆತ್ತಲಾಯಿತು.
ಚರಂಡಿ ನೀರು ರಸ್ತೆಗೆ; ಗ್ರಾಮಸ್ಥರ ದೂರು
ಚಿಂತಾಮಣಿ: ರಾಜಕೀಯ ದುರುದ್ದೇಶದಿಂದ ಗ್ರಾಮದ ಚರಂಡಿ ನೀರನ್ನು ರಸ್ತೆ ಮುಖಾಂತರ ಹೋಗಲು ಹುನ್ನಾರ ಮಾಡಿರುವ ವ್ಯಕ್ತಿಗಳ ವಿರುದ್ಧ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಾಲೂಕಿನ ಗಡಿಭಾಗದ ಅಂಕಾಲಮಡುಗು ಗ್ರಾಮದಲ್ಲಿ ಕ್ಷುಲ್ಲಕ ರಾಜಕೀಯ ದುರುದ್ದೇಶದಿಂದ ಮಾಜಿ ಶಾಸಕ ಹಾಗೂ ಹಾಲಿ ಶಾಸಕ ಬೆಂಬಲಿಗರು ಗ್ರಾಮದಲ್ಲಿ ಪ್ರತಿಯೊಂದಕ್ಕೂ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಗ್ರಾಮ ಅಭಿವೃದ್ಧಿ ಕಡೆ ಗಮನ ನೀಡದೇ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಉಂಟಾಗಿದೆ.  ಕಳೆದ 2 ದಿನಗಳಿಂದ ಗ್ರಾಮದ ಪರ-ವಿರೋಧ ರಾಜಕೀಯ ಮುಖಂಡರು ಗ್ರಾಮದ ಚರಂಡಿ ನೀರನ್ನು ರಸ್ತೆಗೆ ಬಿಟ್ಟು ಜನಸಾಮಾನ್ಯರ ಜೀವನಗಳ ಜೊತೆ ಚೆಲ್ಲಾಟ ಆಡುತ್ತಿರುವುದರ ಬಗ್ಗೆ ಜನರಲ್ಲಿ ಅಸಮಾಧಾನ ಉಂಟಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಊಟದ ತಟ್ಟೆ, ಲೋಟ ವಿತರಣೆ
ಶ್ರೀನಿವಾಸಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆರಿಕುಂಟೆ ಸಂಯುಕ್ತ ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯ ಮುನಿರೆಡ್ಡಿ ಅವರು ಊಟದ ತಟ್ಟೆ ಮತ್ತು ಲೋಟಗಳನ್ನು ದಾನವಾಗಿ ನೀಡಿದರು. ಗ್ರಾಪಂ ಅಧ್ಯಕ್ಷೆ ಫಾತೀಮಾ ಭಾನು ಮಾತನಾಡಿದರು. ಮುಖ್ಯೋಪಾಧ್ಯಾಯ ಜಿ.ಕೆ. ಶ್ರೀನಿವಾಸ್ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಪಂ ಉಪಾಧ್ಯಕ್ಷ ಶಂಕರಪ್ಪ, ಸದಸ್ಯರಾದ ವೆಂಕಟರವಣ, ಸತೀಶ, ಲಕ್ಷ್ಮಣರೆಡ್ಡಿ, ವೆಂಕಟರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮುನಿಸ್ವಾಮಿರೆಡ್ಡಿ ಗಂಗಪ್ಪ, ವೆಂಕಟರೆಡ್ಡಿ, ರಂಗಾರೆಡ್ಡಿ, ಲಕ್ಷ್ಮಣರೆಡ್ಡಿ, ಹಾಗೂ ಶಿಕ್ಷಕರಾದ ಶಂಕರಭೀಮ ಕಾಂಬಳೆ, ರಾಜೇಶ್ವರಿ, ವೆಂಕಟೇಶಬಾಬು, ವೆಂಕಟಶಾಮಯ್ಯ ಇದ್ದರು. ಸೌಮ್ಯ, ನಳಿನಿ ಪ್ರಾರ್ಥಿಸಿದರು, ಶಿಕ್ಷಕ ಎಂ. ಮುರಳಿಬಾಬು ಸ್ವಾಗತಿಸಿದರು. ಎ.ವಿ. ಶ್ರೀನಾಥ ವಂದಿಸಿದರು. ಎನ್. ಶ್ರೀನಾಥ ನಿರೂಪಿಸಿದರು.
ಸ್ವಾತಂತ್ರ್ಯ ದಿನಾಚರಣೆ
ಶ್ರೀನಿವಾಸಪುರ: ತಾಲೂಕಿನ ನಂಬಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಣ ಸಂಯೋಜಕ ಎನ್.ಡಿ. ವೆಂಕಟರಾಮರೆಡ್ಡಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಊಟದ ತಟ್ಟೆ, ಲೋಟಗಳನ್ನು ವಿತರಿಸಿದರು. ಬೇಬಿ ನಾಜಿಮಾ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಆರ್. ಶ್ರೀನಿವಾಸರೆಡ್ಡಿ, ಸುಜಾತಮ್ಮ, ನಾರೆಮ್ಮ, ನರಸಿಂಹಪ್ಪ, ಚೌಡಪ್ಪ ವೆಂಕಟಲಕ್ಷ್ಮಮ್ಮ, ಚೌಡಪ್ಪ ಡಾ. ಎನ್.ಜಿ. ಶಿವಪ್ರಸಾದ್ ಹಾಜರಿದ್ದರು. ಕುಮಾರಿ ಎನ್.ವಿ. ವೇದಾ ಮತ್ತು ಸಂಗಡಿಗರಿಂದ ಪ್ರಾರ್ಥನೆ, ಪಿ.ಎನ್. ಬಾಲಕೃಷ್ಣರಾವ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.