ಲೋಕಾ: ಕುಂದು ಕೊರತೆ ಸಭೆ
ಕೋಲಾರ: ತಾಲೂಕಿನ ಹುತ್ತೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಮಂಗಳವಾರ ಲೋಕಾಯುಕ್ತ ಹೋಬಳಿ ಮಟ್ಟದ ಕುಂದುಕೊರತೆ ಸಭೆ ನಡೆಯಿತು. ಹಿಂದೆ ನೀಡಿದ್ದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅರ್ಜಿಗಳ ವಿಲೇವಾರಿಗೆ ವಿಳಂಬ ಮಾಡಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಜನತೆ ನೀಡುವ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ 15 ದಿನದೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಮತ್ತು ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದರು. ಈ ವೇಳೆ ಹುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೋಟೆ ನಾರಾಯಣಸ್ವಾಮಿ, ಉಪಾಧ್ಯಕ್ಷ ಮಂಜುನಾಥ್, ಪಿಡಿಒ ಲಕ್ಷ್ಮೀ, ನಾಡಕಚೇರಿ ಡೆಪ್ಯೂಟಿ ತಹಸೀಲ್ದಾರ್ ಸುಜಾತಮ್ಮ, ಆರ್.ಐ.ರವಿ, ಗ್ರಾಪಂ ಸದಸ್ಯರಾದ ವೆಂಕಟಮುನಿಯಪ್ಪ, ನಾಗರಾಜು, ಶ್ರೀರಾಮಪ್ಪ, ಕೃಷ್ಣಪ್ಪ, ಗಂಗಾಧರ, ಸುಶೀಲಮ್ಮ, ರೇಣುಕಾ ಶ್ರೀನಿವಾಸ್ ಇದ್ದರು.
ವರಪ್ರಸಾದ ರೆಡ್ಡಿ ಅವರಿಗೆ ಪ್ರಶಸ್ತಿ
ಗೌರಿಬಿದನೂರು: ಉತ್ತರಾಂಚಲ್ನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜನರನ್ನು ರಕ್ಷಿಸಲು ಕರ್ನಾಟಕ ಸರ್ಕಾರದಿಂದ ಸೇವೆಗಾಗಿ ನಿಯೋಜಿಸಲ್ಪಟ್ಟ 5 ಮಂದಿ ಅಧಿಕಾರಿಗಳ ತಂಡದಲ್ಲಿನ ಗೌರಿಬಿದನೂರು ತಾಲೂಕಿನ ಹುಣಸೇನಹಳ್ಳಿಯ ಕೆಎಎಸ್ ಅಧಿಕಾರಿ ವರಪ್ರಸಾದ ರೆಡ್ಡಿ ಅವರನ್ನು ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ವಿದ್ಯಾರ್ಥಿಗಳಿಗೆ ಪುರಸ್ಕಾರ; ಅರ್ಜಿ
ಶ್ರೀನಿವಾಸಪುರ: ಗಾಣಿಗರ ಸಮುದಾಯದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.80ರಷ್ಟು ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ ಪ್ರೋತ್ಸಾಹಿಸುವುದಾಗಿ ತಾಲೂಕು ಗಾಣಿಗ ಸಂಘ ತಿಳಿಸಿದೆ. ವಿದ್ಯಾರ್ಥಿಗಳ ಅಂಕಪಟ್ಟಿ ಜೆರಾಕ್ಸ್, ವಾಸಸ್ಥಳ ಪ್ರಮಾಣ ಪತ್ರ ಮತ್ತು ಭಾವಚಿತ್ರವನ್ನು ಸಂಘದ ಕಾರ್ಯದರ್ಶಿ ವಿ. ಶ್ರೀನಿವಾಸ ಅವರಿಗೆ ನೀಡಬೇಕು. ವಿವರಕ್ಕೆ 97380 05901 ಸಂಪರ್ಕಿಸಬಹುದು.
ನಾಳೆಯಿಂದ ಅಹವಾಲು ಸ್ವೀಕಾರ
ಚಿಕ್ಕಬಳ್ಳಾಪುರ: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಆ.23 ರಂದು ಬೆಳಗ್ಗೆ 11ಕ್ಕೆ ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ, ಚಿಂತಾಮಣಿ ತಾಲೂಕು ವ್ಯಾಪ್ತಿಗೆ ಸೇರಿದ ಗ್ರಾಮಗಳ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಶಿಡ್ಲಘಟ್ಟ ತಾಲೂಕಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ, ಆ.24ರಂದು ಬೆಳಗ್ಗೆ 11ಕ್ಕೆ ಗೌರಿಬಿದನೂರು ತಾಲೂಕಿನ ತಾಲೂಕು ಕಚೇರಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಹಾಗೂ ಮ.3ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ತಾಪಂ ಕಚೇರಿ ಸಭಾಂಗಣದಲ್ಲಿ, ಆ.27 ಬೆಳಗ್ಗೆ 11ಕ್ಕೆ ಗುಡಿಬಂಡೆ ತಾಲೂಕಿನ ತಾಪಂ ಕಚೇರಿ ಸಭಾಂಗಣದಲ್ಲಿ, ಹಾಗೂ ಮ.3ಕ್ಕೆ ಬಾಗೇಪಲ್ಲಿ ತಾಲೂಕಿನ ಪುರಸಭೆ ಸಭಾಂಗಣದಲ್ಲಿ ಬಾಗೇಪಲ್ಲಿ ತಾಲೂಕು ವ್ಯಾಪ್ತಿಗೆ ಸೇರಿದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ, ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಮತ್ತು ಹಣಕ್ಕೆ ಒತ್ತಾಯಿಸುತ್ತಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಅಹವಾಲು ನೀಡಬಹುದು.
