ಸಾಮೂಹಿಕ ವರ್ಗ ಭೀತಿ
ಕೋಲಾರ: ನಗರದ ಸರ್ಕಾರಿ ಬಾಲಕರ ಕಾಲೇಜಿನ 54 ಮಂದಿ ಬೋಧಕರ ಸಾಮೂಹಿಕ ವರ್ಗಾವಣೆಯ ಗುಮ್ಮ ಶೈಕ್ಷಣಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆಯಲ್ಲದೆ, ಉಪನ್ಯಾಸಕರಲ್ಲಿ ತಳಮಳ ಉಂಟು ಮಾಡಿದೆ.
ವರ್ಗಾವಣೆಯ ಗುಮ್ಮ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಸರ್ಕಾರ ಕಾಲೇಜಿನ ಹಿತಾಸಕ್ತಿ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಡೆ ಗಮನ ನೀಡದ ಉಪನ್ಯಾಸಕರ ಮೇಲೆ ಕ್ರಮ ಜರುಗಿಸಲಿ. ಆದರೆ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವವರನ್ನು ಸಾಮೂಹಿಕ ವರ್ಗಾವಣೆ ಪಟ್ಟಿಗೆ ಸೇರಿಸಿದರೆ ವಿರೋಧಿಸುವುದಾಗಿ ಹೇಳಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಸೇರಿದಂತೆ ಒಟ್ಟು 74 ಮಂದಿ ಇದ್ದಾರೆ. ಕಳೆದ ಜುಲೈ 29ರಂದು ಕಾಲೇಜಿಗೆ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಅನಿರೀಕ್ಷಿತ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೆ ನೇರವಾಗಿ ತರಗತಿಗಳಿಗೆ ಬಂದು ಪಾಠ ಮಾಡಿದ್ದಾರೆ. ಈ ಬಗ್ಗೆ ವಿವರಣೆ ನೀಡಲು ಆ ದಿನ ಪ್ರಾಂಶುಪಾಲರು ರಜೆ ಇದ್ದುದ್ದರಿಂದ ಗೊಂದಲ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ, ಈಗ ಪರಿಸ್ಥಿತಿ ಸುಧಾರಣೆ ಆಗುತ್ತಿರುವಾಗ ಸಾಮೂಹಿಕ ವರ್ಗಾವಣೆ ಅನಗತ್ಯವೆಂದು ಪ್ರತಿಪಾದಿಸಿದ್ದಾರೆ.
ಕಾಲೇಜಿಗೆ ಸಂಬಂಧವಿಲ್ಲದ ಕೆಲವರು ತಮ್ಮ ನಾಯಕತ್ವ ವೃದ್ಧಿಗೆ ಅವಕಾಶ ಸಿಗುತ್ತಿಲ್ಲವೆಂಬ ಕಾರಣಕ್ಕೆ ಕಾಲೇಜಿನ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಅವರಿಗೆ ಬೇಕಾದ ಉಪನ್ಯಾಸಕರನ್ನು ಕಾಲೇಜಿಗೆ ವರ್ಗಾವಣೆ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಾಲೇಜಿನ ಹಿತದೃಷ್ಟಿಯಿಂದ ಈಗ ಪ್ರತಿವಾರ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ ಸಮಾವೇಶ ನಡೆಸಿ ಎಲ್ಲ ಉಪನ್ಯಾಸಕರ ಸಮಕ್ಷಮದಲ್ಲಿ ಕುಂದು ಕೊರತೆಗಳ ವಿಚಾರಣೆ ಹಾಗೂ ಅದಕ್ಕೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ.
