ಕೋಲಾರ

ಸುಧಾಕರ್ ಬೆಂಬಲಿಗರು, ಕಾಂಗ್ರೆಸ್ ಸದಸ್ಯರ ಹೊಯ್ ಕೈ

Published On :

ಕ.ಪ್ರ.ವಾರ್ತೆ ಚಿಂತಾಮಣಿ ಆ. 22
ಜೋಗ್ಯಾನಹಳ್ಳಿ ಗ್ರಾಮದ ಸರ್ವೆ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳ ಸಮಕ್ಷಮದಲ್ಲೇ ಮಾಜಿ ಶಾಸಕ ಬೆಂಬಲಿಗರಿಗೂ ಕಾಂಗ್ರೆಸ್ಸಿನ ಜಿಲ್ಲಾ ಪಂಚಾಯ್ತಿ ಸದಸ್ಯರಿಗೂ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ನಡೆದಿದೆ.
ತಾಲೂಕಿನ ಮುರುಗಮಲ್ಲ ಹೋಬಳಿ ಜೋಗ್ಯಾನಹಳ್ಳಿ ಗ್ರಾಮದ ಗ್ರಾಮಠಾಣೆ ಜಮೀನನ್ನು ಕಾಂಗ್ರೆಸ್ಸಿನ ಜಿಲ್ಲಾ ಪಂಚಾಯ್ತಿ ಸದಸ್ಯ ಷೇಕ್‌ಮೌಲಾರವರ ತಮ್ಮ ಷೇಕ್‌ಮೊಹಮದ್ ಎಂಬಾತನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದಾಗಿ ಕಳೆದ ಹಲವು ದಿನಗಳ ಹಿಂದೆ ಮಾಜಿ ಶಾಸಕ ಸುಧಾಕರ್ ಬೆಂಬಲಿಗ ಶಿವಾರೆಡ್ಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್ ಹಾಗೂ ರಾಜು ಸಿಬ್ಬಂದಿ ವರ್ಗ ಗುರುವಾರ ತಾಲೂಕಿನ ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸಂಬಂಧಪಟ್ಟ ಪರ-ವಿರೋಧ ಕಡತಗಳನ್ನು ಪರಿಶೀಲಿಸಿ ನಂತರ ವಾಸ್ತು ಸ್ಥಿತಿಯನ್ನು ತಿಳಿಯಲು 24ರ ಗ್ರಾಮಠಾಣಾ ಒತ್ತುವರಿ ಸ್ಥಳ ವೀಕ್ಷಿಸಲು ಬಂದಿದ್ದರು.
ಆರೋಪ ಪ್ರತ್ಯಾರೋಪ: ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಓ ಸುಂದರಪ್ಪ ಹಾಗೂ ಕಾರ್ಯದರ್ಶಿ ವೆಂಕಟರವಣಪ್ಪರವರ ಜೊತೆ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿ ಚರ್ಚಿಸುತ್ತಿದ್ದರು. ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯ್ತಿ ಸದಸ್ಯ ಷೇಕ್‌ಮೌಲಾ ಅಧಿಕಾರಿಗಳ ಮುಂದೆ ಸರ್ವೆ ನಂ.24 ರ 15 ಎಕರೆ 5 ಕುಂಟೆ ಜಮೀನಿನಲ್ಲಿ ನಮ್ಮ ಬಾಬತ್ತು 10 ಎಕರೆ 22 ಕುಂಟೆ ದಾಖಲೆಗಳ ಸಮೇತ ಇರುವುದಾಗಿ ಹೆಚ್ಚುವರಿಯಾಗಿದ್ದರೆ ಅದನ್ನು ಸರ್ವೆ ಮಾಡಿ ಕಾನೂನು ಪ್ರಕಾರ ಉಳಿಕೆ ಭೂಮಿಯನ್ನು ಬಿಟ್ಟುಕೊಡುವುದಾಗಿ ಹೇಳುತ್ತಿರುವಾಗಲೇ ಮಾಜಿ ಶಾಸಕ ಬೆಂಬಲಿಗರಾದ ಜೋಗ್ಯಾನಹಳ್ಳಿ ಶಿವಾರೆಡ್ಡಿ ಹಾಗೂ ನಂಜುಂಡರೆಡ್ಡಿ, ವಲಸೆ ಬಂದು ಜಮೀನನ್ನು ಒತ್ತುವರಿ ಮಾಡಿಕೊಂಡು ಬೆರಳೆಣಿಕೆಯ ಮಂದಿಯನ್ನು ಪ್ರೇರೇಪಿಸಿ ಗ್ರಾಮದಲ್ಲಿ ರಾಜಕೀಯ ಮಾಡುತ್ತಿರುವುದಾಗಿ ತಿರುಗಿ ಬಿದ್ದರು.
ಸ್ಥಳದಲ್ಲೇ ಇದ್ದ ಷೇಕ್ ಮೌಲಾ ಬೆಂಬಲಿಗರಾದ ನಾಗಪ್ಪ ಇತರರು ರಾಜಕೀಯ ದುರುದ್ದೇಶದಿಂದ ಇಲ್ಲಸಲ್ಲದ ದಾಖಲೆಗಳನ್ನು ಸೃಷ್ಟಿಮಾಡಿ ಹಾಗೂ ಹಣಕ್ಕಾಗಿ ಪೀಡಿಸುತ್ತಿರುವ ಮಾಜಿ ಶಾಸಕರ ಬೆಂಬಲಿಗ ಶಿವಾರೆಡ್ಡಿ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇದರಿಂದ 2 ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಲು ಮುಂದಾದಾಗ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಶಾಂತಿ ಕಾಪಾಡಿ ಸರ್ಕಾರಿ ಕೆಲಸಕ್ಕೆ ಸಹಕರಿಸಲು ಕೋರಿದರು.  ಮುಖಂಡರಾದ ಸತ್ಯನಾರಾಯಣ್, ವೀರಭದ್ರಪ್ಪ,ಶ್ರೀರಾಮಪ್ಪ, ನಾರಾಯಣಸ್ವಾಮಿ,ಲಕ್ಷ್ಮಿರೆಡ್ಡಿ, ಮುನಿರೆಡ್ಡಿನಾಯಕ್ ಇತರರು ಉಪಸ್ಥಿತರಿದ್ದರು.