ಛಾಯಾಗ್ರಾಹಕರ ವೃತ್ತಿ ಅತ್ಯಂತ ಕಠಿಣ: ಶಾಸಕ ರಾಜಣ್ಣ
ಶಿಡ್ಲಘಟ್ಟ: ಛಾಯಾಗ್ರಾಹಕರ ವೃತ್ತಿ ಅತ್ಯಂತ ಕಠಿಣವಾದದ್ದು ಹಾಗೂ ಹೆಚ್ಚು ಹಣ ತೊಡಗಿಸುವ ವೃತ್ತಿಯಾಗಿದೆಯೆಂದು ಶಾಸಕ ರಾಜಣ್ಣ ಮಾತನಾಡಿದರು. ವಿಶ್ವ ಛಾಯಾಗ್ರಾಹಕರ ದಿನಾಚರಣೆ ಪ್ರಯುಕ್ತ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಾಜಣ್ಣ, ಛಾಯಾಗ್ರಾಹಕರು ಸಂಘಟನೆಯನ್ನು ಮಾಡಿ 150ಕ್ಕೂ ಹೆಚ್ಚು ಜನ ಸಂಘದಲ್ಲಿ ಸೇರಿದ್ದು ಸಂತೋಷದಾಯಕ. ಪಟ್ಟಣವು 8000-9000 ಜನ ರೇಷ್ಮೆ ಗುಡಿ ಕೈಗಾರಿಕೆಯನ್ನು ನಂಬಿದ್ದು, ಪಟ್ಟಣದಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ. ಮುಖ್ಯವಾಗಿ ಕುಡಿಯುವ ನೀರಿಗೆ ತುಂಬ ಅಭಾವವಿದ್ದು, ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಹಿರಿಯ ಛಾಯಾಗ್ರಾಹಕ ರೂಪಸಿ ರಮೇಶ್ ಮಾತನಾಡಿದರು. ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎನ್. ವೆಂಕಟೇಶ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ಚಿನ್ನಿ, ಎನ್. ವೆಂಕಟೇಶ್, ಜಿ. ಸುಬ್ರಮಣಿ, ರಾಮಕೃಷ್ಣ, ಮೇಘನಾ ಇದ್ದರು.
ತಾಲೂಕು ಕಚೇರಿಗೆ ಶಾಸಕ ನಾರಾಯಣಸ್ವಾಮಿ ಭೇಟಿ
ಬಂಗಾರಪೇಟೆ: ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದ ಕಂಪ್ಯೂಟರ್ ವಿಭಾಗಕ್ಕೆ ಮಂಗಳವಾರ ಶಾಸಕ ಎಸ್.ಎನ್. ನಾರಾಯಣಸ್ವಾಮಿ ದಿಢೀರನೇ ಭೇಟಿ ನೀಡಿ, ಅಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಖುದ್ದಾಗಿ ಪರಿಶೀಲಿಸಿದರು.
ರಾಜಸ್ವ ಇಲಾಖೆ, ಸರ್ವೆ ಇಲಾಖೆ ಸೇರಿಂದತೆ ಎಲ್ಲಾ ಇಲಾಖೆ ವತಿಯಿಂದ ಕಂಪ್ಯೂಟರ್ನಲ್ಲಿ ನಮೂದಿಸುವ ಸಲುವಾಗಿ ಬರು ನೂರಾರು ಕಡತಗಳನ್ನು ವಿಲೇವಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂದು ಬಂದ ದೂರಗಳ ಹಿನ್ನೆಲೆಯಲ್ಲಿ ಶಾಸಕರು ದಿಢೀರನೇ ಭೇಟಿ ನೀಡಿದರು.
ಶಾಸಕ ನಾರಾಯಣಸ್ವಾಮಿ ಆಯ್ಕೆಯಾದ ಮೂರು ತಿಂಗಳಲ್ಲಿ ಜಿಡ್ಡುಗಟ್ಟಿರುವ ಹಲವು ಇಲಾಖೆಗಳಿಗೆ ಹಠಾತ್ ಭೇಟಿ ನೀಡಿ ಚುರುಕು ಮುಟ್ಟಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇದರ ಪಕ್ಕದಲ್ಲೇ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಉದ್ಘಾಟನೆ ಹಂತದಲ್ಲಿದೆ. ಕಾಮಗಾರಿಯ ಗಣಮಟ್ಟವನ್ನು ಪರಿಶೀಲಿಸಿ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮತ್ತು ಪುರಸಭೆ ಮಾಜಿ ಅಧ್ಯಕ್ಷರಾದ ಕೆ. ಚಂದ್ರಾರೆಡ್ಡಿ, ಶಂಷುದ್ದಿನ್ ಬಾಬು ಶಾಸಕರೊಂದಿಗೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

