ಹದಗೆಟ್ಟ ಕೆರೆ ಏರಿ, ವಾಹನ ಸಂಚಾರ ಹೇರಾಪೇರಿ
ಗುಡಿಬಂಡೆ: ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆಯ ಏರಿ ಮೇಲೆ ಹಾದು ಹೋಗುವ ರಸ್ತೆ ಹಲವೆಡೆ ತೀವ್ರ ದುಸ್ಥಿತಿ ತಲುಪಿದೆ. ಮುಖ್ಯವಾಗಿ ಕೆರೆ ಕೋಡಿ ನೀರು ಹರಿಯುವ ಸುಮಾರು 1 ಕಿ.ಮಿ.ನಷ್ಟು ವಿಸ್ತಾರದ ರಸ್ತೆ ಹಳಕೊಳ್ಳಗಳಿಂದ ಕೂಡಿದ್ದು, ವಾಹನ ಸಂಚಾರರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಗೆ ಮುಂಚೆ ಸದರಿ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಕೋಡಿ ನೀರು ಹರಿಯುವ ಭಾಗದ ರಸ್ತೆಗೆ ಕಾಂಕ್ರಿಟ್ ಕಾಮಗಾರಿ ನಡೆದಿಲ್ಲ. ಇದರಿಂದಾಗಿ ರಸ್ತೆ ತುಂಬಾ ಹೊಂಡಗಳಾಗಿದ್ದು ವಾಹನ ಸವಾರರು ತಮ್ಮ ಪ್ರಾಣವನ್ನು ಅಂಗೈಲಿಟ್ಟುಕೊಂಡು ಓಡಾಡುವಂತಾಗಿದೆ. ಮಳೆಗಾಲವಾದ್ದರಿಂದ ಏರಿಯ ಎರಡು ಬದಿ ಯಥೇಚ್ಚವಾಗಿ ಗಿಡಗಂಟೆಗಳು ಬೆಳದು ನಿಂತು ಅಪಘಾತಗಳಿಗೆ ಎಡೆಮಾಡಿಕೊಡಲು ಸಜ್ಜಾಗಿ ನಿಂತಿವೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಿಂದ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಏಕೈಕ ಜಿಲ್ಲಾ ಮುಖ್ಯ ರಸ್ತೆ ಇದಾಗಿದ್ದು, ಪಟ್ಟಣಕ್ಕೆ ಪ್ರತಿನಿತ್ಯ ನೂರಾರು ವಾಹನಗಳು ಹಾಗೂ ಪ್ರಯಾಣಿಕರು ಸದರಿ ರಸ್ತೆ ಮೂಲಕ ಪ್ರಯಾಣಿಸುತ್ತಾರೆ. ಅಲ್ಲದೇ ಅನೇಕ ಇಲಾಖೆಗಳ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ತಮ್ಮ ವಾಹನಗಳ ಮೂಲಕ ಇದೇ ರಸ್ತೆಯ ಮೇಲೆ ತೆರಳುತ್ತಾರೆ. ಆದರೆ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳದೇ ಇರುವುದು ಪ್ರಯಾಣಿಕರ ಅಸಮಧಾನಕ್ಕೆ ಕಾರಣವಾಗಿದೆ.
ನಿದ್ದೆಗೆ ಜಾರಿದ ಚಾಲಕ: ಮರಕ್ಕೆ ಕ್ವಾಲೀಸ್ ಡಿಕ್ಕಿಯಾಗಿ ಒಬ್ಬರ ಸಾವು
ಚಿಂತಾಮಣಿ: ಕ್ವಾಲೀಸ್ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದ ಕಾರಣ ವ್ಯಕ್ತಿಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿ 6 ಕ್ಕೂ ಹೆಚ್ಚು ಜನ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಭಾನುವಾರ ಬೆಳಗಿನ ಜಾವ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಐಮರೆಡ್ಡಿಹಳ್ಳಿ ಗೇಟ್ ಬಳಿ ನಡೆದಿದೆ.
