ಕೋಲಾರ

ಬಿಗಡಾಯಿಸಿದ ಗಡಿ ಸಂಚಾರ ಸಮಸ್ಯೆ

Published On :

ವಿಶೇಷ ವರದಿ
ಕ.ಪ್ರ.ವಾರ್ತೆ ,  ಕೆಜಿಎಫ್ ,  ಆ.23

ಆಂಧ್ರಪ್ರದೇಶದ ಪ್ರತ್ಯೇಕ ತೆಲಂಗಾಣ ರಾಜ್ಯ ವಿಭಜನೆ ಕುರಿತು ನಡೆಯುತ್ತಿರುವ ಹೋರಾಟಗಳು ಹಾಗೂ ಪ್ರತಿಭಟನೆಗಳು ಕೆಜಿಎಫ್ ಗಡಿಭಾಗದ ಮೂರು ರಾಜ್ಯಗಳ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಕೆಜಿಎಫ್ ಕ್ಷೇತ್ರದ ಗಡಿಭಾಗ ನೆರೆ ರಾಜ್ಯಗಳಾದ ಆಂಧ್ರಪ್ರದೇಶದ ಪಲಮನೇರು, ಚಿತ್ತೂರು, ವಿ. ಕೋಟ, ಕುಪ್ಪಂ, ರಾಮಕುಪ್ಪಂ, ಶಾಂತಿಪುರಂ ಮತ್ತು ತಮಿಳುನಾಡಿನ ವೇಪನಪಲ್ಲಿ, ಪಚ್ಚೂರು, ವೇಲೂರು, ಗುಡಿಯಾತಂ, ಪೇರ್ನಾಂಭಟ್, ಕೃಷ್ಣಗಿರಿ ಮುಂತಾದ ಪ್ರದೇಶಗಳಿಂದ ಬರುವ ಬಸ್ ಹಾಗೂ ಇತರೇ ವಾಹನಗಳು ವಿ. ಕೋಟ ಮತ್ತು ಕುಪ್ಪಂ ಮಾರ್ಗವಾಗಿ ಕೆಜಿಎಫ್‌ನೊಳಗೆ ಪ್ರವೇಶಿಸಬೇಕು.
ಮುಷ್ಕರದಿಂದ ಅಚಡಣೆ: ಆದರೆ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಮುಷ್ಕರದಿಂದ ಯಾವುದೇ ವಾಹನಗಲಾಗಲೀ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ನೆರೆ ರಾಜ್ಯಗಳಿಂದ ಕೆಜಿಎಫ್‌ಗೆ ಮತ್ತು ಕೆಜಿಎಫ್‌ನಿಂದ ಆಂಧ್ರ-ತಮಿಳುನಾಡು ಮುಂತಾದ ಪ್ರದೇಶಗಳಿಗೆ ಪ್ರಯಾಣಿಸುವ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಮಹಿಳೆಯರು, ಉದ್ಯೋಗಸ್ಥರು, ರೈತರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ.
ಕೆಜಿಎಫ್‌ನಿಂದ ಗಡಿ ಪ್ರದೇಶದ ಮೂಲಕ ಆಂಧ್ರ ಮತ್ತು ತಮಿಳುನಾಡಿಗೆ ಹೋಗುತ್ತಿದ್ದ ಬಸ್‌ಗಳು ಇದೀಗ ಕೃಷ್ಣಗಿರಿ ಮೂಲಕ ವೇಲುರು ಚೆನ್ನೈ, ಸೇಲಂ, ಚಿತ್ತೂರು ಪಲಮನೇರು ಮುಂತಾದ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಇದರಿಂದ 25ರಿಂದ 35 ಕಿ.ಮೀ ಹೆಚ್ಚಿಗೆ ಆಗುತ್ತಿದ್ದು, ಬಸ್ ಪ್ರಯಾಣ ದರ ಸಾಮಾನ್ಯ ಬೆಲೆಗಿಂತ 30ರಿಂದ 50 ಹೆಚ್ಚಿಗೆ ನೀಡುತ್ತಿರುವುದಲ್ಲಿದೆ. 2ರಿಂದ 3 ಗಂಟೆಗಳ ಸಮಯ ವ್ಯರ್ಥವಾಗುತ್ತಿದೆ ಎಂಬುದು ವ್ಯಾಪಾರಸ್ಥರ, ರೈತರ ಮತ್ತು ಕೆಲಸ ಕಾರ್ಯಗಳಿಗೆ ಹೋಗುವ ಪ್ರಯಾಣಿಕರ ಅಳಲಾಗಿದೆ.