ಇಲ್ಲಸಲ್ಲದ ಅಪಪ್ರಚಾರ: ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕ್ಕಾಗಿ ವಿಶೇಷ ಕಾರ್ಯಕ್ರಮಗಳು ಜಾರಿಯಲ್ಲಿವೆ. 2013-14ನೇ ಸಾಲಿನಲ್ಲಿ ಕಾಲೇಜಿನಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಕಮ್ಯೂನಿಟಿ ಕಾಲೇಜನ್ನು ಪ್ರಾರಂಭಿಸಲು ಯೋಜನೆ ಸಿದ್ಧಪಡಿಸಿ ಇದಕ್ಕೆ ಬೇಕಾದ ಆರ್ಥಿಕ ಮತ್ತು ಇನ್ನಿತರ ಮೂಲ ಸೌಕರ್ಯಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕೆಲವರು ಅಸೂಯೆಯಿಂದ ಕಾಲೇಜಿನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಸರ್ಕಾರವೇ ನಮ್ಮ ಕಾಲೇಜಿನಲ್ಲಿ ಕಮ್ಯೂನಿಟಿ ಕಾಲೇಜು ಸ್ಥಾಪನೆಗೆ ಆಸಕ್ತಿ ತೋರಿರುವುದರಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಇದರಿಂದ ಜಿಲ್ಲೆಯ ಯಾವುದೇ ಭಾಗದ ವಿದ್ಯಾರ್ಥಿ ಪಿಯುಸಿ ನಂತರ ಮುಂದೆ ಯಾವ ಕೋರ್ಸ್ ತೆಗೆದುಕೊಂಡರೆ ಉಪಯೋಗವಾಗುತ್ತದೆ ಎಂದು ನಿರ್ಧರಿಸಲು ಅವಕಾಶವಿದೆ. ಇದಕ್ಕಾಗಿ ಪ್ರವಾಸೋದ್ಯಮ ಮತ್ತು ಕೈಗಾರಿಕೆ ಹಾಗೂ ಸಗಟು ವ್ಯಾಪಾರ ಕ್ಷೇತ್ರದ ಬಗ್ಗೆ ತರಬೇತಿ ನೀಡುವ ಯೋಜನೆ ರೂಪಿಸಿದ್ದು ಇದರಿಂದ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಅನುಕೂಲವಾಗುತ್ತದೆ. ಈ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತಿರುವ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದರಿಂದ ಮುಂದೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಕಾಲೇಜಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲವೆಂಬುದು ಸರಿಯಲ್ಲ. ದೆಹಲಿಯ ನ್ಯಾಕ್ ಸಮಿತಿ ಕಾಲೇಜಿನ ಗ್ರೇಡ್ ಹೆಚ್ಚಳಕ್ಕೆ ಸಂಬಂಧಿಸಿದ ವರದಿಯಲ್ಲಿ ರಾಜ್ಯದ 12 ಸರ್ಕಾರಿ ಕಾಲೇಜುಗಳ ಪೈಕಿ ನಮ್ಮ ಕಾಲೇಜಿಗೆ ಮೊದಲ ಸ್ಥಾನವಲ್ಲದೆ 2.80 ಅಂಕಗಳನ್ನು ನೀಡಿದೆ. ಉದ್ಯೋಗ ಮೇಳ, ಸರ್ಕಾರದ ಹೊಸ ಹೆಜ್ಜೆ ಕಾರ್ಯಕ್ರಮದ ಅನುಷ್ಠಾನ, 1968ರಿಂದಲೂ ಕಾಲೇಜಿನಲ್ಲಿ ಎನ್.ಸಿ.ಸಿ ಘಟಕವಿದ್ದರೂ ವಿದ್ಯಾರ್ಥಿಗಳು ಯಾರೂ ಡಾರ್ಜಲಿಂಗ್ಗೆ ಹೋಗಿ ಸಾಧನೆ ಮಾಡಿ ಗೌರವ ಸಂಪಾದಿಸಿರಲಿಲ್ಲ. ಈಗಿನ ಅಧಿಕಾರಿಗಳ ಪರಿಶ್ರಮದಿಂದಾಗಿ ಕಾಮಾಂಡಹಳ್ಳಿಯ ಮಹೇಶ್ ಬಾಬು ಮತ್ತು ಕ್ಯಾಲನೂರಿನ ನಾಗೇಶ್ ಪ್ರಶಸ್ತಿ ಪಡೆದಿದ್ದಾರೆ. ಹೀಗಿರುವಾಗ ಈ ವರ್ಗಾವಣೆ ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಜು.29ರಂದು ಉಪನ್ಯಾಸಕರು ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೆ ನೇರವಾಗಿ ತರಗತಿಗಳಿಗೆ ಬಂದು ಪಾಠ ಮಾಡಿರುವುದು ತಪ್ಪು. ಉಪನ್ಯಾಸಕರಿಗೂ ತಮ್ಮ ತಪ್ಪಿನ ಅರಿವಾಗಿದೆ. ಬಯೋವುಟ್ರಿಕ್ ಬರುವುದರಿಂದ ಎಲ್ಲವೂ ಸರಿ ಹೋಗುತ್ತದೆ. ಪ್ರತಿ ವಾರ ವಿದ್ಯಾರ್ಥಿಗಳ ಸಮಾವೇಶ ನಡೆಸುವುದರಿಂದ ವಿದ್ಯಾರ್ಥಿಗಳು ಮತ್ತು ಬೋಧಕರ ನಡುವೆ ಇರುವ ಕಂದಕ ನಿವಾರಣೆ ಆಗುತ್ತದೆ. ಯಾರು ಸರಿಯಾಗಿ ಪಾಠ ಮಾಡುವುದಿಲ್ಲವೋ, ಕೆಲಸಕ್ಕೆ ಸರಿಯಾಗಿ ಹಾಜರಾಗುವುದಿಲ್ಲವೋ ಅಂತಹವರ ವಿರುದ್ಧ ನೇರ ಆರೋಪ ಮಾಡುವುದಕ್ಕೆ ಅವಕಾಶವಿರುವುದರಿಂದ ಕಾಲೇಜಿನ ಪ್ರಗತಿಗೆ ಅನುಕೂಲವಾಗುತ್ತದೆ ಎಂದಿರುವ ವಿದ್ಯಾರ್ಥಿಗಳು ಸಾಮೂಹಿಕ ವರ್ಗಾವಣೆಯ ವಿಚಾರವಾಗಿ ಹಬ್ಬಿರುವ ಗುಮ್ಮ ನಿವಾರಣೆ ಮಾಡಿ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