ತಾಲ್ಲೂಕಿನ ಚಿಂತಾಮಣಿ-ಮದನಪಲ್ಲಿ ರಸ್ತೆಯ ಮಾರ್ಗವಾಗಿ ಆಂಧ್ರಪ್ರದೇಶದ ಬದ್ವೇಲ್ನಿಂದ ಬೆಂಗಳೂರಿಗೆ ಕಾರ್ಯನಿಮಿತ್ತ ಹೊರಡಿದ್ದ ಕ್ವಾಲೀಸ್ ವಾಹನ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಓಬಯ್ಯ(45) ಎಂಬ ವ್ಯಕ್ತಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಪೈಕಿ ಗಂಭೀರ ಗಾಯಗಳಾದ ಕುಮಾರಿ ಮತ್ತು ವಿಜಯ್ಕುಮಾರ್ ಎಂಬವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ವಾಹನಅತಿವೇಗ ಮತ್ತು ಆಜಾಗರೂಕತೆಯಿಂದ ಡಿಕ್ಕಿ ಹೊಡೆದ ಕಾರಣಕ್ಕಾಗಿ ವಾಹನವು ಬೆಂಕಿ ಜ್ವಾಲೆಗಳು ಹತ್ತಿ ಉರಿಯುತ್ತಿತ್ತು. ಇದನ್ನು ಗ್ರಾಮಸ್ಥರ ನೆರವಿನೊಂದಿಗೆ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಸ್ಥಳ ಪರಿಶೀಲಿಸಿ ವಾಹನವನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಛಾಯಾಗ್ರಾಹಕಿ ಮೇಲೆ ಗ್ಯಾಂಗ್ರೇಪ್ ಖಂಡನೆ
ಕೋಲಾರ: ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಕಾಮುಕರು ಅತ್ಯಾಚಾರವೆಸಗಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಚಾರ. ಕೂಡಲೇ ಬಂಧಿಸಿರುವ ಐವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಅತ್ಯಾಚಾರಿ ಆರೋಪಿಗಳನ್ನು ಮಟ್ಟಹಾಕಲು ಪ್ರಬಲ ಕಾಯ್ದೆ ಜಾರಿಗೆ ತರಬೇಕೆಂದು ಕನಾಂಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಟಿ. ವಿಜಯಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಜಯಕುಮಾರ್ ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಾನಗರಗಳಲ್ಲಿ ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯಬೀಳುವಂತಹ ಪರಿಸ್ಥಿತಿ ಉಂಟಾಗಿದೆ. ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದಿರುವ ಅತ್ಯಾಚಾರ ನಿಜಕ್ಕೂ ಆತಂಕಕಾರಿಯಾಗಿದೆ. ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿರುವ ಪತ್ರಕರ್ತರ ಮೇಲೂ ಅತ್ಯಾಚಾರ ನಡೆಸುತ್ತಿದ್ದಾರೆಂದರೆ ಇನ್ನೂ ಸಾಮಾನ್ಯ ಜನರಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಇದೆ ಎಂದು ಪ್ರಶ್ನಿಸಿದರು. ಆದ್ದರಿಂದ ಈ ಕೂಡಲೇ ಕೇಂದ್ರ ಸರ್ಕಾರವು ಅತ್ಯಾಚಾರ ತಡೆಯಲು ಪ್ರಬಲವಾದ ಕಾಯ್ದೆಯನ್ನು ಜಾರಿಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇಂದು 'ನೂರು ದಿನ ನೂರಾರು ನಿರ್ಣಯ' ಹೊತ್ತಿಗೆ ಬಿಡುಗಡೆ
ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಆ.26 ರಂದು ಬೆಳಿಗ್ಗೆ 12 ಗಂಟೆಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಿದ್ದು ಜಿಲ್ಲೆಯಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳು, ಅನುದಾನ ಬಿಡುಗಡೆ ಮತ್ತು ಖರ್ಚು ಸೇರಿದಂತೆ ಪ್ರಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 12.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರದ ನೂರು ದಿನಗಳ ಸಾಧನೆಗೆ ಸಂಬಂಧಪಟ್ಟಂತೆ ನೂರು ದಿನ ನೂರಾರು ನಿರ್ಣಯ ಎನ್ನುವ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಿದ್ದಾರೆ.