ವಿದ್ಯಾರ್ಥಿಗಳಿಗೆ ಸಮಸ್ಯೆ: ವಿ. ಕೋಟ ಮತ್ತು ಕುಪ್ಪಂನ ಬೂದಗೂರು ಗಡಿ ಪ್ರದೇಶಗಳಿಂದ ಕರ್ನಾಟಕ ರಾಜ್ಯದ ಗಡಿ ತಲುಪಲು 2ರಿಂದ 3 ಕಿ.ಮೀ ಅಂತರವಿದ್ದು ಪ್ರತಿನಿತ್ಯ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಪ್ರತಿ ದಿನ ರೈತರು ತರಕಾರಿಗಳನ್ನು ಮಾರುಕಟ್ಟೆಗೆ ಹಾಕಲು, ಕೆಲಸ ಕಾರ್ಯಗಳಿಗೆ ಹೋಗುವ ಯುವಕ-ಯುವತಿಯರು, ಮಹಿಳೆಯರು, ವೃದ್ಧರು ನಡೆದುಕೊಂಡು,  ಆಟೋಗಳು ಮತ್ತು ಇತರೇ ವಾಹನಗಲ್ಲಿ ಹೆಚ್ಚಿನ ಹಣವನ್ನು ನೀಡಿ ಪ್ರಯಾಣಿಸಬೇಕಿದೆ. ಈ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಬಂದು ಸೇರಲು, ಕೆಲಸ ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಸಮಸ್ಯೆಗಳ ಸುರಿಮಳೆ: ಪ್ರತ್ಯೇಕ ತೆಲಂಗಾಣ ರಾಜ್ಯದ ವಿರೋಧ ವ್ಯಕ್ತಪಡಿಸಿ ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಮುಷ್ಕರದಿಂದ ಜನ ಸಂಪರ್ಕ ಕಡಿಮೆಯಾದ ಕಾರಣ ಕೆಜಿಎಫ್ ಕ್ಷೇತ್ರದ ಬಟ್ಟೆ ಅಂಗಡಿಗಳು, ಹೋಟೆಲ್‌ಗಳು, ಚಿನ್ನದ ಅಂಗಡಿ, ಖಾಸಗಿ ಆಸ್ಪತ್ರೆಗಳು, ಮಾರುಕಟ್ಟೆ ಸೇರಿದಂತೆ ಇತರೇ ವ್ಯಾಪಾರ ವಹಿವಾಟುಗಳು, ಬಸ್ ನಿಲ್ದಾಣಗಳಲ್ಲಿ, ಬ್ಯಾಂಕ್‌ಗಳು, ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿವೆ. ಇತರೇ ಕೆಲಸ ಕಾರ್ಯಗಳಿಗೆ ಹೋಗಿ ರಾತ್ರಿ ವೇಳೆ ತಡವಾಗಿ ಬಸ್ ನಿಲ್ದಾಣಗಳಿಗೆ ಬರುವ ಸಾರ್ವಜನಿಕರು ತಮ್ಮತಮ್ಮ ಊರುಗಳಿಗೆ ಹೋಗಲು ಬಸ್‌ಗಳಿಲ್ಲದೆ ಕೆಲವೊಮ್ಮೆ ವಸತಿ ಗೃಹ, ಸಂಬಂಧಿಕರ ಮನೆ, ಬಸ್ ನಿಲ್ದಾಣಗಳಲ್ಲಿ ಮಲಗಿದ್ದು ಬೆಳಗ್ಗೆ ಎದ್ದು ಹೋಗುವ ಸಂಭವಗಳು ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಕೇಂದ್ರ ಸರ್ಕಾರ ಆಂಧ್ರಪ್ರದೇಶದ ಸಮಸ್ಯೆಯನ್ನು ಇತ್ಯರ್ಥ ಮಾಡಿದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಉದ್ಯೋಗಸ್ಥರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಿದಂತೆ ಆಗುತ್ತದೆ ಎಂಬುದು ಕೆಜಿಎಫ್ ಕ್ಷೇತ್ರದ ಲಕ್ಷಾಂತರ ಜನರ ಬೇಡಿಕೆಯಾಗಿದೆ ಎಂದರೆ ತಪ್ಪಾಗಲಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.