ಮರಳು ಫಿಲ್ಟರ್ ಅಡ್ಡೆ ಮೇಲೆ ದಾಳಿ
ಚಿಂತಾಮಣಿ: ಅಕ್ರಮ ಮರಳು ಫಿಲ್ಟರ್ ಅಡ್ಡೆಗಳ ಮೇಲೆ ತಾಲೂಕು ದಂಡಾಧಿಕಾರಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿರುವ ಘಟನೆ ನಡೆದಿದೆ.
ಚಿಂತಾಮಣಿ ತಾಲೂಕಿನ ಮರಳು ಫಿಲ್ಟರ್ ದಂದೆ ಸ್ಥಳಗಳಾದ ಗುಂಡ್ಲಹಳ್ಳಿ, ಚಿನ್ನಪಲ್ಲಿ, ಏನಿಗದಲೆ, ಮಾದಮಂಗಲ, ಗೊಂದಿಗೆರೆ, ಗಂಗಪಾಳ್ಯ, ಬಾಲರೆಡ್ಡಿಪಲ್ಲಿ ಸೇರಿದಂತೆ ಇನ್ನೂ ಹಲವು ಅಡ್ಡೆಗಳ ಮೇಲೆ ತಾಲೂಕು ದಂಡಾಧಿಕಾರಿಗಳಾದ ಎಂ.ಎನ್.ಮಂಜುನಾಥ್ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಅಕ್ರಮ ಫಿಲ್ಟರ್ ದಂದೆಯಲ್ಲಿ ಬಳಸುವ ಯಂತ್ರೋಪಕರಣಗಳನ್ನು ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನಾಶಪಡಿಸಲಾಯಿತು.
ಈ ಭಾಗದಲ್ಲಿ ರಾಜಕೀಯ ಮುಖಂಡರ ಬೆಂಗಾವಲಿನಲ್ಲಿ ಮರಳು ದಂಧೆ ನಡೆಯುತ್ತಿದ್ದರೂ ತಾಲೂಕು ಆಡಳಿತ ಮೌನವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಬಿಸಿ ಮುಟ್ಟಿಸಿದ ಪರಿಣಾಮ ತಾಲೂಕು ಆಡಳಿತ ಎಚ್ಚೆತ್ತುಕೊಂಡು ನಾಮ್ ಕೆ ವಾಸ್ತೆ ಈ ದಾಳಿ ಮಾಡಿರಬಹುದೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಆರೋಪ: ಕಳೆದ ಹಲವು ತಿಂಗಳಿಂದ ಈ ಪ್ರದೇಶದ ಕೆರೆ ಕುಂಟೆಗಳಲ್ಲಿ ರಾಜಾರೋಷವಾಗಿ ಮರಳು ತೆಗೆದು ಚಿಂತಾಮಣಿ ಮತ್ತು ಬೆಂಗಳೂರು ನಗರಕ್ಕೆ ಅಕ್ರಮವಾಗಿ ಲಾರಿಗಳಲ್ಲಿ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಆದರೂ ಕಾರ್ಯಾಚರಣೆ ನಡೆಸದ ಸ್ಥಳೀಯ ಕೆಂಚಾರ್ಲಹಳ್ಳಿ ಹಾಗೂ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ಪೊಲೀಸರು, ಕಂದಾಯ ಅಧಿಕಾರಿಗಳು ಮರಳು ಧಂದೆ ನಡೆಸುವ ಮಾಲೀಕರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಸುತ್ತಮುತ್ತಲ ಗ್ರಾಮಸ್ಥರು ದೂರಿದ್ದರು. ಆದರೆ, ಇದಕ್ಕೂ ಸ್ಪಂದಿಸದೆ, ತಾಲೂಕು ದಂಡಾಧಿಕಾರಿಗಳ ನಿರ್ಲಕ್ಷ್ಯದಿಂದ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಾಗೂ ಮರಳು ಮಾಫಿಯಾಗೆ ಕಡಿವಾಣ ಹಾಕಲು ಮೀನಮೇಷ ಎಣಿಸಿ ಈಗ ಕಾಟಾಚಾರಕ್ಕೆ ಮರಳು ತಾಣಗಳ ಮೇಲೆ ದಾಳಿ ನಡೆಸಿ ಜನ ಮೆಚ್ಚಲು ಮುಂದಾಗಿರುವುದಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.
ಈ ವೇಳೆ ಸಬ್ ಇನ್ಸ್ಪೆಕ್ಟರ್ ಪ್ರವೀಣ್ಕಮಾರ್, ಕಂದಾಯ ಅಧಿಕಾರಿಗಳಾದ ಮಂಜುನಾಥ್, ಧನಶೆಟ್ಟಿಪಾಲ್, ದೇವರಾಜ್ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.
ಇನ್ನು ಮುಂದಾದರೂ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಕಡ್ಡಾಯವಾಗಿ ಮರಳು ಮಾಫಿಯಾಗೆ ಕಡಿವಾಣ ಹಾಕಿ ಪರಿಸರ ಉಳಿವಿಗಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