ಜೋಗ್ಯಾನಹಳ್ಳಿ ಶಿವಾರೆಡ್ಡಿ ಓಡಿಸಿದ ಜೆಡಿಎಸ್, ಕಾಂಗ್ರೆಸ್ ಮುಖಂಡರು
ಚಿಂತಾಮಣಿ:
ಜೋಗ್ಯಾನಹಳ್ಳಿ ಗ್ರಾಮದ ಸರ್ವೆ ನಂ.24 ರ ಗ್ರಾಮಠಾಣಾ ಒತ್ತುವರಿ ತೆರವುಗೊಳಿಸಲು ದೂರು ನೀಡಿದ್ದ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಶಿವಾರೆಡ್ಡಿಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಸೇರಿ ಓಡಿಸಿದರು.
ತಾಲೂಕಿನ ಮುರುಗಮಲ್ಲ ಹೋಬಳಿ ಜೋಗ್ಯಾನಹಳ್ಳಿ ಗ್ರಾಮದ ಗ್ರಾಮಠಾಣೆಯ 4 ಎಕರೆ 18 ಕುಂಟೆ ಜಮೀನನ್ನು ಕಾಂಗ್ರೆಸ್ಸಿನ ಜಿಲ್ಲಾ ಪಂಚಾಯ್ತಿ ಸದಸ್ಯ ಷೇಕ್ ಮೌಲಾ ರವರ ತಮ್ಮ ಷೇಕ್‌ಮೊಹಮದ್ ಅಕ್ರಮ ಒತ್ತುವರಿ ಮಾಡಿಕೊಂಡು ಸರ್ಕಾರಕ್ಕೆ ಅನ್ಯಾಯ ಮಾಡಿರುವುದಾಗಿ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಜೋಗ್ಯಾನಹಳ್ಳಿ ಶಿವಾರೆಡ್ಡಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಲು ಆಗಮಿಸಿದ ಅಧಿಕಾರಿಗಳಿಗೆ ಶಿವಾರೆಡ್ಡಿ ತಪ್ಪು ಮಾಹಿತಿಯನ್ನು ನೀಡಿದ್ದು, ಗ್ರಾಮದಲ್ಲಿ ಹಲವರನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿದ್ದಾರೆಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಹಲವು ಮುಖಂಡರು ಆರೋಪಿಸಿ ಶಿವಾರೆಡ್ಡಿ ಮೇಲೆ ಹಲ್ಲೆ ಮಾಡಲು ಮುಂದಾಗಿ ಓಡಿಸಿದರು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ, ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂದು ಜಾಗ ಖಾಲಿ ಮಾಡಿದರು. ಈಗ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡ ಪರಿಸ್ಥಿತಿ ನಿರ್ಮಾಣಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.