26 ರಂದು ಕೆಡಿಪಿ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆ.26 ರಂದು ಬೆಳಗ್ಗೆ 11 ಗಂಟೆಗೆ ಮಾಸಿಕ ಕೆಡಿಪಿ ಸಭೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ವಹಿಸಲಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಶಿಬಿರ ಉದ್ಘಾಟನೆ
ಕೆಜಿಎಫ್: ಮಾರಿಕುಪ್ಪಂನ ಗಿಲ್ಬರ್ಟ್ಸ್ ಬಡಾವಣೆಯಲ್ಲಿ ಪೂಂಗೊಡಿ ಸೇವಾ ಸಂಘದ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಪೊಲೀಸ್ ವೃತ್ತ ನಿರೀಕ್ಷಕ ಪುಟ್ಟಮಾದಯ್ಯ ಉದ್ಘಾಟಿಸಿದರು. ಈ ಆರೋಗ್ಯ ಶಿಬಿರದಲ್ಲಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯರ ತಂಡ ಸುಮಾರು 300ಕ್ಕೂ ಹೆಚ್ಚು ನಾಗರಿಕರಿಗೆ ವಿವಿಧ ರೀತಿಯ ಕಾಯಿಲೆಗಳನ್ನು ಪರೀಕ್ಷಿಸಿ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಿದರು.
ಯಕ್ಷಗಾನದಿಂದ ಆರೋಗ್ಯದ ಅರಿವು
ಕೋಲಾರ: ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದ ಜಾನಪದ, ಯಕ್ಷಗಾನ ಮತ್ತಿತರ ದೇಶಿ ಕಲೆಗಳನ್ನು ಉಳಿಸಿ ಬೆಳೆಸಬೇಕೆಂದು ಸಬರಮತಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ತಾಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆಯಲ್ಲಿ ಭಾರತ ಸರ್ಕಾರದ ಸಂಗೀತ ನಾಟಕ ವಿಭಾಗ, ಉಡುಪಿ ಜಿಲ್ಲೆಯ ಕರ್ನಾಟಕ ದರ್ಶಿನಿ ತಂಡ, ಜನ್ನಘಟ್ಟದ ಕರ್ನಾಟಕ ಜಾನಪದ ಕಲಾವಿದರ ಸಂಘ, ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆರೋಗ್ಯ, ಶಿಕ್ಷಣದ ಕುರಿತು ಅರಿವು ಮೂಡಿಸಲು ಏರ್ಪಡಿಸಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಲೆಯ ಮೂಲಕ ಜನತೆಯಲ್ಲಿ ಸಾಮಾಜಿಕ ಅರಿವು ಮೂಡಿಸುವ ಯತ್ನ ಸ್ವಾಗತಾರ್ಹ ಎಂದ ಅವರು, ಇದರಿಂದಾಗಿ ನಮ್ಮ ಕಲೆ, ಸಂಸ್ಕೃತಿ ಬೆಳೆಸಲು ಸಹಾಯವಾಗಲಿದೆ ಎಂದರು. ಸ್ವಾಗತಿಸಿದ ಶಾಲಾ ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಚೌಡರೆಡ್ಡಿ, ಗ್ರಾಮೀಣ ಶಾಲೆಗಳಲ್ಲಿ ಇಂತಹ ಕಲೆಗಳ ಪ್ರದರ್ಶನದ ಮೂಲಕ ಮರೆಯಾಗುತ್ತಿರುವ ನಮ್ಮ ಕಲೆ, ಸಂಸ್ಕೃತಿಯನ್ನು ಜೀವಂತವಾಗಿಡಬಹುದು ಎಂದರು. ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ, ಕಲಾವಿದರನ್ನು ಪರಿಚಯಿಸಿ, ಕರಾವಳಿಯ ಗಂಡು ಕಲೆಯಾದ ಯಕ್ಷಗಾನವನ್ನು ನಮ್ಮ ಬಯಲು ಸೀಮೆಯ ಮಕ್ಕಳು ನೋಡುವ ಭಾಗ್ಯ ಸಿಕ್ಕಿದೆ ಎಂದರು. ಹಿರಿಯ ಶಿಕ್ಷಕ ಬಿ.ವೆಂಕಟೇಶ್, ಉಡುಪಿ ಜಿಲ್ಲೆಯ ಕರ್ನಾಟಕ ದರ್ಶಿನಿ ತಂಡದ ನಾಯಕ ಗಣೇಶ್ ನಾಯಕ್, ವೇಣುಗೋಪಾಲ್, ನಾಗರಾಜ್ ಇದ್ದು, ಸುಮಾರು 2 ಗಂಟೆಗಳ ಕಾಲ ಪ್ರದರ್ಶನ ನೀಡಿ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯದ ಅರಿವು ಮೂಡಿಸುವುದರ ಜತೆಗೆ ಉತ್ತಮ ರಂಜನೆ ನೀಡಿದರು. ಶಿಕ್ಷಕಪಿ. ಬಾಲಕೃಷ್ಣಪ್ಪ ಸ್ವಾಗತಿಸಿ, ನಿರೂಪಿಸಿದರು.
108 ದಂಪತಿಗಳಿಂದ ಶಿಲಾನ್ಯಾಸ ಪೂಜೆ
ಮುಳಬಾಗಲು: ತಾಲೂಕಿನ ನಂಗಲಿ ವೆಂಕಟಾಪುರ ಗ್ರಾಮದ ಸಮೀಪದ ಶ್ರೀ ಕಲ್ಯಾಣ ವೆಂಕಟೇಶ್ವರ ಹೊಯ್ಸಳ ಆರ್ಟ್ ಫೌಂಡೇಶನ್ ವತಿಯಿಂದ ನಿರ್ಮಾಣವಾಗುತ್ತಿರುವ ಹೊಯ್ಸಳ ಶೈಲಿಯ ಕಲ್ಯಾಣ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ 108 ದಂಪತಿಗಳು 108 ಶಿಲೆಗಳಿಗೆ ಪೂಜೆ ಸಲ್ಲಿಸಿ ಶನಿವಾರ ಶಿಲಾನ್ಯಾಸ ನೆರವೇರಿಸಿದರು. ಇದಕ್ಕೂ ಮುನ್ನ ದಂಪತಿಗಳು ದೇವರ ಸಂಕಲ್ಪ ಮಾಡಿ ವೇದ ಪಂಡಿತರ ವೇದಘೋಷಗಳ ನಡುವೆ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಇತರೆಡೆಗಳಿಂದಲೂ ದಂಪತಿಗಳು ಆಗಮಿಸಿದ್ದರು. ಅರ್ಚಕರಾದ ವೆಂಕಟೇಶ್ ಮತ್ತು ರಾಮಪ್ರಕಾಶ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಫೌಂಡೇಷನ್ ಅಧ್ಯಕ್ಷ ಎ. ರಾಮಲಿಂಗಾರೆಡ್ಡಿ, ಕಾರ್ಯದರ್ಶಿ ನಂಗಲಿ ಸುಬ್ಬಣ್ಣ ಮಾಸ್ಟರ್, ಖಜಾಂಚಿ ಅರವಿಂದ್, ಕಾರ್ಯಾಧ್ಯಕ್ಷ ಆರ್.ಎಸ್. ಕೃಷ್ಣಯ್ಯಶೆಟ್ಟಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

